ಯುವತಿಯರನ್ನು ಕಿಡ್ನಾಪ್ ಮಾಡ್ತೀನಿ ಎಂದ ಶಾಸಕನಿಗೆ ಛೀಮಾರಿ ಹಾಕಿದ ಹುಡುಗಿ

ಬೆಂಗಳೂರು: ‘ಹುಡುಗಿ ನಿರಾಕರಿಸಿದರೆ ಕರೆ ಮಾಡಿ, ಕಿಡ್ನಾಪ್ ಮಾಡಿ ತಂದು ಕೊಡ್ತೀನಿ’ ಎಂದಿದ್ದ ಮುಂಬೈಯ ಘಟ್ಕೋಪರ್ ಕ್ಷೇತ್ರದ ಶಾಸಕ ರಾಮ್ ಕದಮ್ಗೆ ಛೀಮಾರಿ ಹಾಕಿರುವ ಪುಣೆಯ ಯುವತಿ ‘ನೀವು ಹೇಳಿದಂತೆ ಮಾಡಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾಳೆ.
ಪುಣೆಯ ಮೀನಾಕ್ಷಿ ಪಾಟೀಲ್ ಎಂಬುವವರು ಸಚಿವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಫೇಸ್ಬುಕ್ನಲ್ಲಿ ವೈರಲ್ ಆಗಿದ್ದು, 28 ಸಾವಿರ ಮಂದಿ ವೀಕ್ಷಿಸಿದ್ದಾರೆ. 351 ಮಂದಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ.
ರಾಮ್ ಕದಮ್ ವಿಡಿಯೋದಲ್ಲಿ ನೀಡಿರುವ ನಂಬರ್ಗೆ ಕರೆ ಮಾಡಿ ನೇರವಾಗಿ ಸವಾಲು ಹಾಕಲು ಸಾಧ್ಯವಾಗದಾಗ ಈ ವಿಡಿಯೊ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
‘ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡಿರುವ ರಾಮ್ ಕದಂ ಅವರನ್ನು ಸಾರ್ವಜನಿಕವಾಗಿ ಥಳಿಸಬೇಕು’ ಎಂದು ಮನೋಜ್ ಗುಪ್ತ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
‘ಈ ರೀತಿ ಮಾತನಾಡುವವರಿಗೆ ಬುದ್ಧಿ ಕಲಿಸಬೇಕೆಂದರೆ, ನಿಮ್ಮ ಹಾಗೆ ಎಲ್ಲಾ ಹುಡುಗಿಯರು ಧೈರ್ಯದಿಂದ ಮಾತನಾಡುವ ಹಾಗಾಗಬೇಕು’ ಎಂದು ರೇ ಆ್ಯಂಟೋನಿಯೊ ಹೇಳಿದ್ದಾರೆ.
‘ಬೇಟಿ ಬಚಾವೊ’ ಎನ್ನುವ ನಾಯಕರ ಕೆಳಗೆ ದ್ವೇಷ ಭಿತ್ತುವ ಭಾಷಣಗಳನ್ನು ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ’ ಎಂದು ಝಾಕಿರುಲ್ಲಾ ಎಂಬುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗೆ ಯುವತಿಗೆ ಬೆಂಬಲಿಸಿ 48 ಕಮೆಂಟ್ಗಳು ಬಂದಿದ್ದು, ತಮ್ಮಲ್ಲಿನ ಕೋಪವನ್ನು ಹೊರಗೆಡವಿದ್ದಾರೆ. ಶಾಸಕರ ಆ ರೀತಿಯ ಮಾತಿಗೆ ಈ ಹಿಂದೆಯೂ ಸಾಕಷ್ಟು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ವಿಡಿಯೊದಲ್ಲಿ ಏನು ಹೇಳಿದ್ದಾರೆ?
‘ನಾನು ಮೀನಾಕ್ಷಿ ಪಾಟೀಲ್ ಪುಣೆಯಿಂದ ಮಾತಾಡುತ್ತಿದ್ದೇನೆ. ಹುಡುಗಿಯನ್ನು ಕಿಡ್ನಾಪ್ ಮಾಡಿ ಕೊಡುತ್ತೀನಿ' ಎಂದು ನೀವು ಹೇಗೆ ಹೇಳಿದ್ರಿ? ನಾನು ನಿಮಗೊಂದು ಸವಾಲು ಹಾಕುತ್ತೇನೆ. ನಾನಿರುವಲ್ಲಿಗೆ ಬಂದು (ಇಲ್ಲ, ನಾನೇ ನೀವಿರುವ ಸ್ಥಳಕ್ಕೆ ಬರುತ್ತೇನೆ) ನೀವು ಅದೇನು ಹೇಳಿದ್ದಿರೊ ಅದನ್ನು ಮಾಡಿ. ಒಂದು ವೇಳೆ ನೀವು ಅದರಲ್ಲಿ ಯಶಸ್ಸು ಪಡೆದರೆ, ಮುಂದೆ ಪರಿಣಾಮ ಏನಾಗುತ್ತದೆ ಎನ್ನುವುದು ನಿಮಗೆ ತಿಳಿಯುತ್ತದೆ. ಹೆಣ್ಣನ್ನು ದೇವರೆಂದು ಕಾಣುವ ಮಹಾರಾಷ್ಟ್ರದಲ್ಲಿದ್ದುಕೊಂಡು ಹೀಗೆ ಯೋಚಿಸುತ್ತೀರಲ್ಲ, ನಿಮಗೆ ನಾಚಿಕೆ ಆಗೋಲ್ವ. ಈ ರೀತಿ ಮಾತಾಡುವ ನಿಮ್ಮಂತವರಿಗೆ ಮಹಾರಾಷ್ಟ್ರದಲ್ಲಿರಲು ಅವಕಾಶವಿಲ್ಲ. ವಿಡಿಯೊ ನೋಡಿ ಅನೇಕ ಬಾರಿ ಕರೆ ಮಾಡಿದ್ದೇನೆ. ಆದರೆ, ನೀವು ಮಾತಿಗೆ ಸಿಕ್ಕಿಲ್ಲ. ಈ ವಿಡಿಯೊ ನೋಡಿ ನೀವೇ ಕರೆ ಮಾಡಬೇಕು’
ಮಹಿಳಾ ಆಯೋಗ ನೋಟಿಸ್
ರಾಮ್ ಕದಮ್ ಅವರಿಗೆ ಮಹಾರಾಷ್ಟ್ರ ಮಹಿಳಾ ಆಯೋಗ ನೋಟಿಸ್ ನೀಡಿದ್ದು, ಎಂಟು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ವಿಷಯ ಕುರಿತು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡ ರಾಜ್ಯ ಮಹಿಳಾ ಆಯೋಗ, ಬುಧವಾರ ನೋಟಿಸ್ ನೀಡಿದೆ. ಗುರುವಾರ ಈ ಕುರಿತು ಅವರು ಕ್ಷಮೆ ಕೋರಿದ್ದಾರೆ. ‘ನನ್ನ ಹೇಳಿಕೆ ತಿರುಚಿ, ತಾಯಂದಿರು ಮತ್ತು ಸಹೋದರಿಯರ ಭಾವನೆಗಳಿಗೆ ಘಾಸಿ ಉಂಟುಮಾಡುವಂತಹ ಸ್ಥಿತಿಯನ್ನು ನನ್ನ ರಾಜಕೀಯ ವಿರೋಧಿಗಳು ಸೃಷ್ಟಿಸಿದ್ದಾರೆ. ಈಗಾಗಲೇ ಈ ಕುರಿತು ನಾನು ವಿಷಾದ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಕ್ಷಮೆ ಕೋರುತ್ತಿದ್ದೇನೆ’ ಎಂದು ಕದಮ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.