ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ಗೆ ವಯಸ್ಸಿನ ತಪ್ಪು ಮಾಹಿತಿ

ತಮಿಳುನಾಡಿನ ಚಂದಿರಾ ಸುಂದರಂ ಹೇಳಿಕೆ
Last Updated 20 ಜನವರಿ 2019, 20:15 IST
ಅಕ್ಷರ ಗಾತ್ರ

ಚೆನ್ನೈ: ‘ಶಬರಿಮಲೆ ಪ್ರವೇಶಿಸಿದ ಮಹಿಳೆಯರ ಪಟ್ಟಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಕೇರಳ ಸರ್ಕಾರ ನನ್ನ ವಯಸ್ಸನ್ನು 48 ವರ್ಷ ಎಂಬುದಾಗಿ ತಪ್ಪು ಮಾಹಿತಿ ನೀಡಿದೆ’ ಎಂದು ತಮಿಳುನಾಡಿನ ತಿರುವಣ್ಣಾಮಲೈನ ಚಂದಿರಾ ಸುಂದರಂ ಎಂಬ ಮಹಿಳೆ ಹೇಳಿದ್ದಾರೆ.

‘ನನ್ನ ವಯಸ್ಸು 62 ವರ್ಷ. ಆದರೆ, ಮುಟ್ಟಾಗುವ ವಯೋಮಾನದ 51 ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಿದ್ದಾರೆ ಎಂದು ಕೇರಳ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ನನ್ನ ಹೆಸರನ್ನು ಸಹ ತಪ್ಪಾಗಿ ಸೇರಿಸಲಾಗಿದೆ’ ಎಂದು ತಮಿಳು ವಾಹಿನಿಯೊಂದಕ್ಕೆ ಭಾನುವಾರ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

‘ನಾನು ಜನಿಸಿದ ವರ್ಷವನ್ನು ಆಧಾರ್‌ ಕಾರ್ಡ್‌ನಲ್ಲಿ 1970 ಎಂದು ತಪ್ಪಾಗಿ ಮುದ್ರಿಸಲಾಗಿದೆ. ಹೀಗಾ
ಗಿಯೇ ನನ್ನ ಹೆಸರನ್ನು ಸಹ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪಟ್ಟಿಯಲ್ಲಿ ಸೇರಿಸಿರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನಾನು 54 ವರ್ಷದಳಾದಾಗಿನಿಂದಲೂ ಶಬರಿಮಲೆ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ’ ಎಂದು ಅವರು ಹೇಳಿದರು.

‘ಧಾರ್ಮಿಕ ಪದ್ಧತಿಗಳನ್ನು ರಕ್ಷಿಸಿ’: ‘ದೇವಸ್ಥಾನಗಳಲ್ಲಿ ಆಚರಿಸುವ ವಿಧಿಗಳನ್ನು ಹಾಗೂ ಆಚರಣೆಯಲ್ಲಿರುವ ನಂಬಿಕೆಗಳನ್ನು ಗೌರವಿಸಿ, ಸಂರಕ್ಷಿಸುವುದು ಅಗತ್ಯ’ ಎಂದು ಆಧ್ಯಾತ್ಮಿಕ ಗುರು ಮಾತಾ ಅಮೃತಾನಂದಮಯಿ ಪ್ರತಿಪಾದಿಸಿದ್ದಾರೆ.

ತಿರುವನಂತಪುರದಲ್ಲಿ ಭಾನುವಾರ ನಡೆದ ಅಯ್ಯಪ್ಪ ಭಕ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇವಾಲಯಗಳು ನಮ್ಮ ಸಂಸ್ಕೃತಿಯ ಆಧಾರಸ್ತಂಭಗಳು. ಹೀಗಾಗಿ ದೇವಾಲಯಗಳು, ಅಲ್ಲಿನ ಆಚರಣೆಗಳನ್ನು ಸಂರಕ್ಷಿಸಬೇಕು’ ಎಂದು ಹೇಳಿದರು.

ಶಬರಿಮಲೆ ದೇವಸ್ಥಾನ ಬಂದ್

ತಿರುವನಂತಪುರ: ಮುಟ್ಟಾಗುವ ವಯಸ್ಸಿನ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಭಟನೆಗಳಿಗೆ ಸಾಕ್ಷಿಯಾದ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇವಸ್ಥಾನವನ್ನು ಭಾನುವಾರ ಮುಚ್ಚಲಾಯಿತು. ಅಯ್ಯಪ್ಪ ವ್ರತಧಾರಿಗಳಿಂದ ಕಳೆದ ಎರಡು ತಿಂಗಳು ಕಾಲ ವಿವಿಧ ಪೂಜೆ–ಪುನಸ್ಕಾರ, ಧಾರ್ಮಿಕ ವಿಧಿಗಳು ನೆರವೇರಿದ ನಂತರ ಭಾನುವಾರ ವಿಧ್ಯುಕ್ತವಾಗಿ ದೇವಸ್ಥಾನವನ್ನು ಬಂದ್‌ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT