ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಗೋವಾ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ

Last Updated 19 ನವೆಂಬರ್ 2018, 19:38 IST
ಅಕ್ಷರ ಗಾತ್ರ

ಪಣಜಿ: ಭಾರತದ 49ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಆತಿಥ್ಯಕ್ಕೆ ಗೋವಾ ರಾಜಧಾನಿ ಪಣಜಿ ಸಜ್ಜಾಗಿದೆ. ನ.20 ರಿಂದ 28ರವರೆಗೆ ಎಂಟು ದಿನಗಳ ಕಾಲ ಭಾರತವೂ ಸೇರಿದಂತೆ ಜಗತ್ತಿನ 68 ದೇಶಗಳ 200ಕ್ಕೂ ಹೆಚ್ಚು ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

ಇದು ಗೋವಾದಲ್ಲಿ ನಡೆಯುತ್ತಿರುವ 15ನೇ ಚಿತ್ರೋತ್ಸವ. ಚಿತ್ರೋತ್ಸವದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು ಪಣಜಿ ಹೊರವಲಯದಲ್ಲಿರುವ ಗೋವಾ ಯೂನಿವರ್ಸಿಟಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಪಣಜಿಯ ಐನಾಕ್ಸ್‌ ಚಿತ್ರಮಂದಿರ ಮತ್ತು ಕಲಾ ಅಕಾಡೆಮಿಯ ಒಟ್ಟು ಏಳು ತೆರೆಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

20ರಂದು (ಮಂಗಳವಾರ) ಸಂಜೆ ಚಿತ್ರೋತ್ಸವ ಸಾಂಕೇತಿಕವಾಗಿ ಉದ್ಘಾಟನೆಗೊಳ್ಳಲಿದೆ. ಭಾರತೀಯ ಸಿನಿಮಾದ ಹೆಜ್ಜೆ ಗುರುತುಗಳನ್ನು ನೆನಪಿಸುವ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಚಿತ್ರೋತ್ಸವದ ಉದ್ಘಾಟನೆಯನ್ನು ಘೋಷಿಸುವರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನಸಿಂಗ್‌ ರಾಥೋಡ್‌, ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹ, ಗೋವಾದ ಹಿರಿಯ ಸಚಿವ ಸುದೀನ್‌ ಧವಳೀಕರ್ ಉಪಸ್ಥಿತರಿರುವರು.

ಉದ್ಘಾಟನೆಯ ನಂತರ ಜೂಲಿಯನ್‌ ಲ್ಯಾಂಡಿಸ್‌ ನಿರ್ದೇಶನದ ಇಂಗ್ಲಿಷ್‌ ಚಿತ್ರ ‘ದಿ ಆಸ್ಪೆರ್ನ್ ಪೇಪರ್ಸ್’ ಪ್ರದರ್ಶನಗೊಳ್ಳಲಿದೆ.

ಚಿತ್ರೋತ್ಸವದ ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಮೂರು ಭಾರತೀಯ ಸಿನಿಮಾಗಳೂ ಸೇರಿದಂತೆ 15 ಸಿನಿಮಾಗಳ ನಡುವೆ ಸ್ವರ್ಣ ಮಯೂರ ಪುರಸ್ಕಾರಕ್ಕೆ ಪೈಪೋಟಿ ನಡೆಯಲಿದೆ.

ಭಾರತೀಯ ಪನೋರಮಾ ವಿಭಾಗದಲ್ಲಿ ಬಾಲಿವುಡ್‌ನ ನಾಲ್ಕು ಮುಖ್ಯವಾಹಿನಿ ಸಿನಿಮಾಗಳಲ್ಲದೆ ಭಾರತೀಯ ಭಾಷೆಗಳ 22 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ವಿಭಾಗದಲ್ಲಿ ಮಲಯಾಳಂ ಮತ್ತು ಬಂಗಾಳಿ ಸಿನಿಮಾಗಳದ್ದೇ ಸಿಂಹಪಾಲು. ಆರು ಮಲಯಾಳಂ, ಐದು ಬಂಗಾಳಿ ಚಿತ್ರಗಳಲ್ಲದೆ, ನಾಲ್ಕು ತಮಿಳು, ಮರಾಠಿ ಮತ್ತು ಹಿಂದಿಯ ತಲಾ ಎರಡು ಹಾಗೂ ತುಳು, ಲಡಾಕಿ, ಜಾಸ್‌ರಿ ಭಾಷೆಗಳ ತಲಾ ಒಂದೊಂದು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಪ್ರಸಿದ್ಧ ನಿರ್ದೇಶಕ ಶಾಜಿ ಎನ್‌.ಕರುಣ್‌ ನಿರ್ದೇಶನದ ಮಲಯಾಳಂ ಚಿತ್ರ ‘ಒಳು’ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳುತ್ತಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ನಿಧನರಾದ ಭಾರತೀಯ ಚಿತ್ರರಂಗದ ನಟರಾದ ವಿನೋದ್‌ ಖನ್ನಾ, ಶಶಿಕಪೂರ್‌, ನಟಿ ಕಲ್ಪನಾ ಲಾಝ್ಮಿ, ಬಹು ಭಾಷಾ ತಾರೆ ಶ್ರೀದೇವಿ, ತಮಿಳು ಚಿತ್ರಸಾಹಿತಿ ಹಾಗೂ ರಾಜಕಾರಣಿ ಎಂ.ಕರುಣಾನಿಧಿ ಅವರ ಚಿತ್ರಗಳನ್ನು ಪ್ರದರ್ಶನಗೊಳಿಸುವ ಮೂಲಕ ಚಿತ್ರೋತ್ಸವ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT