ಶಿವಮೊಗ್ಗ: ಅಡಿಕೆ ಬೆಳೆಗಾರರ ಹೆಸರಿನಲ್ಲಿ ಬಿಜೆಪಿ ತೀರ್ಥಹಳ್ಳಿಯಲ್ಲಿ ಸುಳ್ಳು ಸಮಾವೇಶ ನಡೆಸಿ, ರೈತರನ್ನು ವಂಚಿಸಿದೆ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.
ಅವರದೇ ಪಕ್ಷದ ಕೇಂದ್ರ ಸಚಿವರು ಅಡಿಕೆ ಹಾನಿಕರ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾನಿಕರ ಅಲ್ಲ ಎನ್ನುತ್ತಾರೆ. ಸ್ವಾರ್ಥಕ್ಕಾಗಿ ರೈತರ ಹೆಸರು ಬಳಕೆ ಮಾಡಿಕೊಳ್ಳುವ ರಾಷ್ಟ್ರೀಯ ಪಕ್ಷಗಳು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ದ್ರೋಹ ಎಸಗಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.
ಶಿಕಾರಿಪುರಕ್ಕೆ ಕುಮಾರಸ್ವಾಮಿ: ‘ಏಪ್ರಿಲ್ 5ರಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬರುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಳಿಗಾರ್ ಪರ ಚುನಾವಣಾ ಪ್ರಚಾರ ನಡೆಸುವರು. ಎಲ್ಲ ಕ್ಷೇತ್ರಗಳಲ್ಲೂ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ’ ಎಂದು ವಿವರ ನೀಡಿದರು.
ಈಗಾಗಲೇ ಜೆಡಿಎಸ್ 126 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಘೋಷಣೆ ಮಾಡಿರುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ವಿರೋಧಿ ನೀತಿ ಅನುಸರಿಸುತ್ತಿವೆ. ಮೆಣಸಿಗೆ ಬೆಂಬಲ ಬೆಲೆ ನೀಡುವ ಬದಲು ಆಮದಿಗೆ ಒತ್ತು ನೀಡಲಾಗುತ್ತಿದೆ. ಮೋದಿ ಚುನಾವಣಾ ಗಿಮಿಕ್ ಬಿಟ್ಟು ರಾಜ್ಯದ ಜನರ ಹಿತ ಕಾಪಾಡಬೇಕು ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್. ನಿರಂಜನ್, ಮೇಯರ್ ನಾಗರಾಜ್ ಕಂಕಾರಿ, ಮಾಜಿ ಮೇಯರ್ ಎನ್. ಏಳುಮಲೈ, ಮುಖಂಡರಾದ ಜಿ.ಡಿ. ಮಂಜುನಾಥ್, ತ್ಯಾಗರಾಜ್ ಉಪಸ್ಥಿತರಿದ್ದರು.
**
ಸೋತವರ ಮಾತಿಗೆ ಉತ್ತರ ಅನಗತ್ಯ
ಸೋತವರ ಮಾತಿಗೆ ಉತ್ತರ ನೀಡುವ ಅಗತ್ಯವಿಲ್ಲ. ಕುಟುಂಬದ ವಿಷಯ ಕುರಿತು ಮಾತನಾಡುವುದಿಲ್ಲ. ಕೆಲವರಿಗೆ ಅಮವಾಸ್ಯೆ ಬಂದಾಗ ತಲೆ ಕೆಡುತ್ತದೆ ಎಂದು ಕುಮಾರ್ ಬಂಗಾರಪ್ಪ ವಿರುದ್ಧ ಮಧು ಬಂಗಾರಪ್ಪ ಹರಿಹಾಯ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.