ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್‌: ಕೊರೊನಾ ಪೀಡಿತರನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಿದ ಆರೋಪ

ಆರೋಪ ಅಲ್ಲಗಳೆದ ಸರ್ಕಾರ
Last Updated 15 ಏಪ್ರಿಲ್ 2020, 9:55 IST
ಅಕ್ಷರ ಗಾತ್ರ

ಅಹಮದಾಬಾದ್: ಇಲ್ಲಿನ ಅಸರ್ವಾದಲ್ಲಿರುವ ಸಿವಿಲ್ ಆಸ್ಪತ್ರೆಯ ಅಧಿಕಾರಿಗಳು ಕೊರೊನಾ ಸೋಂಕಿತರನ್ನು ಹಿಂದೂ, ಮುಸ್ಲಿಂ ಎಂದು ಪ್ರತ್ಯೇಕಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮೂರು ದಿನಗಳ ಹಿಂದೆ ರೋಗಿಗಳನ್ನು ಈ ರೀತಿ ಪ್ರತ್ಯೇಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ಆರೋಪ ಆಧಾರರಹಿತವಾದದ್ದು ಎಂದು ಗುಜರಾತ್ ಸರ್ಕಾರ ಹೇಳಿದೆ.

ಕೊರೊನಾ ಚಿಕಿತ್ಸೆಗೆಂದು ಸಿವಿಲ್ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ವಿಶೇಷ ವ್ಯವಸ್ಥೆ ಇತ್ತೀಚೆಗೆ ಕಲ್ಪಿಸಲಾಗಿದೆ.

‘ಸರ್ಕಾರ ಕೈಗೊಂಡಿರುವ ನಿರ್ಧಾರದ ಮೇರೆಗೇ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಹೆಚ್ಚೇನನ್ನೂ ನಾನು ಹೇಳುವುದಿಲ್ಲ. ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ’ ಎಂದು ಮೆಡಿಕಲ್ ಸುಪರಿಂಟೆಂಡೆಂಟ್ ಜಿ.ಎಚ್.ರಾಥೋಡ್ ಅವರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

‘ಈ ಕುರಿತು ನನಗೇನೂ ಮಾಹಿತಿ ಇಲ್ಲ. ಈ ರೀತಿಯ ಕೆಲಸ ಮಾಡಲು ರಾಜ್ಯ ಸರ್ಕಾರದಿಂದ ಯಾವುದೇ ನಿರ್ದೇಶ ಬಂದಿಲ್ಲ’ ಎಂದು ಅಹಮದಾಬಾದ್ ಜಿಲ್ಲಾಧಿಕಾರಿ ಕೆ.ಕೆ.ನಿರಾಳ ಹೇಳಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಉಪ ಮುಖ್ಯಮಂತ್ರಿ, ಆರೋಗ್ಯ ಸಚಿವರೂ ಆಗಿರುವ ನಿತಿನ್ ಪಟೇಲ್ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರೊಬ್ಬರನ್ನು ಮಾತನಾಡಿಸಿದಾಗ, ‘ಎರಡು ದಿನಗಳ ಹಿಂದೆ ರಾತ್ರಿ 11 ಗಂಟೆಗೆ ನಮ್ಮ ಸ್ಥಳ ಬದಲಾಯಿಸಲು ಸೂಚಿಸಿದ್ದರು. ಕಾರಣ ಹೇಳಿರಲಿಲ್ಲ. ಕೇವಲ ಮುಸ್ಲಿಂ ಪುರುಷರು ಮತ್ತು ಮಹಿಳೆಯರನ್ನು ಮಾತ್ರ ಬದಲಾಯಿಸಿದ್ದರು ಎಂಬುದು ಬಳಿಕ ನಮಗೆ ತಿಳಿಯಿತು’ ಎಂದು ಹೇಳಿದ್ದಾರೆ.

ಅನಗತ್ಯ ಸುತ್ತಾಡಿದ್ದಕ್ಕೆ ಕ್ರಮ ಎಂದ ಅಧಿಕಾರಿ: ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಚ್ಚಿನ ಕೊರೊನಾ ಸೋಂಕಿತರು ಇತರ ವಾರ್ಡ್‌ಗಳ ಎದುರು ಸುತ್ತಾಡುತ್ತಾರೆ, ಸಂಬಂಧಿಕರನ್ನು ಕರೆಸಿಕೊಳ್ಳುತ್ತಾರೆ ಎಂದು ಕೆಲವು ವೈದ್ಯರು ಮತ್ತು ಶುಶ್ರೂಷಕಿಯರು ದೂರು ನೀಡಿದ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ಗಮನಿಸಿದ ಬಳಿಕ ಸೋಂಕಿತರ ಚಟುವಟಿಕೆಗಳನ್ನು ನಿರ್ಬಂಧಿಸಲು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮಲ್ಲಿ ಮೂರರಿಂದ ನಾಲ್ಕರಷ್ಟು ಡಜನ್ ಶಂಕಿತ ಪ್ರಕರಣಗಳು ದಾಖಲಾಗಿವೆ. ಕೊರೊನಾ ಪೀಡಿತರ ಅನಗತ್ಯ ಸುತ್ತಾಟದಿಂದಾಗಿ ಸೋಂಕು ಹರಡುವ ಅಪಾಯ ಹೆಚ್ಚಿದೆ. ಈ ನಿರ್ಧಾರಕ್ಕೆ ಅವರ ನಂಬಿಕೆಗಳ ಜತೆ ಯಾವುದೇ ಸಂಬಂಧವಿಲ್ಲ’ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಧರ್ಮದ ಆಧಾರದಲ್ಲಿ ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಲಾಗಿದೆ ಎಂಬ ಆರೋಪವನ್ನು ರಾಜ್ಯ ಸರ್ಕಾರ ಅಲ್ಲಗಳೆದಿದೆ. ಈ ಕುರಿತು ಆರೋಗ್ಯ ಸಚಿವಾಲಯದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ.

‘ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಬೇರೆ–ಬೇರೆ ಧರ್ಮಗಳ ರೋಗಿಗಳನ್ನು ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಲಾಗಿದೆ ಎಂಬ ವರದಿಗಳು ಗಮನಕ್ಕೆ ಬಂದಿವೆ, ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ’ ಎಂದು ಆರೋಗ್ಯ ಸಚಿವಾಲಯದ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಆರೋಗ್ಯ ಸ್ಥಿತಿ, ಸೋಂಕಿನ ತೀವ್ರತೆ, ವಯಸ್ಸಿನ ಆಧಾರಲ್ಲಿ ಹಾಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕ ವಾರ್ಡ್‌ಗಳಲ್ಲಿ ರೋಗಿಗಳನ್ನು ಇರಿಸಲಾಗುತ್ತಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ತಪ್ಪು ಮಾಹಿತಿಯಿಂದ ಕೂಡಿದ್ದಾಗಿದೆ’ ಎಂದೂ ಟ್ವೀಟ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT