ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಪ್ರಾಧ್ಯಾಪಕರ ನೇಮಕ ವಿವಾದಕ್ಕೆ ಸರ್ಕಾರವೇ ಹೊಣೆ: ಬಿಎಸ್‌ಪಿ

ಸಂಸ್ಕೃತ ವಿಭಾಗಕ್ಕೆ ಮುಸ್ಲಿಂ ಪ್ರಾಧ್ಯಾಪಕರ ನೇಮಕ
Last Updated 21 ನವೆಂಬರ್ 2019, 17:06 IST
ಅಕ್ಷರ ಗಾತ್ರ

ಲಖನೌ: ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ಸಂಸ್ಕೃತ ಬೋಧಿಸಲು ಮುಸ್ಲಿಂ ಪ್ರಾಧ್ಯಾಪಕರನ್ನು ನೇಮಿಸಿದ ವಿಷಯ ವಿವಾದವಾಗಿರುವುದಕ್ಕೆ ಸರ್ಕಾರವೇ ಕಾರಣ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ದೂಷಿಸಿದ್ದಾರೆ.

‘ಶಿಕ್ಷಣ ಮತ್ತು ಧರ್ಮ ರಾಜಕಾರಣ ಅಥವಾ ಜಾತಿಗೆ ಸಂಬಂಧ ಕಲ್ಪಿಸಬಾರದು. ನೇಮಕಾತಿ ಸಂಬಂಧ ಸರ್ಕಾರ ಅನಿಶ್ಚಿತ ಧೋರಣೆ ತೋರುತ್ತಿರುವುದರಿಂದಲೇ, ವಿವಾದಕ್ಕೆ ಅನಗತ್ಯ ಪ್ರಾಮುಖ್ಯತೆ ನೀಡಿದಂತಾಗುತ್ತಿದೆ’ ಎಂದು ಮಾಯಾವತಿ ಗುರುವಾರ ಟ್ವೀಟ್ ಮಾಡಿದ್ದಾರೆ.

‘ಸಂಸ್ಕೃತ ವಿಭಾಗಕ್ಕೆ ಹೆಚ್ಚು ಸೂಕ್ತ ಎನಿಸಿದ ಮುಸ್ಲಿಂ ಸಂಸ್ಕೃತ ಪ್ರಾಧ್ಯಾಪಕರನ್ನು ನೇಮಿಸಿದ ಬಿಎಚ್‌ಯು, ಪ್ರತಿಭೆಗೆ ತಕ್ಕ ಮನ್ನಣೆ ನೀಡಿದೆ ಎನ್ನುವುದನ್ನು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಅನೈತಿಕ ಎನಿಸುವಂತಹ ಯಾವುದೇ ನಿಲುವು ತೋರಲು ಯಾರಿಗೂ ಅವಕಾಶ ನೀಡಬಾರದು’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಪಿಎಚ್‌.ಡಿ ಪಡೆದಿರುವ ಸಂಸ್ಕೃತ ವಿದ್ವಾಂಸ ಫಿರೋಜ್ ಖಾನ್ ಅವರನ್ನು ಸಂಸ್ಕೃತ ಸಾಹಿತ್ಯ ವಿಭಾಗಕ್ಕೆ ನೇಮಿಸಿ ಬಿಎಚ್‌ಯು ಆದೇಶ ಹೊರಡಿಸಿತ್ತು. ವಿದ್ಯಾರ್ಥಿಗಳು ಇದನ್ನು ವಿರೋಧಿಸಿ ವಾರಾಣಸಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಎಲ್ಲರಿಗೂ ಸಮಾನ ಅವಕಾಶ: ಮುಸ್ಲಿಂ ಪ್ರಾಧ್ಯಾಪಕರ ನೇಮಕಾತಿಯನ್ನು ಬಿಎಚ್‌ಯು ಸಮರ್ಥಿಸಿಕೊಂಡಿದೆ.

‘ಸಂದರ್ಶನಕ್ಕೆ ಹಾಜರಾದವರಲ್ಲಿ, ಹುದ್ದೆಗೆ ಹೆಚ್ಚು ಸೂಕ್ತರಾದವರನ್ನು ಕುಲಪತಿ ರಾಕೇಶ್ ಭಟ್ನಾಗರ್ ನೇತೃತ್ವದ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು. ಯುಜಿಸಿ ನಿಯಮಾವಳಿಗೆ ಅನುಸಾರವಾಗಿ ಈ ಆಯ್ಕೆ ಮಾಡಲಾಗಿದೆ. ಧರ್ಮ, ಜಾತಿ, ಸಮುದಾಯದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶ ನೀಡಲು ಆಡಳಿತ ಮಂಡಳಿ ಬದ್ಧವಾಗಿದೆ’ ಎಂದು ಬಿಎಚ್‌ಯು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT