ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪ್ರಯಾಣಿಕರಿಗೆ ಕಹಿ ಸುದ್ದಿ: ಶೀಘ್ರವೇ ಹೆಚ್ಚಲಿದೆ ಪ್ರಯಾಣ ದರ

ಸರಕು ಸಾಗಾಣಿಕೆಯ ದರ ಹೆಚ್ಚಳಕ್ಕೂ ಚಿಂತನೆ
Last Updated 27 ಡಿಸೆಂಬರ್ 2019, 2:38 IST
ಅಕ್ಷರ ಗಾತ್ರ

ನವದೆಹಲಿ:ಹೆಚ್ಚುತ್ತಿರುವ ವೆಚ್ಚ ಮತ್ತು ಕಡಿಮೆಯಾಗುತ್ತಿರುವ ಆದಾಯದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಭಾರತೀಯ ರೈಲ್ವೆ ಈಗ ಪ್ರಯಾಣ ಮತ್ತು ಸರಕು ಸಾಗಾಣಿಕೆ ದರಗಳನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

‘ಪ್ರಯಾಣ ಮತ್ತು ಸರಕು ಸಾಗಾಣಿಕೆ ದರಗಳನ್ನು ಶೀಘ್ರ ಪ್ರಕಟಿಸುತ್ತೇವೆ.ಆದರೆ, ಈ ಬಗ್ಗೆ ಹೆಚ್ಚಿನ ವಿವರ ನೀಡುವುದಿಲ್ಲ. ಇದೊಂದು ಸೂಕ್ಷ್ಮ ವಿಷಯ. ಸರಕು ಸಾಗಾಣಿಕೆ ದರಗಳು ಈಗಾಗಲೇ ದುಬಾರಿಯಾಗಿವೆ. ಹೀಗಾಗಿ, ರಸ್ತೆ ಮೂಲಕ ಸಾಗುವ ಸರಕುಗಳನ್ನು ರೈಲ್ವೆ ಮೂಲಕ ಸಾಗಿಸುವಂತೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್‌ ತಿಳಿಸಿದ್ದಾರೆ.

‘ದರಗಳನ್ನು ಹೆಚ್ಚಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಅಮೂಲಾಗ್ರವಾಗಿ ಚರ್ಚೆ ನಡೆಯುವುದು ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ರೈಲ್ವೆ ಇಲಾಖೆ ಎಲ್ಲ ವರ್ಗದ ಪ್ರಯಾಣ ದರಗಳನ್ನು ಪ್ರತಿ ಕಿಲೋ ಮೀಟರ್‌ಗೆ5 ಪೈಸೆಯಿಂದ 40 ಪೈಸೆಯವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನುವ ವದಂತಿ ಹಬ್ಬಿತ್ತು. ಇದೇ ವೇಳೆ, ಸರಕು ಸಾಗಾಣಿಕೆ ದರಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಯಾದವ್ ಹೇಳಿಕೆ ಮೂಡಿಬಂದಿದೆ.

ಪ್ರಸಕ್ತ ಹಣಕಾಸು ವರ್ಷದ ಕೊನೆಯ ವೇಳೆಗೆ ಭಾರತೀಯ ರೈಲ್ವೆಯು ಸುಮಾರು ₹ 20 ಸಾವಿರ ಕೋಟಿಯಷ್ಟು ಆದಾಯ ಕೊರತೆ ಎದುರಿಸಲಿದೆ. ಹೆಚ್ಚುತ್ತಿರುವ ವೆಚ್ಚ ಮತ್ತು ಆದಾಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ದೀರ್ಘಾವಧಿಯ ಪರಿಹಾರವಾಗಿ ದರ ಹೆಚ್ಚಳ ಕ್ರಮ ಕೈಗೊಳ್ಳುವ ಚಿಂತನೆ ನಡೆಸಲಾಗಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೂನ್‌ 25ರಂದು ದರಗಳನ್ನು ಹೆಚ್ಚಿಸಲಾಗಿತ್ತು. ಆಗ ಪ್ರಯಾಣ ದರಗಳನ್ನು ಶೇಕಡ 14.2 ಮತ್ತು ಸರಕು ಸಾಗಾಣಿಕೆ ದರಗಳನ್ನು ಶೇಕಡ 6.5ರಷ್ಟು ಹೆಚ್ಚಿಸಲಾಗಿತ್ತು. ಆದರೆ, ಅದು ಎನ್‌ಡಿಎ ಸರ್ಕಾರದ್ದೇ ನಿರ್ಧಾರವಾಗಿರಲಿಲ್ಲ. ಹಿಂದಿನ ಯುಪಿಎ ಸರ್ಕಾರದಲ್ಲಿ ಅನುಮೋದನೆ ದೊರೆತ ಪ್ರಸ್ತಾವವನ್ನು ಹೊಸ ಸರ್ಕಾರ ಜಾರಿಮಾಡಿತ್ತು. ಇದೀಗ ಸುಮಾರು ಐದು ವರ್ಷಗಳ ಬಳಿಕ ದರ ಹೆಚ್ಚಳಕ್ಕೆ ಎನ್‌ಡಿಎ ಸರ್ಕಾರ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT