ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನ ತ್ವರಿತ

7
ಭ್ರಷ್ಟರಿಗೆ ಮಾತ್ರ ಚೌಕೀದಾರನ ಬಗ್ಗೆ ಭಯ: ಮೋದಿ ವಾಗ್ದಾಳಿ

ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನ ತ್ವರಿತ

Published:
Updated:
Prajavani

ಕುರುಕ್ಷೇತ್ರ, ಹರಿಯಾಣ: ದೇಶದಿಂದ ಭ್ರಷ್ಟಾಚಾರ ತೊಡೆದುಹಾಕುವ ಅಭಿಯಾನವನ್ನು ಕೇಂದ್ರ ಸರ್ಕಾರ ಇನ್ನಷ್ಟು ಚುರುಕುಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. 

ಸ್ವಚ್ಛ ಭಾರತ ಅಭಿಯಾನದಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಮಹಿಳೆಯರನ್ನು ಗುರುತಿಸುವ ‘ಸ್ವಚ್ಛ ಶಕ್ತಿ 2019’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಇದಕ್ಕಾಗಿ ಜನರ ಬೆಂಬಲ ಕೋರಿದರು.

‘2014ರಲ್ಲಿ ನೀವು ಪಾರದರ್ಶಕ ಹಾಗೂ ನಿಷ್ಠ ಸರ್ಕಾರವನ್ನು ಆರಿಸಿದ್ದೀರಿ. ಮಧ್ಯವರ್ತಿಗಳನ್ನು ಹಾಗೂ ಬಡವರ ಹಕ್ಕುಗಳನ್ನು ಕಬಳಿಸಿದ್ದ ಜನರನ್ನು ವ್ಯವಸ್ಥೆಯಿಂದ ಹೊರನೂಕಲು ನೆರವಾಗಿದ್ದೀರಿ’ ಎಂದು ಮೋದಿ ಸ್ಮರಿಸಿದರು. 

‘ದೇಶದ ಪ್ರತಿ ಪ್ರಾಮಾಣಿಕ ವ್ಯಕ್ತಿಯೂ ಈ ಚೌಕೀದಾರನನ್ನು ನಂಬಿದ್ದಾರೆ. ಆದರೆ ಭ್ರಷ್ಟರಿಗೆ ಮೋದಿಯನ್ನು ಕಂಡರೆ ಆಗುತ್ತಿಲ್ಲ’ ಎಂದು ಪ್ರಧಾನಿ ಹೇಳಿದರು. 

‘ಹರಿಯಾಣದ ಕೆಲ ವ್ಯಕ್ತಿಗಳು ಅವರ ವಿರುದ್ಧ ನಡೆಯುತ್ತಿರುವ ತನಿಖೆಯಿಂದ ಚಿಂತಿತರಾಗಿದ್ದಾರೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಮೋದಿ ಚುಚ್ಚಿದರು. ರಾಹುಲ್ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ತನಿಖೆ ನಡೆಯುತ್ತಿದೆ.  

ವಿರೋಧ ಪಕ್ಷಗಳು ಸೇರಿ ರಚಿಸಿಕೊಂಡಿರುವ ‘ಮಹಾಘಟಬಂಧನ’ವನ್ನು ‘ಮಹಾ ಕಲಬೆರಕೆ’ ಎಂದು ಲೇವಡಿ ಮಾಡಿದ ಮೋದಿ, ಇದರಲ್ಲಿರುವ ಎಲ್ಲರೂ ತನಿಖಾ ಸಂಸ್ಥೆಗಳನ್ನು, ನ್ಯಾಯಾಲಯಗಳನ್ನು ಹಾಗೂ ಮೋದಿಯನ್ನು ಬೆದರಿಸುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಈ ಚೌಕೀದಾರನನ್ನು ಯಾರೂ ಬೆದರಿಸಲಾಗದು. ಯಾರ ಬೆದರಿಕೆ, ನಿಂದನೆಗಳಿಗೂ ಅಂಜುವುದಿಲ್ಲ. ದೇಶವನ್ನು ಸ್ವಚ್ಛಗೊಳಿಸುವ ನಮ್ಮ ಅಭಿಯಾನ ಮುಂದುವರಿಯಲಿದೆ, ಇದಕ್ಕೆ ನಿಮ್ಮ ಸಹಕಾರ ಬೇಕು’ ಎಂದು ಹೇಳಿದರು.

10 ವರ್ಷದ ಬಳಿಕ ಮೋದಿ–ನಿತೀಶ್ ಜಂಟಿ ರ್‍ಯಾಲಿ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಬಳಿಕ ಮೊದಲ ಬಾರಿಗೆ ಜಂಟಿ ರ್‍ಯಾಲಿ ನಡೆಸಲಿದ್ದು, ಮಾರ್ಚ್ 3ರಂದು ಚುನಾವಣಾ ಪ್ರಚಾರಕ್ಕೆ ಬಿಹಾರದಲ್ಲಿ ಚಾಲನೆ ನೀಡಲಿದ್ದಾರೆ. 

ಇಬ್ಬರೂ ನಾಯಕರು ಸರ್ಕಾರಿ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರೂ, ಚುನಾವಣಾ ರ್‍ಯಾಲಿಯನ್ನು ಒಟ್ಟಿಗೇ ನಡೆಸಿ ದಶಕವೇ ಕಳೆದಿದೆ. 

2009ರ ಲೋಕಸಭಾ ಚುನಾವಣೆ ವೇಳೆ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ನಿತೀಶ್ ಜೊತೆ ಸಮಾರಂಭದಲ್ಲಿ ಭಾಗಿಯಾಗಿದ್ದರು. 2010ರ ಬಳಿಕ ಇಬ್ಬರ ನಡುವೆ ಮನಸ್ತಾಪಗಳು ಶುರುವಾಗಿದ್ದವು. ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದಕ್ಕೆ ಎನ್‌ಡಿಎ ತೊರೆದಿದ್ದ ನಿತೀಶ್, 2017ರಲ್ಲಿ ಮೈತ್ರಿಕೂಟಕ್ಕೆ ಮತ್ತೆ ವಾಪಸಾಗಿದ್ದರು. 

ಅಣ್ಣ ಮದುವೆಯಾಗಿಲ್ಲ, ಹೀಗಾಗಿ ತಂಗಿ ಬಂದಿದ್ದಾಳೆ: ಅಮಿತ್‌ ಶಾ

ಗೋಧ್ರಾ: ‘ಅಣ್ಣ (ರಾಹುಲ್ ಗಾಂಧಿ) ಮದುವೆಯಾಗದ ಕಾರಣ ತಂಗಿ  (ಪ್ರಿಯಾಂಕಾ ಗಾಂಧಿ) ಬಂದಿದ್ದಾಳೆ’ – ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಪ್ರವೇಶವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದು ಹೀಗೆ.

‘ಕಾಂಗ್ರೆಸ್‌ ಪಕ್ಷದಲ್ಲಿ ಪ್ರಧಾನಿ ಸ್ಥಾನವನ್ನು ‘ಹುಟ್ಟಿನಿಂದಲೇ’ ಕಾಯ್ದಿರಿಸಲಾಗಿದೆ. ಪಕ್ಷದ ಯಾವೊಬ್ಬ ಕಾರ್ಯಕರ್ತನೂ ಈ ಉನ್ನತ ಹುದ್ದೆಗೆ ಏರುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ’ ಎಂದು ಶಾ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯಲ್ಲಿ ಉನ್ನತ ಹುದ್ದೆಗೆ ಏರಬೇಕಾದರೆ, ‘ನಿರ್ದಿಷ್ಟ ಕುಟುಂಬ’ಕ್ಕೆ ಸೇರಿರಬೇಕು ಎಂಬ ನಿಯಮ ಇಲ್ಲ ಎಂದರು. ಮತಗಟ್ಟೆ ಮಟ್ಟದ ಕಾರ್ಯಕರ್ತನಾಗಿದ್ದ ತಾವು ಪಕ್ಷದ ಅಧ್ಯಕ್ಷ ಹುದ್ದೆಗೆ ಏರಿದ್ದರೆ, ಚಾಯ್‌ವಾಲಾ ಆಗಿದ್ದ ಮೋದಿ ಅವರು ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು. ತಳಮಟ್ಟದಿಂದ ಉನ್ನತ ಮಟ್ಟಕ್ಕೆ ಏರುವ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !