ಗುರುವಾರ , ಅಕ್ಟೋಬರ್ 17, 2019
26 °C
ನೀಲನಕ್ಷೆ ತಯಾರಿಗೆ ತಂಡ ರಚಿಸಿದ ಕೇಂದ್ರ

50 ರೈಲು ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

Published:
Updated:
prajavani

ನವದೆಹಲಿ: 50 ರೈಲು ನಿಲ್ದಾಣಗಳನ್ನು ವಿಶ್ವದರ್ಜೆ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಹಾಗೂ 150 ರೈಲುಗಳನ್ನು ನಿರ್ವಹಿಸುವ ಹೊಣೆಯನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು, ನೀಲನಕ್ಷೆ ಸಿದ್ಧಪಡಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಗುರುವಾರ ತಂಡವೊಂದನ್ನು ರಚಿಸಿದೆ.

ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್, ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್ ಅವರ ಜತೆಗೆ ಆರ್ಥಿಕ ವ್ಯವಹಾರಗಳ ಇಲಾಖೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು ಈ ತಂಡದಲ್ಲಿ ಇರಲಿದ್ದಾರೆ. ರೈಲ್ವೆ ಎಂಜಿನಿಯರಿಂಗ್ ಮಂಡಳಿ ಹಾಗೂ ರೈಲು ಸಂಚಾರ ಮಂಡಳಿಯ ಸದಸ್ಯರನ್ನು ಸಹ ತಂಡದಲ್ಲಿ ಸೇರಿಸಿಕೊಳ್ಳಲಾಗುವುದು.

‘ರೈಲ್ವೆ ಇಲಾಖೆ 400 ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಅಭಿವೃದ್ಧಿಪಡಿಸಬೇಕಿದೆ. ಆದರೆ ಈ ನಿಟ್ಟಿನಲ್ಲಿ ಕೆಲವು ನಿಲ್ದಾಣಗಳು ಮಾತ್ರ ಅಭಿವೃದ್ಧಿಯಾಗಿವೆ. ಈ ಕುರಿತು ರೈಲ್ವೆ ಸಚಿವರ ಬಳಿ ಚರ್ಚೆ ನಡೆಸಲಾಯಿತು. ಆದ್ಯತೆ ಮೇರೆಗೆ ಕನಿಷ್ಠ 50 ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಕಾರ್ಯವನ್ನು ಹಾಗೂ ಮೊದಲ ಹಂತದಲ್ಲಿ 150 ಪ್ರಯಾಣಿಕ ರೈಲುಗಳ ನಿರ್ವಹಣೆಯನ್ನು ಖಾಸಗಿ ವಲಯಕ್ಕೆ ನೀಡಲು ನಿರ್ಧರಿಸಲಾಯಿತು’ ಎಂದು ಕಾಂತ್ ತಿಳಿಸಿದ್ದಾರೆ.

‘ಕರವಾ ಚೌಥ್’ ವಿಶೇಷ ರೈಲು ರದ್ದು: ‘ಕರವಾ ಚೌಥ್’ ಸಲುವಾಗಿ ದಂಪತಿಗಳಿಗೆ ಮಾತ್ರ ರಾಜಸ್ಥಾನ ಪ್ರವಾಸ ಕೈಗೊಳ್ಳಲು ರೈಲ್ವೆ ಇಲಾಖೆ ವಿಶೇಷ ರೈಲು ಸೌಲಭ್ಯ ಕಲ್ಪಿಸಿತ್ತು. ಅ.14ರಂದು ದೆಹಲಿಯ ಸಫ್ದರ್‌ಜಂಗ್ ನಿಲ್ದಾಣದಿಂದ ಈ ರೈಲು ಪ್ರಯಾಣ ಆರಂಭಿಸಬೇಕಿತ್ತು.

ಆದರೆ ‘ದಿ ಮೆಜೆಸ್ಟಿಕ್ ರಾಜಸ್ಥಾನ್ ಡೀಲಕ್ಸ್’ ರೈಲಿಗೆ ಇಬ್ಬರು ದಂಪತಿ ಮಾತ್ರ ಟಿಕೆಟ್ ಕಾಯ್ದಿರಿಸಿದ್ದರು. ಆದ್ದರಿಂದ ಈ ರೈಲು ಸಂಚಾರ ರದ್ದುಪಡಿಸಲು ಇಲಾಖೆ ನಿರ್ಧರಿಸಿದೆ. ಇವರ ಟಿಕೆಟ್‌ ದರ ಮರುಪಾವತಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

‘ಹವಾನಿಯಂತ್ರಿತ ಮೊದಲ ದರ್ಜೆಯಲ್ಲಿ ಪ್ರತಿ ದಂಪತಿಗೆ ₹1,02,960 ಹಾಗೂ ಎರಡನೇ ದರ್ಜೆಯಲ್ಲಿ ಪ್ರತಿ ದಂಪತಿಗೆ ₹90,090 ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಬಹುಶಃ ದುಬಾರಿ ದರದಿಂದಾಗಿ ಜನರು ಈ ರೈಲು ಪ್ರವಾಸಕ್ಕೆ ಹಿಂದೇಟು ಹಾಕಿರಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Post Comments (+)