ಶುಕ್ರವಾರ, ಜೂನ್ 25, 2021
20 °C

50:50 ಸೂತ್ರ ಮೋದಿಗೆ ಗೊತ್ತಿರಲಿಲ್ಲವೇ? ಅಮಿತ್ ಶಾಗೆ ತಿರುಗೇಟು ನೀಡಿದ ರಾವುತ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದಲ್ಲಿ ಚುನಾವಣೆಗೂ ಮುನ್ನ ಬಿಜೆಪಿ–ಶಿವಸೇನಾ ನಡುವೆ 50:50 ಅಧಿಕಾರ ಹಂಚಿಕೆ ನಿರ್ಧಾರ ತೆಗೆದುಕೊಳ್ಳುವ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿರಲಿಲ್ಲವೇ ಎಂದು ಸೇನಾ ಮುಖಂಡ ಸಂಜಯ್ ರಾವುತ್ ಗುರುವಾರ ಪ್ರಶ್ನಿಸಿದ್ದಾರೆ. 

‘ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸೀಟು ಹೊಂದಾಣಿಕೆ ವಿಚಾರವನ್ನು ಸೂಕ್ತ ಸಮಯದಲ್ಲಿ ಪ್ರಧಾನಿ ಗಮನಕ್ಕೆ ತಂದಿದ್ದರೆ, ಮಹಾರಾಷ್ಟ್ರವು ಈ ರಾಜಕೀಯ ಅನಿಶ್ಚಿತ ಸ್ಥಿತಿ ಎದುರಿಸುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಮುಖ್ಯಮಂತ್ರಿ ಹುದ್ದೆ ಹಂಚಿಕೆ ಸೇರಿದಂತೆ ಶಿವಸೇನಾ ಮಂಡಿಸಿರುವ ಸರ್ಕಾರ ರಚನೆ ಸೂತ್ರವನ್ನು ಒಪ್ಪಲಾಗದು ಎಂದು ಶಾ ಅವರು ಬುಧವಾರ ಹೇಳಿದ್ದರು. 

‘ಸೀಟು ಹೊಂದಾಣಿಕೆ ಸಂಬಂಧ ಫೆಬ್ರುವರಿಯಲ್ಲಿ ಠಾಕ್ರೆ ನಿವಾಸದಲ್ಲಿ ಶಾ ಹಾಗೂ ಉದ್ಧವ್ ಠಾಕ್ರೆ ಭೇಟಿಯಾಗಿದ್ದರು. ಬಾಳಾಸಾಹೇಬ್ ಠಾಕ್ರೆ ಅವರ ಕೋಣೆ ನಮಗೆ ದೇವಸ್ಥಾನವಿದ್ದಂತೆ. ಈ ದೇವಸ್ಥಾನದಲ್ಲೇ ಮಾತುಕತೆ ನಡೆದಿತ್ತು. ಅಲ್ಲಿ ಯಾವುದೇ ಭರವಸೆ ನೀಡಿರಲಿಲ್ಲ ಎಂಬುದಾಗಿ ಬಿಜೆಪಿಯವರು ಹೇಳಿದರೆ ಅದು ಠಾಕ್ರೆ ಹಾಗೂ ಮಹಾರಾಷ್ಟ್ರಕ್ಕೆ ಮಾಡಿದ ಅಪಮಾನ’ ಎಂದು ಅವರು ಹೇಳಿದ್ದಾರೆ.

‘ಉಭಯ ಪಕ್ಷಗಳ ನಡುವಿನ ಮಾತುಕತೆ ವಿವರಗಳನ್ನು ಸಾರ್ವಜನಿಕವಾಗಿ ಹೇಳಲಾಗದು’ ಎಂಬ ಶಾ ಮಾತಿಗೆ ರಾವುತ್ ತಿರುಗೇಟು ನೀಡಿದ್ದಾರೆ. ಗೋಪ್ಯ ಮಾತುಕತೆಯ ಅಂಶಗಳನ್ನು ಬಿಜೆಪಿ ಒಪ್ಪುವುದಿಲ್ಲವೆಂದಾದರೆ, ಅವುಗಳನ್ನು ಬಹಿರಂಗಪಡಿಸದೇ ಬೇರೆ ದಾರಿಯಿಲ್ಲ. ರಾಜಕೀಯದಲ್ಲಿ ನಾವು ಎಂದೂ ವ್ಯಾಪಾರ ಮಾಡಿಲ್ಲ. ಅದನ್ನು ಲಾಭ–ನಷ್ಟದ ದೃಷ್ಟಿಯಲ್ಲಿ ನೋಡಿಲ್ಲ. ಇದು ಸ್ವಾಭಿಮಾನದ ಪ್ರಶ್ನೆಯಾಗಿದ್ದರಿಂದ ನಾವಿದನ್ನು ಸಾರ್ವಜನಿಕರ ಮುಂದೆ ಇಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. 

ಸೇನಾ– ಕಾಂಗ್ರೆಸ್– ಎನ್‌ಸಿಪಿ ಮೊದಲ ಜಂಟಿ ಸಭೆ
ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮೊದಲ ಜಂಟಿ ಸಭೆ ಗುರುವಾರ ನಡೆಯಿತು. 

ಶಿವಸೇನಾ ಪರವಾಗಿ ಉದ್ಧವ್ ಠಾಕ್ರೆ ಅವರ ಆಪ್ತರಾದ ಸುಭಾಷ್ ದೇಸಾಯಿ ಮತ್ತು ಏಕನಾಥ್ ಶಿಂಧೆ ಸಭೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್‌ನಿಂದ ಪೃಥ್ವಿರಾಜ್ ಚವಾಣ್, ವಿಜಯ್ ವಡೆಟ್ಟಿವಾರ್ ಮತ್ತು ಮಾಣಿಕರಾವ್ ಠಾಕ್ರೆ ಇದ್ದರು. ಎನ್‌ಸಿಪಿಯಿಂದ ಜಯಂತ್ ಪಾಟೀಲ್, ಛಗನ್ ಭುಜ್‌ಬಲ್ ಮತ್ತು ನವಾಬ್ ಮಲಿಕ್ ಭಾಗಿಯಾಗಿದ್ದರು.

ಸಭೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಮೂರೂ ಪಕ್ಷಗಳ ಮುಖಂಡರು ಸಭೆ ನಡೆಸಿದ್ದು ಇದೇ ಮೊದಲು. ಬುಧವಾರ ರಾತ್ರಿ ಎನ್‌ಸಿಪಿ–ಕಾಂಗ್ರೆಸ್ ಸಭೆ ನಡೆದಿತ್ತು. 

* ನ.17ರಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್–ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಸಾಧ್ಯತೆ

* ಗುರುವಾರ ಬೆಳಿಗ್ಗೆ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ ಪಾಟೀಲ್–ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಮಾತುಕತೆ

* 10 ಸದಸ್ಯರ ಕಾಂಗ್ರೆಸ್–ಎನ್‌ಸಿಪಿ ಜಂಟಿ ಸಮಿತಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಪಟ್ಟಿಗೆ ಅಂತಿಮ ರೂಪ

* ಸೋನಿಯಾ–ಪವಾರ್ ಜತೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತುಕತೆ ಇನ್ನಷ್ಟೇ ನಿಗದಿಯಾಗಬೇಕಿದೆ

*
ಫಡಣವೀಸ್ ಮುಖ್ಯಮಂತ್ರಿ ಎಂದು ಮೋದಿ ಹೇಳಿದ್ದು ಕೇಳಿದ್ದೇವೆ. ಸಭ್ಯತೆಯ ಕಾರಣಕ್ಕೆ ಪ್ರಶ್ನಿಸಿರಲಿಲ್ಲ. ಇದು ನಮಗೆ ನೀಡುತ್ತಿರುವ ಸಂದೇಶ ಎಂಬುದಾಗಿ ಪರಿಗಣಿಸಿರಲಿಲ್ಲ. 
–ಸಂಜಯ್ ರಾವುತ್, ಶಿವಸೇನಾ ವಕ್ತಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು