ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಕೋಟಿ ರೈತರಿಗೆ ‘ಪಿ.ಎಂ–ಕಿಸಾನ್’

Last Updated 8 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನ ಮಂತ್ರಿ (ಪಿ.ಎಂ) ಕಿಸಾನ್’ ಯೋಜನೆಯ ಸೌಲಭ್ಯವನ್ನು ಎಲ್ಲಾ 14.5 ಕೋಟಿ ರೈತರಿಗೂ ವಿಸ್ತರಿಸುವ ಕುರಿತು ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ಯೋಜನೆ ಪ್ರಕಾರ ಕೃಷಿಕರು ಎಷ್ಟೇ ಪ್ರಮಾಣದ ಜಮೀನು ಹೊಂದಿದ್ದರೂ ಈ ಸೌಲಭ್ಯಕ್ಕೆಅರ್ಹರು.

₹75 ಸಾವಿರ ಕೋಟಿ ಮೊತ್ತದ ಈ ಯೋಜನೆಯನ್ನು ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದರ ಅನ್ವಯ 2 ಹೆಕ್ಟೇರ್‌ವರೆಗೆ ಕೃಷಿ ಭೂಮಿ ಹೊಂದಿರುವ12.5 ಕೋಟಿ ಸಣ್ಣ ಕೃಷಿಕರನ್ನು ಯೋಜನೆಗೆ ಫಲಾನುಭವಿಗಳು ಎಂದು ಪರಿಗಣಿಸಲಾಗಿತ್ತು. ಇದೀಗ ಯೋಜನೆ ಪರಿಷ್ಕರಿಸಿ ಸೌಲಭ್ಯವನ್ನುಹೆಚ್ಚುವರಿಯಾಗಿ 2 ಕೋಟಿ ರೈತರಿಗೆ ವಿಸ್ತರಿಸಲಾಗಿದೆ. ಇದರಿಂದಾಗಿ 2019–20ರ ಆರ್ಥಿಕ ವರ್ಷದಲ್ಲಿ ಯೋಜನೆ ವೆಚ್ಚ ₹ 87,217.50 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.ಈ ಸಂಬಂಧ ಎಲ್ಲಾ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿರುವಕೇಂದ್ರ ಕೃಷಿ ಸಚಿವಾಲಯ, ಸೌಲಭ್ಯ ಯಾರಿಗೆಲ್ಲ ಅನ್ವಯವಾಗುವುದಿಲ್ಲ ಎನ್ನುವುದನ್ನು ಗುರುತಿಸುವಂತೆ ಸೂಚಿಸಿದೆ.

ಯೋಜನೆ ವಿಸ್ತರಿಸಲು,ನೂತನ ಎನ್‌ಡಿಎ ಸರ್ಕಾರ ಮೇ 31ರಂದು ನಡೆಸಿದ್ದ ಮೊದಲ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಯಾರಿಗೆಲ್ಲ ಸೌಲಭ್ಯ ಇಲ್ಲ

ಸಾಂವಿಧಾನಿಕ ಹುದ್ದೆಗಳಲ್ಲಿರುವವರು, ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಗಳು ಅಥವಾ ನಿವೃತ್ತ ಉದ್ಯೋಗಿಗಳು, ಸಾರ್ವಜನಿಕ ಸ್ವಾಮ್ಯ ಹಾಗೂ ಸರ್ಕಾರದ ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳು ಇರುವ ಕೃಷಿಕ ಕುಟುಂಬದವರು ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಕೃಷಿ ಭೂಮಿ ಬಳಸುತ್ತಿರುವವರಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ.

ಅಲ್ಲದೆ ವೈದ್ಯರು, ಎಂಜಿನಿಯರ್‌ಗಳು, ವಕೀಲರು ಹಾಗೂ ಮಾಸಿಕ ₹10 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು, ಹಿಂದಿನ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರನ್ನು ಸಹ ಯೋಜನೆಯಿಂದ ಹೊರಗಿಡಲಾಗಿದೆ.

ರಾಜ್ಯ ಸರ್ಕಾರಗಳ ಹೊಣೆ

ಅರ್ಹ ಫಲಾನುಭವಿ ಕೃಷಿಕರನ್ನು ಗುರುತಿಸಿ ಅವರ ಮಾಹಿತಿಗಳನ್ನು http://www.pmkisan.gov.in/ವೆಬ್‌ಸೈಟ್‌ನಲ್ಲಿ ದಾಖಲಿಸುವ ಹೊಣೆ ಸಂಪೂರ್ಣವಾಗಿ ಆಯಾ ರಾಜ್ಯ ಸರ್ಕಾರಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಇದಕ್ಕಾಗಿ ‘ಪ್ರಸ್ತುತ ಜಮೀನಿನ ಮಾಲೀಕತ್ವ ಹೊಂದಿರುವವರು’ ವ್ಯವಸ್ಥೆ ಬಳಸಬೇಕು. ಕುಟುಂಬದ ಸಂಪೂರ್ಣ ಮಾಹಿತಿ ದೊರೆತ ಬಳಿಕವಷ್ಟೆ ಮೊತ್ತ ವರ್ಗಾಯಿಸಬೇಕು ಎಂದು ಸೂಚಿಸಲಾಗಿದೆ.

ಅಂಕಿ–ಅಂಶಗಳು

₹ 6 ಸಾವಿರ - ಪ್ರತಿ ವರ್ಷ ನೀಡುವ ನೆರವು (ಮೂರು ಕಂತುಗಳಲ್ಲಿ)

3.66 ಕೋಟಿ - ಈವರೆಗೆ ಸೌಲಭ್ಯಕ್ಕೆ ನೋಂದಾಯಿಸಿಕೊಂಡಿರುವ ರೈತರು

3.03 ಕೋಟಿ - ರೈತರಿಗೆ ಮೊದಲ ಕಂತು ಪಾವತಿ

2 ಕೋಟಿ - ರೈತರಿಗೆ ಎರಡು ಕಂತುಗಳು ಪಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT