ಬುಧವಾರ, ಅಕ್ಟೋಬರ್ 16, 2019
28 °C
ಸಾರ್ವಜನಿಕ ವಲಯದಲ್ಲಿ ಮಾಹಿತಿ ಮುಕ್ತವಾಗಿ ಲಭ್ಯವಿದೆ: ಅಮಿತ್‌ ಶಾ

‘ಆರ್‌ಟಿಐ ಬಳಕೆ ಇಳಿಕೆ ಸರ್ಕಾರದ ಉದ್ದೇಶ’

Published:
Updated:
Prajavani

ನವದೆಹಲಿ: ‘ಮಾಹಿತಿ ಹಕ್ಕುಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುವುದು ಸರ್ಕಾರದ ಯಶಸ್ಸನ್ನು ಬಿಂಬಿಸುವುದಿಲ್ಲ. ಆರ್‌ಟಿಐ ಅರ್ಜಿಗಳ ಸಂಖ್ಯೆ ಕಡಿಮೆ ಇದೆ ಎಂದರೆ ಸರ್ಕಾರದ ಕಾರ್ಯವೈಖರಿ ತೃಪ್ತಿಕರವಾಗಿದೆ ಎಂದರ್ಥ’ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ರಚನೆಯಾಗಿ ಶನಿವಾರಕ್ಕೆ 14 ವರ್ಷ. ಈ ಸಲುವಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಆರ್‌ಟಿಐ ಕಾನೂನು ರೂಪುಗೊಂಡ ಉದ್ದೇಶ, ಸಂವಿಧಾನದ ಅನುಸಾರವೇ ಆಡಳಿತ ನಡೆಯುತ್ತದೆ ಎಂದು ಜನರಿಗೆ ತಿಳಿಸುವಂತೆ ಮಾಡುವುದಾಗಿತ್ತು. ಆಡಳಿತ ವ್ಯವಸ್ಥೆ ಕುರಿತು ಜನರಲ್ಲಿ ನಂಬಿಕೆ ಮೂಡಿಸುವಲ್ಲಿ ಈ ಕಾನೂನು ಸಾಫಲ್ಯ ಕಂಡಿದೆ’ ಎಂದು ಹೇಳಿದ್ದಾರೆ.

‘ಸರ್ಕಾರದ ಆಡಳಿತ ವ್ಯವಸ್ಥೆ ಹಾಗೂ ಎಲ್ಲಾ ಯೋಜನೆಗಳ ಕುರಿತ ಮಾಹಿತಿ ಸಾರ್ವಜನಿಕ ವಲಯದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸದೆಯೂ ಜನರು ಮಾಹಿತಿಗಳನ್ನು ಪಡೆಯಬಹುದಾಗಿದೆ’ ಎಂದು ಶಾ ತಿಳಿಸಿದ್ದಾರೆ.

ಪಾರದರ್ಶಕ ವ್ಯವಸ್ಥೆಯ ಹೊಸ ಶಕೆ

‘ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ‘ಡಿಜಿಟಲ್ ಇಂಡಿಯಾ’ ವ್ಯವಸ್ಥೆಯಿಂದ ಸರ್ಕಾರದ ಪ್ರಸ್ತುತ ಯೋಜನೆಗಳ ಎಲ್ಲಾ ಮಾಹಿತಿ ಆರ್‌ಟಿಐ ಅರ್ಜಿ ಹೊರತಾಗಿ ಅಂತರ್ಜಾಲದಲ್ಲಿಯೇ ಲಭ್ಯವಾಗುತ್ತಿದೆ. ಈ ಮೂಲಕ ಪಾರದರ್ಶಕ ವ್ಯವಸ್ಥೆಯ ಹೊಸ ಶಕೆಯನ್ನೇ ನಾವು ಆರಂಭಿಸಿದ್ದೇವೆ’ ಎಂದು ಅಮಿತ್ ಶಾ ವಿವರಿಸಿದ್ದಾರೆ.

‘ಆರ್‌ಟಿಐ ಕಾನೂನು ಇರಬೇಕು. ಆದರೆ ಇದರ ಅವಶ್ಯಕತೆ ಕಡಿಮೆಯಾಗುವ ರೀತಿಯಲ್ಲಿ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸಬೇಕು. ಪಾರದರ್ಶಕತೆ ಕಾಪಾಡಿಕೊಳ್ಳುವ ಸಲುವಾಗಿ ಸರ್ಕಾರ ಕಾನೂನಿಗಿಂತ ಎರಡು ಹೆಜ್ಜೆ ಮುಂದಿದೆ. ಪಾರದರ್ಶಕ ಹಾಗೂ ಜವಾಬ್ದಾರಿಯುತ ವ್ಯವಸ್ಥೆಯಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ. ಆರ್‌ಟಿಐನಿಂದಾಗಿ ಭ್ರಷ್ಟಾಚಾರ ಕಡಿಮೆಯಾಗಿದೆ ಎನ್ನುವುದು ತಿಳಿದುಬಂದಿದೆ’ ಎಂದಿದ್ದಾರೆ.

ಸಿಐಸಿಗೆ ಮನವಿ

‘ಆರ್‌ಟಿಐ ಅರ್ಜಿಗಳನ್ನು ವಿಲೇವಾರಿ ಮಾಡುವುದಷ್ಟೇ ಅಲ್ಲ. ಆರ್‌ಟಿಐ ಸಲ್ಲಿಸದೆಯೂ ಮಾಹಿತಿ ದೊರಕಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಜನರಿಗೆ ತಿಳಿಸಬೇಕು’ ಎಂದು ಸಿಐಸಿಗೆ ಶಾ ಮನವಿ ಮಾಡಿದ್ದಾರೆ.

Post Comments (+)