ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಸರ್ವಾಧಿಕಾರಿ ಧೋರಣೆ ಕಡೆಗಾಣಿಸಿ

ಪೆರೇಸಂದ್ರದಲ್ಲಿ ಆಯೋಜಿಸಿದ್ದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡ ನವೀನ್ ಕಿರಣ್ ವಾಗ್ದಾಳಿ
Last Updated 12 ಮಾರ್ಚ್ 2018, 6:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಭಿವೃದ್ಧಿ ವಿಚಾರದಲ್ಲಿ ಕೊನೆಯ ಸ್ಥಾನದಲ್ಲಿರುವ ಶಾಸಕರ ಸರ್ವಾಧಿಕಾರಿ ಧೋರಣೆ ಕಡೆಗಾಣಿಸಬೇಕು. ಇನ್ನೊಮ್ಮೆ ಅವರೇ ಗೆದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಯೋಚಿಸಿ. ಅನ್ಯಾಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಇವತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗಲಿ, ಸಿಗದೇ ಹೋಗಲಿ ನವೀನ್ ಕಿರಣ್ ಅವರಿಗೇ ಮತ ಹಾಕಿ ಆರ್ಶೀವದಿಸಿ’ ಎಂದು ಕಾಂಗ್ರೆಸ್ ಮುಖಂಡ ಕೆ.ವಿ.ನವೀನ್ ಕಿರಣ್ ಹೇಳಿದರು.

ತಾಲ್ಲೂಕಿನ ಪೆರೇಸಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ನವೀನ್ ಕಿರಣ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇವತ್ತು ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಪ್ರಜೆ ನೇರವಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಕಚೇರಿ, ನಗರಸಭೆಗೆ ಹೋಗಿ ಜನನ, ಮರಣ ಪ್ರಮಾಣಪತ್ರ ಪಡೆದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನಾವೆಲ್ಲ ಪರೋಕ್ಷ ಕಾರಣ. ಏಕೆಂದರೆ ಕಳೆದ ಚುನಾವಣೆಯಲ್ಲಿ ನಾವೆಲ್ಲ ಈ ಶಾಸಕರಿಗೆ ಬೆಂಬಲ ನೀಡಿದವರೆ. ಇವತ್ತು ನಮ್ಮ ಹೋರಾಟ ಭ್ರಷ್ಟಾಚಾರದ ವಿರುದ್ಧ ನಡೆಯಬೇಕಾಗಿದೆ’ ಎಂದು ತಿಳಿಸಿದರು.

‘ಯಾರೇ ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೂ, ಸಾಯಿಸಿದರೂ ನಾವು ಪ್ರಶ್ನಿಸುವಂತಿಲ್ಲ. ಪ್ರಶ್ನಿಸುವವ ವಿರುದ್ಧ ದೂರು ದಾಖಲಿಸಿ, ಜೈಲಿಗೆ ಕಳುಹಿಸುತ್ತಾರೆ. ಈ ಭಾಗದ ಜನರು ಪಟ್ಟಿರುವಷ್ಟು ಕಷ್ಟ ಯಾರೂ ಪಟ್ಟಿಲ್ಲ. ಈ ದೌರ್ಜನ್ಯ ತಪ್ಪಿಸಲು ನಾನು ಬರುತ್ತಿರುವೆ. ನಿಮ್ಮ ಆರ್ಶೀವಾದ ಬೇಕು. ಪ್ರತಿಯೊಂದರಲ್ಲೂ ನಾವು ನಿಮ್ಮೊಂದಿಗೆ ಇದ್ದೇವೆ’ ಎಂದರು.

‘ನನಗೆ ತಂದೆ ತಾಯಿ ಕೊಟ್ಟ ಜನ್ಮ 2015 ಏಪ್ರಿಲ್‌ನಲ್ಲೇ ಅಪಘಾತದಲ್ಲಿಯೇ ಮುಗಿಯಿತು. ಇದೀಗ ಇದು ನಿಮ್ಮ ಜನ್ಮ. ನಿಮ್ಮ ಋಣ ತೀರಿಸಬೇಕು. ನನ್ನ ಕನಸುಗಳು ಸಾಕಾರವಾಗಬೇಕಾದರೆ ನಿಮ್ಮ ಆರ್ಶೀವಾದ ಮುಖ್ಯ. ಚುನಾವಣೆ ಮುಗಿಯುವವರೆ ನಾವು ನಿದ್ದೆ ಮಾಡಬಾರದು. ಮುಂಬರುವ ದಿನಗಳಲ್ಲಿ ನಮಗೆ ತೊಂದರೆ ಕೊಡುತ್ತಾರೆ. ಆದರೂ ನಾವು ದೃತಿಗೇಡಬಾರದು’ ಎಂದು ಹೇಳಿದರು.

‘ಇಲ್ಲಿ ಸೇರಿರುವವರೆಲ್ಲ ಬದಲಾವಣೆ ಕಡೆಗೆ ತೆಗೆದುಕೊಂಡು ಹೋಗುವ ಶಕ್ತಿಯಾಗಬೇಕು. ಭಾಷಣ ಕೇಳುವುದರಿಂದ ಪ್ರಯೋಜನವಿಲ್ಲ. ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ಬದಲಾವಣೆಯಾಗಲೇ ಬೇಕು. ಪ್ರತಿ ಹಳ್ಳಿಯ ಕಟ್ಟಕಡೆಯ ವ್ಯಕ್ತಿಯಿಂದ ಬದಲಾವಣೆ ಬಯಸುವ ಚಿಂತನೆ ಆರಂಭವಾಗಬೇಕು. ಮಂಚೇನಹಳ್ಳಿ ಭಾಗದವರಿಗೆ ನಮ್ಮ ಶಾಸಕರ ಅಸಲಿ ರೂಪ ಗೊತ್ತಿಲ್ಲ. ಹೀಗಾಗಿ ಅಲ್ಲಿ ಸಹ ಕಾರ್ಯಕ್ರಮ ನಾವು ಅದನ್ನು ತಿಳಿಯಪಡಿಸಬೇಕು’ ಎಂದರು.

‘ಹೋರಾಟ ಈಗ ಪ್ರಾರಂಭವಾಗಿದೆ. ಮಧ್ಯ ನಾವು ನಿಲ್ಲಿಸಬಾರದು. ಗೆಲ್ಲುವವರೆಗೂ ಹೋರಾಡಬೇಕು. ಒಬ್ಬೊಬ್ಬರು ಹತ್ತು ಮನೆಗಳಿಗೆ ತಿಳಿಸಿದರೆ ಸಾಕು. ನಾವು ಹಳೆಯ ದಿನಕ್ಕೆ ಚಿಕ್ಕಬಳ್ಳಾಪುರ ವಾಪಸ್ ತೆಗೆದುಕೊಂಡು ಹೋಗಬೇಕು. ಈ ಕಾರ್ಯಕ್ರಮಕ್ಕೆ ಬರುವ ಅನೇಕರನ್ನು ಹೆದರಿಸಲಾಗಿದೆ. ಬ್ಯಾನರ್ ಹರಿದು ಹಾಕಲಾಗಿದೆ. ಆದರೂ ನಾವು ಅಂಜುವುದಿಲ್ಲ’ ಎಂದು ತಿಳಿಸಿದರು.

ಮುಖಂಡ ಜಿ.ಎಚ್.ನಾಗರಾಜ್ ಮಾತನಾಡಿ, ‘ಹಾಲಿ ಶಾಸಕರು ಮಿತ್ರದ್ರೋಹಿ. ಎಸ್.ಎಂ.ಕೃಷ್ಣ ಅವರಿಗೆ ಕೈಕೊಟ್ಟ ಗುರುದ್ರೋಹಿ. ಅನೇಕರ ಸಹಕಾರದಿಂದ ಗೆದ್ದವರು ಇವತ್ತು ನಮ್ಮನ್ನೆಲ್ಲ ಹೀನವಾಗಿ ಕಾಣುತ್ತಿದ್ದಾರೆ. ಹಿಂದಿನದೆಲ್ಲ ಮರೆತು ಇಡೀ ಕಾಂಗ್ರೆಸ್ ಪಕ್ಷವನ್ನು ಗುತ್ತಿಗೆ ಪಡೆದುಕೊಂಡ ರೀತಿ ವರ್ತಿಸುತ್ತಿದ್ದಾರೆ. ಅದನ್ನು ನಾವೆಲ್ಲ ಖಂಡಿಸಬೇಕು’ ಎಂದು ಹೇಳಿದರು.

‘ಶಾಸಕರು ಹಣದಲ್ಲಿ ಏನು ಬೇಕಾದರೂ ಕೊಳ್ಳಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಅದನ್ನು ಯುವಕರು ಮತ್ತು ಮಹಿಳೆಯರು ಹೋಗಲಾಡಿಸಬೇಕು. ಅವರು ಕೊಡುವ ಸೀರೆ, ಮಿಕ್ಸಿ, ಹಣಕ್ಕಾಗಿ ಜನ ಬಂದರೆ, ನಮ್ಮ ಈ ಕಾರ್ಯಕ್ರಮಕ್ಕೆ ಅಭಿಮಾನದಿಂದ ಜನರು ಬಂದಿದ್ದಾರೆ. ಜನರು ಆಮಿಷಕ್ಕೆ ಬಲಿಯಾಗದೆ. ಉತ್ತಮ ವ್ಯಕ್ತಿಯನ್ನು ಆರಿಸಿ ಕಳುಹಿಸಬೇಕು’ ಎಂದರು.

‘ಇವತ್ತು ಪ್ರತಿಯೊಂದರಲ್ಲಿ ಕಮಿಷನ್. ಮೋದಿ ಹೇಳಿದ್ದರಲ್ಲಿ ಸಾವಿರ ಪಾಲು ಸತ್ಯವಿದೆ. ಎಲ್ಲರ ಬಳಿ ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಎಲ್ಲ ಕಚೇರಿಗಳಲ್ಲಿ ಶಾಸಕರು ಹೇಳಿದರೆ ಮಾತ್ರ ಕೆಲಸ ಮಾಡುತ್ತಾರೆ ಏಕೆಂದರೆ ಲಂಚ. ದುಡ್ಡು ಕೊಟ್ಟರೆ ಮಾತ್ರ ಕೆಲಸ. ಅಭಿವೃದ್ಧಿ ಕುಂಠಿತವಾಗಬೇಕಾದರೆ ಇವರೇ ಕಾರಣ. ಈ ಬಾರಿ ಅವರಿಗೆ ಠೇವಣಿ ಬರದಂತೆ ನೋಡಿಕೊಳ್ಳಬೇಕು. ಬೆಂಗಳೂರಿಗೆ ವಾಪಸ್ ಕಳುಹಿಸಬೇಕು’ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ ಆರೂರು ಕ್ರಾಸ್‌ನಿಂದ ಬೈಕ್ ರ‍್ಯಾಲಿ ನಡೆಸಲಾಯಿತು. ಮುಖಂಡರಾದ ಮಹೇಶ್, ಪ್ರದೀಪ್ ಈಶ್ವರ್, ನರೇಶ್, ಮರಸನಹಳ್ಳಿ ಪ್ರಕಾಶ್, ನಾಗರಾಜು ಉಪಸ್ಥಿತರಿದ್ದರು.

ಚಿಕನ್ ಬಿರಿಯಾನಿ ವ್ಯವಸ್ಥೆ: ಕಾರ್ಯಕ್ರಮಕ್ಕೆ ಬಂದವರಿಗೆ ಚಿಕನ್ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಿರಿಯಾನಿಗಾಗಿ ಜನರು ಮುಗಿಬಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT