ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ: ಟ್ರಸ್ಟ್ ರಚನೆ ಪ್ರಕ್ರಿಯೆ ಆರಂಭ

ಸುಪ್ರೀಂ ಕೋರ್ಟ್ ತೀರ್ಪಿನ ಅಂಶಗಳ ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಿದ ಸರ್ಕಾರ
Last Updated 11 ನವೆಂಬರ್ 2019, 21:10 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚನೆ ಪ್ರಕ್ರಿಯೆಯನ್ನು ಸೋಮವಾರ ಆರಂಭಿಸಿರುವ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಿದೆ.

ಮಂದಿರ ನಿರ್ಮಾಣಕ್ಕೆ ಯಾವೆಲ್ಲ ವಿಧಾನಗಳನ್ನು ಅನುಸರಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಿರುವ ಟ್ರಸ್ಟ್ ರಚನೆ ಸಂಬಂಧ ಕಾನೂನು ಸಚಿವಾಲಯ ಹಾಗೂ ಅಟಾರ್ನಿ ಜನರಲ್ ಅವರು ಸರ್ಕಾರಕ್ಕೆ ಸಲಹೆ ನೀಡಲಿದ್ದಾರೆ.

ಸೂಕ್ಷ್ಮ ಅಂಶಗಳನ್ನೂ ಒಳಗೊಂಡಂತೆ ಸುಪ್ರೀಂ ಕೋರ್ಟ್‌ ತೀರ್ಪನ್ನು ತಾಂತ್ರಿಕವಾಗಿ, ಆಮೂಲಾಗ್ರವಾಗಿ ಪರಿಶೀಲಿಸುವ ಹೊಣೆಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಗೃಹಸಚಿವಾಲಯ ಅಥವಾ ಸಂಸ್ಕೃತಿ ಸಚಿವಾಲಯಗಳು ರಾಮಮಂದಿರ ಟ್ರಸ್ಟ್‌ನ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡಲಿವೆಯೇ ಎಂಬುದು ಸದ್ಯಕ್ಕೆ ಸ್ಪಷ್ಟಗೊಂಡಿಲ್ಲ.

ಸೂಕ್ತ ಸದಸ್ಯರನ್ನು ಒಳಗೊಂಡ ಟ್ರಸ್ಟ್ ರಚಿಸುವ ಹೊಣೆ ಕೇಂದ್ರ ಸರ್ಕಾರದ ಮೇಲಿದೆ. ಟ್ರಸ್ಟ್ ನಿರ್ವಹಣೆ, ಟ್ರಸ್ಟಿಗಳಿಗೆ ನೀಡಲಾಗುವ ಅಧಿಕಾರ, ರಾಮಮಂದಿರ ನಿರ್ಮಾಣ ಕುರಿತು ಕೇಂದ್ರವು ಕೆಲ ಮಾರ್ಗಸೂಚಿಗಳನ್ನು ರಚಿಸಿ, ಅಗತ್ಯ ನೆರವು ನೀಡಬೇಕಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರವು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನನ್ನು ನಿಗದಿತ ಸಮಯದಲ್ಲಿ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು.

‘ಸುಪ್ರೀಂ’ ತೀರ್ಪು ಪ್ರಶ್ನಿಸಲು ನಿರ್ಧಾರ
ಅಯೋಧ್ಯೆ: ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದಲ್ಲಿ ಕಕ್ಷಿದಾರರಾಗಿದ್ದ ಕೆಲವು ಮುಸ್ಲಿಂ ಅರ್ಜಿದಾರರು ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಲು ನಿರ್ಧರಿಸಿದ್ದಾರೆ. ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದ್ದ ಮುಸ್ಲಿಮರು ವಕ್ಫ್ ಮಂಡಳಿ ತೆಗೆದುಕೊಳ್ಳುವ ನಿರ್ಧಾರದಿಂದ ಅಂತರ ಕಾಯ್ದುಕೊಂಡಿದ್ದಾರೆ.

‘ನಮಗೆ ನ್ಯಾಯ ಸಿಕ್ಕಿಲ್ಲ. ತೀರ್ಪಿನ ಪ್ರತಿಯನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನುರಿತ ವಕೀಲರು ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಅರ್ಜಿದಾರರಾದ ಮೌಲಾನಾ ಮಹಫೂಜು ರಹಮಾನ್ ಅವರ ಪ್ರತಿನಿಧಿ ಖಾಲಿದ್ ಅಹ್ಮದ್ ಖಾನ್ ಹೇಳಿದ್ದಾರೆ.

ಎಲ್ಲ ದಾಖಲೆಗಳನ್ನು ಆಧರಿಸಿ ಕೋರ್ಟ್ ತೀರ್ಪು ನೀಡಿದೆ. ಹೀಗಿದ್ದೂ ಸಂವಿಧಾನದ 142ನೇ ವಿಧಿಯಡಿ ಕೋರ್ಟ್ ಪರಮಾಧಿಕಾರ ಬಳಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT