ಕೇಂದ್ರ ಸರ್ಕಾರದಿಂದ ತಮ್ಮ ವಿರುದ್ಧ ಪ್ರತೀಕಾರ: ವಾದ್ರಾ ಆರೋಪ

7
ತಮ್ಮ ತಾಯಿಗೆ ವಿಚಾರಣೆ ನೆಪದಲ್ಲಿ ಹಿಂಸೆಗೆ ಫೇಸ್‌ಬುಕ್‌ನಲ್ಲಿ ಆಕ್ರೋಶ

ಕೇಂದ್ರ ಸರ್ಕಾರದಿಂದ ತಮ್ಮ ವಿರುದ್ಧ ಪ್ರತೀಕಾರ: ವಾದ್ರಾ ಆರೋಪ

Published:
Updated:
Prajavani

ನವದೆಹಲಿ: ಚುನಾವಣೆಯು ಸಮೀಪಿಸುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ತಮ್ಮ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದು ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಅವರು, ತಮ್ಮ ತಾಯಿಯನ್ನು ವಿಚಾರಣೆ ನೆಪದಲ್ಲಿ ಹಿಂಸಿಸಲಾಗುತ್ತಿದೆ ಎಂದಿದ್ದಾರೆ.

4 ವರ್ಷ ಎಂಟು ತಿಂಗಳ ಕಾಲ ತಮ್ಮನ್ನು ವಿಚಾರಣೆ ನಡೆಸದೇ ಸುಮ್ಮನಿದ್ದಿದ್ದು ಏಕೆ ಎಂದು ಪ್ರಶ್ನಿಸಿರುವ ಅವರು, ‘ಇದು ಚುನಾವಣಾ ಗಿಮಿಕ್ ಅಲ್ಲ ಎಂದು ಭಾರತೀಯರಿಗೆ ತಿಳಿಯುವುದಿಲ್ಲವೇ’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. 

ಬಿಕಾನೇರ್ ಭೂ ಹಗರಣ ಸಂಬಂಧ ವಾದ್ರಾ ಹಾಗೂ ಅವರ ತಾಯಿ ಮೌರೀನ್ ಅವರು ಜೈಪುರದ ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು. ವಾದ್ರಾ ಜೊತೆ ಪತ್ನಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇದ್ದರು.

‘75 ವರ್ಷದ ನನ್ನ ತಾಯಿಯು ಅಪಘಾತದಲ್ಲಿ ಮಗಳನ್ನು ಕಳೆದುಕೊಂಡರು. ಮಧುಮೇಹದಿಂದ ಬಳಲುತ್ತಿದ್ದ ಮಗ ಹಾಗೂ ಪತಿಯನ್ನೂ ಕಳೆದುಕೊಂಡರು. ಮೂರು ಸಾವುಗಳಿಂದ ನೊಂದಿದ್ದ ಅವರಿಗೆ ನನ್ನ ಕಚೇರಿಯಲ್ಲೇ ಇರುವಂತೆ ಕೇಳಿಕೊಂಡಿದ್ದೆ. ಕಚೇರಿಯಲ್ಲಿಯೇ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾ, ಇಬ್ಬರೂ ದುಃಖ ಹಂಚಿಕೊಳ್ಳುತ್ತಿದ್ದೆವು’ ಎಂದು ವಾದ್ರಾ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಜೊತೆ ಕಚೇರಿಯಲ್ಲಿ ಇದ್ದ ಕಾರಣಕ್ಕಾಗಿ ನನ್ನ ತಾಯಿಯನ್ನೂ ಆರೋಪಿಯನ್ನಾಗಿ ಮಾಡಿ, ವಿಚಾರಣೆ ಮಾಡಲಾಗುತ್ತಿದೆ’ ಎಂದು ವಾದ್ರಾ ಆರೋಪಿಸಿದ್ದಾರೆ. 

‘ನಾನು ಶಿಸ್ತುಬದ್ಧ ವ್ಯಕ್ತಿ. ಮುಚ್ಚಿಡುವಂತಹದ್ದು ಏನೂ ಇಲ್ಲ. ಎಷ್ಟು ಗಂಟೆ ಬೇಕಾದರೂ ವಿಚಾರಣೆ ಎದುರಿಸಿ, ಪ್ರತಿಯೊಂದು ಪ್ರಶ್ನೆಗೂ ಗೌರವಯುತವಾಗಿ ಉತ್ತರಿಸಬಲ್ಲೆ. ಈ ವಿಚಾರಣೆಯಿಂದ ನನಗೆ ಇನ್ನಷ್ಟು ಬಲ ಬರುತ್ತದೆ. ದೇವರು ನಮ್ಮೊಂದಿಗಿದ್ದಾನೆ’ ಎಂದು ಹೇಳಿದ್ದಾರೆ.

ಬಿಕಾನೇರ್ ಭೂ ಹಗರಣದ ಜೊತೆ ಮತ್ತೆರೆಡು ಪ್ರಕರಣಗಳಲ್ಲೂ ವಾದ್ರಾ ಅವರು ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿದ್ದಾರೆ. ವಿದೇಶದಲ್ಲಿ ಆಸ್ತಿ ಮಾಡಿರುವ ಆರೋಪದ ಮೇಲೆ ದೆಹಲಿಯಲ್ಲಿ ಮೂರು ದಿನ ಅವರನ್ನು ಪ್ರಶ್ನಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !