ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಕಾಯ್ದೆಗೆ ತಿದ್ದುಪಡಿ ಇಲ್ಲ: ಪ್ರಸ್ತಾವ ಕೈಬಿಟ್ಟ ಕೇಂದ್ರ ಸರ್ಕಾರ

ಅರಣ್ಯಾಧಿಕಾರಿಗಳಿಗೆ ಅಧಿಕಾರ
Last Updated 15 ನವೆಂಬರ್ 2019, 22:56 IST
ಅಕ್ಷರ ಗಾತ್ರ

ನವದೆಹಲಿ: ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಅಂಶಗಳಿದ್ದ ಭಾರತೀಯ ಅರಣ್ಯ (ತಿದ್ದುಪಡಿ) ಮಸೂದೆಯ ಪ್ರಸ್ತಾವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

1927ರ ಭಾರತೀಯ ಅರಣ್ಯ ಕಾಯ್ದೆಯನ್ನು ತಿದ್ದುಪಡಿ ಮಾಡುವ ಉದ್ದೇಶದಿಂದ ತಿದ್ದುಪಡಿ ಮಸೂದೆಯನ್ನು ಕೇಂದ್ರ ಪರಿಸರ ಸಚಿವಾಲಯವು ಸಿದ್ಧಪಡಿಸಿತ್ತು. 1927ರ ಕಾಯ್ದೆಯ ಯಾವ ಅಂಶಗಳನ್ನು ತಿದ್ದುಪಡಿ ಮಾಡಲಾಗುತ್ತದೆ ಎಂಬ ವಿವರವನ್ನು ಒಳಗೊಂಡ 123 ಪುಟಗಳ ರಹಸ್ಯ ಸುತ್ತೋಲೆಯನ್ನು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಪರಿಸರ ಸಚಿವಾಲಯವು ಕಳುಹಿಸಿತ್ತು.

ತಿದ್ದುಪಡಿ ಮಸೂದೆಯ ಪ್ರಸ್ತಾವದಲ್ಲಿದ್ದ ಅಂಶಗಳು ಬುಡಕಟ್ಟು ಜನರ ಹಕ್ಕುಗಳಿಗೆ ಮಾರಕವಾಗಿವೆ ಎಂದು ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ‘90 ವರ್ಷಗಳ ಈ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇದೆ’ ಎಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಲೋಕಸಭೆಗೆ ತಿಳಿಸಿದ್ದರು. ಆದರೆ ಈಗ ದಿಢೀರ್ ಎಂದು ತಿದ್ದುಪಡಿ ಪ್ರಸ್ತಾವವನ್ನು ವಾಪಸ್ ಪಡೆಯಲಾಗಿದೆ.

ಜಾವಡೇಕರ್ ಅವರು ತಮ್ಮ ಹಿಂದಿನ ಹೇಳಿಕೆಯಿಂದ ಈಗ ಅಂತರ ಕಾಯ್ದುಕೊಂಡಿದ್ದಾರೆ. ‘11 ರಾಜ್ಯಗಳು ತಮ್ಮ ಅಗತ್ಯಕ್ಕೆ ಸಂಬಂಧಿಸಿದಂತೆ ಹಳೆಯ ಕಾಯ್ದೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದವು. ಅವುಗಳ ಕಾರ್ಯಸಾಧ್ಯತೆ ಬಗ್ಗೆ ಅಧಿಕಾರಿಗಳು ನಡೆಸಿದ್ದ ಅಧ್ಯಯನದ ವರದಿಯನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಲಾಗಿತ್ತು ಅಷ್ಟೆ’ ಎಂದು ಅವರು ಹೇಳಿದ್ದಾರೆ.

ಇದೇ ಡಿಸೆಂಬರ್‌ನಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದ ಜನಸಂಖ್ಯೆಯಲ್ಲಿ ಬುಡಕಟ್ಟು ಜನರ ಪ್ರಮಾಣ ಶೇ 75ಕ್ಕಿಂತಲೂ ಹೆಚ್ಚು. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಸರ್ಕಾರ ಈ ಪ್ರಸ್ತಾವವನ್ನು ಕೈಬಿಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆತಂಕ ಒಡ್ಡಿದ್ದ ಪ್ರಸ್ತಾವಗಳು

*ಅರಣ್ಯ ಕಾಯ್ದೆಯಲ್ಲಿ ಉಲ್ಲೇಖಿಸಲಾಗುವ ಯಾವುದೇ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಶಸ್ತ್ರಾಸ್ತ್ರವನ್ನು ಬಳಸಲು ಅರಣ್ಯಾಧಿಕಾರಿಗೆ ಅಧಿಕಾರ

*ಅರಣ್ಯ ಒತ್ತುವರಿ, ಅಕ್ರಮ ಪ್ರವೇಶ, ಅರಣ್ಯದಲ್ಲಿ ಬೆಂಕಿ ಹತ್ತಿಸುವುದು, ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವುದು, ಅರಣ್ಯ ಉತ್ಪನ್ನಗಳ ಸಂಗ್ರಹ, ವನ್ಯಜೀವಿಗಳಿಗೆ ತೊಂದರೆ ನೀಡಿದ ಪ್ರಕರಣಗಳಲ್ಲಿ ಶಸ್ತ್ರಾಸ್ತ್ರ ಬಳಸಲು ಅವಕಾಶವಿತ್ತು

*ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ, ಅರಣ್ಯಾಧಿಕಾರಿಯ ವಿರುದ್ಧ ಯಾವುದೇ ರೀತಿಯ ತನಿಖೆ ಆರಂಭಿಸುವಂತಿರಲಿಲ್ಲ

*ಅರಣ್ಯ ಪ್ರದೇಶದಲ್ಲಿ ವಾಸವಿರುವ ಬುಡಕಟ್ಟು ಜನರ ಹಕ್ಕುಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರಗಳಿಗೆ ಅಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT