ಮಂಗಳವಾರ, ಡಿಸೆಂಬರ್ 10, 2019
26 °C
ರಾಜಸ್ಥಾನ, ತೆಲಂಗಾಣ ವಿಧಾನಸಭೆ ಚುನಾವಣೆ: ಮತದಾನಕ್ಕೆ ಇನ್ನೂ ಆರು ದಿನವಷ್ಟೇ ಬಾಕಿ

ರಾಜಸ್ಥಾನ, ತೆಲಂಗಾಣ ವಿಧಾನಸಭೆ ಚುನಾವಣೆ: ಅಬ್ಬರದ ಪ್ರಚಾರ, ರಂಗೇರಿದ ಅಖಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ/ಹೈದರಾಬಾದ್‌: ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಅಬ್ಬರದ ಪ್ರಚಾರ ಮೇರೆ ಮೀರಿದೆ.

ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಡಿಸೆಂಬರ್‌ 7ರಂದು ಮತದಾನ ನಡೆಯಲಿದೆ. ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಡ, ಮಿಜೋರಾಂ, ತೆಲಂಗಾಣ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಡಿ.11ರಂದು ಪ್ರಕಟವಾಗಲಿದೆ.

ರಾಜಸ್ಥಾನದಲ್ಲಿ ಅಧಿಕಾರ ಹಿಡಿಯಲು ತೀವ್ರ ಸೆಣಸಾಟ ನಡೆಸಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಮರಳುಗಾಡಿನಲ್ಲಿ ಬೆವರಿಳಿಸುತ್ತಿದ್ದಾರೆ. ಪರಸ್ಪರ ಆರೋಪ, ಪ್ರತ್ಯಾರೋಪಗಳಿಂದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ರಾಜಸ್ಥಾನದಲ್ಲಿ ಮೊಕ್ಕಾಂ ಹೂಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅಖಾಡಕ್ಕೆ ಇಳಿದು ಪ್ರಚಾರಕ್ಕೆ ಮತ್ತಷ್ಟು ರಂಗು ತುಂಬಿದ್ದಾರೆ.

ಮತದಾರರ ಮನ ಗೆಲ್ಲಲು ನಾಯಕರು ದಿನವಿಡಿ ಬಿಡುವಿಲ್ಲದ ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಳ್ಳಿ, ಹಳ್ಳಿ ಸುತ್ತುತ್ತಿದ್ದಾರೆ.

ರಾಹುಲ್‌ ಗಾಂಧಿ ಶನಿವಾರ ಉದಯಪುರ, ಬಿಲ್ವಾರಾ ಮತ್ತು ಚಿತ್ತೋರಗಡದಲ್ಲಿ ಪ್ರಚಾರ ರ‍್ಯಾಲಿ ನಡೆಸಿದರು. ಮತ್ತೊಂದೆಡೆ ಅಮಿತ್‌ ಶಾ, ಜೋಧಪುರ, ಬಲೋತ್ರಾ ಮತ್ತು ಬಾರ್ಮರ್‌ನಲ್ಲಿ ರೋಡ್‌ ಶೋ ಮತ್ತು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು.

‘ನಿರ್ದಿಷ್ಟ ದಾಳಿ: ಮೋದಿ ರಾಜಕೀಯ ಬಂಡವಾಳ’

ಜೈಪುರ: ಭಾರತೀಯ ಸೇನೆ ಪಾಕಿಸ್ತಾನ ಗಡಿ ದಾಟಿ ನಡೆಸಿದ ನಿರ್ದಿಷ್ಟ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.


ಹೈದರಾಬಾದ್‌ನಲ್ಲಿ ಪ್ರಚಾರ ನಡೆಸುತ್ತಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್‌  ಪಿಟಿಐ ಚಿತ್ರ 

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಕೂಡ ಮೂರು ಬಾರಿ ಇಂತಹ ದಾಳಿ ನಡೆಸಿತ್ತು. ಆ ಬಗ್ಗೆ ಅವರು ಎಂದಿಗೂ ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಬಾಯ್ಬಿಡಲಿಲ್ಲ. ಎಲ್ಲ ದಾಳಿಗಳನ್ನು ರಹಸ್ಯವಾಗಿ ಇಡಲಾಗಿತ್ತು. ಸ್ವಾರ್ಥಕ್ಕಾಗಿ ಸೇನೆಯ ಯಶಸ್ಸನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುವಷ್ಟು ಕೀಳುಮಟ್ಟಕ್ಕೆ ಮನಮೋಹನ್‌ ಸಿಂಗ್‌ ಇಳಿಯಲಿಲ್ಲ ಎಂದು ಶ್ಲಾಘಿಸಿದರು.

‘ನಿರ್ದಿಷ್ಟ ದಾಳಿಯು ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವಾಗಿರಲಿಲ್ಲ. ಅದು ಸೇನೆಯ ನಿರ್ಧಾರವಾಗಿತ್ತು. ದಾಳಿಯ ಯಶಸ್ಸು ಕೂಡ ಭಾರತೀಯ ಸೇನೆ ಸೇರಬೇಕು. ಆದರೆ, ದುರದೃಷ್ಟವಶಾತ್‌ ಸೇನೆಗೆ ಸಿಗಬೇಕಾಗಿದ್ದ ಗೌರವ, ಮನ್ನಣೆಯನ್ನು ಮೋದಿ ಕಸಿದುಕೊಂಡು ತಮ್ಮ ಮುಡಿಗೇರಿಸಿಕೊಂಡರು’ ಎಂದು ರಾಹುಲ್‌ ಲೇವಡಿ ಮಾಡಿದರು.

‘ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಮೋದಿ ಸರ್ಕಾರ ನಿರ್ದಿಷ್ಟ ದಾಳಿಯ ವಿಷಯ ಬಹಿರಂಗಪಡಿಸಿತು’ ಎಂದು ಶುಕ್ರವಾರ ಉದಯಪುರದಲ್ಲಿ ಉದ್ಯಮಿಗಳ ಜತೆಗಿನ ಸಂವಾದದಲ್ಲಿ ಹೇಳಿದರು. ಅಧಿಕಾರಕ್ಕೆ ಬಂದು ಹತ್ತು ದಿನದಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಗಾಂಧಿ ಇದೇ ವೇಳೆ ಘೋಷಿಸಿದರು.

ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌, ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಇದ್ದರು.

ರಾಷ್ಟ್ರ ರಾಜಕಾರಣ: ನಾಯ್ಡು ಇಂಗಿತ

ರಾಷ್ಟ್ರ ರಾಜಕಾರಣ ಪ್ರವೇಶಿಸುವ ನಿರ್ಧಾರವನ್ನು ಬೇಕಾದರೆ ಪರಿಗಣಿಸಬಹುದು. ಆದರೆ, ತೆಲಂಗಾಣ ರಾಜಕೀಯ ಪ್ರವೇಶಿಸುವ ಇರಾದೆ ಇಲ್ಲ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ನಾಯಕ ಎನ್‌. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

‘ನಾನು ಎಂದಿಗೂ ಅಧಿಕಾರದ ಬೆನ್ನು ಬಿದ್ದವನಲ್ಲ. ಪ್ರಧಾನಿಯಾಗುವ ಹಪಾಹಪಿಯೂ ನನಗಿಲ್ಲ. ಆದರೆ, ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ’ ಎಂದು ಹೇಳಿದ್ದಾರೆ.

ಅಲ್ಕಾಪುರದಲ್ಲಿ ನಡೆದ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಎದುರಾಳಿಗಳು ಮತ್ತು ಮಾಧ್ಯಮಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಗಳಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಛೂ ಬಿಡುತ್ತಿದೆ ಎಂದು ಆಪಾದಿಸಿದರು.

 

ಯೋಧರಿಗೆ ಅವಮಾನ

ಉತ್ತರ ಪ್ರದೇಶ ಚುನಾವಣೆ ಗೆಲ್ಲಲು ನಿರ್ದಿಷ್ಟದಾಳಿ ನಡೆಸಲಾಗಿದೆ ಎನ್ನುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಭಾರತೀಯ ಯೋಧರ ತ್ಯಾಗ, ಬಲಿದಾನಗಳನ್ನುಅವಮಾನಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ.

ಜೋಧಪುರದಲ್ಲಿ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಅವರು, ನಿರ್ದಿಷ್ಟ ದಾಳಿ ಬಗ್ಗೆ ಇಲ್ಲಿಯವರೆಗೆ ಸಂಶಯ ವ್ಯಕ್ತಪಡಿಸುತ್ತಿದ್ದ ರಾಹುಲ್‌ ಬಾಬಾ ಈಗ ಅದು ನಡೆದಿದೆ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ ಎಂದರು. ನಿರ್ದಿಷ್ಟ ದಾಳಿಯೊಂದಿಗೆ ಭಾರತ ಕೂಡ ಯೋಧರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ವಿಶ್ವದ ಎರಡು ರಾಷ್ಟ್ರಗಳಾದ ಅಮೆರಿಕ ಮತ್ತು ಇಸ್ರೇಲ್‌ ಸಾಲಿಗೆ ಸೇರಿದೆ. ಯೋಧರ ಬೆನ್ನಿಗೆ ಸರ್ಕಾರ ಬಂಡೆಗಲ್ಲಿನಂತೆ ನಿಂತಿದೆ. ಹೀಗಾಗಿ ಅವರಿಗೆ ವಿಶ್ವಾಸ ಮೂಡಿದೆ ಎಂದರು.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಬಿಜೆಪಿ ಬದ್ಧವಾಗಿದೆ. ಈ ವಿಷಯದಲ್ಲಿ ಕಾಂಗ್ರೆಸ್‌ ತನ್ನ ನಿಲುವು ಬಹಿರಂಗಪಡಿಸಲಿ ಎಂದು ಶಾ ಸವಾಲು ಹಾಕಿದರು.

‘ನಾಯ್ಡು ಕೈ ತಪ್ಪುತ್ತಿರುವ ಆಂಧ್ರ’

ಆಂಧ್ರ ಪ್ರದೇಶ ನಿಧಾನವಾಗಿ ಚಂದ್ರಬಾಬು ನಾಯ್ಡು ಅವರ ಕೈಜಾರುತ್ತಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ತೆಲುಗು ನಟ ಪವನ್‌ ಕಲ್ಯಾಣ್ ವಿಶ್ಲೇಷಿಸಿದ್ದಾರೆ.

019ರಲ್ಲಿ ನಡೆಯುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದ್ದು ತಮ್ಮ ಪಕ್ಷ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.

ಆಡಳಿತ, ಪಕ್ಷ ಮತ್ತು ಶಾಸಕರ ಮೇಲೆ ನಾಯ್ಡು ಹಿಡಿತ ತಪ್ಪುತ್ತಿದ್ದು ಇದರಿಂದ ಅವರು ಹತಾಶರಾಗಿದ್ದಾರೆ ಎಂದರು.

**

ಬಿಜೆಪಿ– ಕಾಂಗ್ರೆಸ್‌ ಪ್ರತಿಷ್ಠೆ ಕಣ

ಜೋಧಪುರ: ರಾಜಸ್ಥಾನ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಅಧಿಕಾರ ಗದ್ದುಗೆ ಹಿಡಿಯಲು ತಂತ್ರ, ಪ್ರತಿತಂತ್ರಕ್ಕೆ ಮುಂದಾಗಿವೆ. 

ಮಾಜಿ ಮುಖ್ಯಮಂತ್ರಿ ಅಶೊಕ್‌ ಗೆಹ್ಲೋಟ್‌ ತವರು ಜಿಲ್ಲೆಯಾದ ಜೋಧಪುರದ 10 ಕ್ಷೇತ್ರಗಳನ್ನು ಪಡೆಯಲು ಕಾಂಗ್ರೆಸ್‌ ಹಾಗೂ ಬಿಜೆಪಿ ತೀವ್ರ ಸೆಣೆಸಾಟ ನಡೆಸಿವೆ. 

2013ರ ಚುನಾವಣೆಯಲ್ಲಿ ಈ ಜಿಲ್ಲೆಯಲ್ಲಿ 9 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಈ ಬಾರಿ 10 ಕ್ಷೇತ್ರಗಳಲ್ಲೂ ಜಯಗಳಿಸಲು ಎಲ್ಲ ರೀತಿಯ ಪ್ರಯತ್ನ ಮುಂದುವರಿಸಿರುವ ಕಾಂಗ್ರೆಸ್‌, ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಿದೆ.


ರಾಜಸ್ಥಾನ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪಕ್ಷದ ನಾಯಕರಾದ ಸಚಿನ್‌ ಪೈಲಟ್‌, ಅಶೋಕ್‌ ಗೆಹ್ಲೋಟ್‌ ಮುಂತಾದವರು ಭಾಗವಹಿಸಿದ್ದರು ಪಿಟಿಐ ಚಿತ್ರ

ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹೊಸ ಮುಖಗಳಿಗೆ ಟಿಕೆಟ್‌ ನೀಡಿದೆ. ಸರ್ದಾರಪುರ ಕ್ಷೇತ್ರದಿಂದ ಗೆಹ್ಲೋಟ್‌ ಮರು ಆಯ್ಕೆ ಬಯಸಿದ್ದಾರೆ. ಕಳೆದ ಬಾರಿ ಆಯ್ಕೆಯಾಗಿದ್ದ 9 ಶಾಸಕರನ್ನು ಬಿಜೆಪಿ ಮತ್ತೆ ಕಣಕ್ಕಿಳಿಸಿದೆ. 

ಗೆಹ್ಲೋಟ್‌ ವಿರುದ್ಧ ಬಿಜೆಪಿ ಶಂಭು ಸಿಂಗ್‌ ಖೇತಾಸರ್‌ ಅವರನ್ನು ಮತ್ತೆ ಕಣಕ್ಕಿಳಿಸಿದೆ. ಕಳೆದ ಬಾರಿ ಖೇತಾಸರ್‌ 18,478 ಮತಗಳ ಅಂತರದಿಂದ ಗೆಹ್ಲೋಟ್‌ ಅವರ ವಿರುದ್ಧ ಸೋತಿದ್ದರು. 

1998ರಿಂದ ಗೆಹ್ಲೋಟ್‌ ಅವರು ಸರ್ದಾರಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇದು ಅವರ ಭದ್ರಕೋಟೆ. ಗೆಹ್ಲೋಟ್‌ ಅವರನ್ನು ಸೋಲಿಸಲು ಕಳೆದ ನಾಲ್ಕು ಚುನಾವಣೆಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದರೂ, ಜಯಗಳಿಸಲು ಸಾಧ್ಯವಾಗಿಲ್ಲ.

ಜೋಧಪುರ್‌ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ರಾಜಕೀಯ ಕುಟುಂಬದ ಹಿನ್ನೆಲೆ ಇದ್ದವರಿಗೆ ಕಾಂಗ್ರೆಸ್‌ ಕಣಕ್ಕಿಳಿಸಿದೆ. ರಾಷ್ಟ್ರದ ಗಮನ ಸೆಳೆದಿದ್ದ ಭನ್ವಾರಿ ದೇವಿ ಕೊಲೆ ಪ್ರಕರಣದ ಆರೋಪಿಗಳಾದ ಮಹಿಪಾಲ್‌ ಮೆಡರ್ನಾ ಮತ್ತು ಮಲ್ಖನ್ ಸಿಂಗ್ ಬಿಷ್ಣೋಯಿ ಅವರ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. 

**

ಹಿಂದೂ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದೂ ಧರ್ಮದ ಮೂಲಸಾರ ಗೊತ್ತಿಲ್ಲ. ಭಗವದ್ಗೀತೆ ಏನು ಹೇಳುತ್ತದೆ ಎಂಬ ಕನಿಷ್ಠ ಜ್ಞಾನವೂ ಅವರಿಲ್ಲ.

-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

**

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ.

-ಪಿ.ಚಿದಂಬರಂ, ಕಾಂಗ್ರೆಸ್‌ ನಾಯಕ

**

ಐದು ರಾಜ್ಯಗಳ ಚುನಾವಣೆ ಸೋಲಿನೊಂದಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೊಸ ದಾಖಲೆ ಬರೆಯಲಿದ್ದಾರೆ.

-ಯೋಗಿ ಆದಿತ್ಯನಾಥ, ಉತ್ತರ ಪ್ರದೇಶದ ಮುಖ್ಯಮಂತ್ರಿ

**

ಕಾಂಗ್ರೆಸ್‌ ಬಳಿ ಸುಳ್ಳುಗಳಿಂದ ತುಂಬಿರುವ ಎಟಿಎಂ, ಬಿಜೆಪಿ ಅಭಿವೃದ್ಧಿಯ ಎಟಿಎಂ
– ಅಮಿತ್‌ ಶಾ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು