ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಆಘಾತ; ವಿನಾಶದತ್ತ ಹೆಬ್ಬಕ್ಕಗಳು: ಭಾರತೀಯ ವನ್ಯಜೀವಿ ಸಂಸ್ಥೆಯ ಕಳವಳ

Last Updated 28 ಜುಲೈ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತಕ್ಕೆ ವಿಶಿಷ್ಟವಾದ ಹೆಬ್ಬಕ್ಕ (ಗ್ರೇಟ್‌ ಇಂಡಿಯನ್ ಬಸ್ಟರ್ಡ್‌–ಜಿಐಬಿ) ವಿನಾಶದ ಅಂಚಿಗೆ ಬಂದಿವೆ. ಅತ್ಯುಚ್ಛ ವೋಲ್ಟೇಜ್‌ನ ವಿದ್ಯುತ್‌ ತಂತಿಗಳು ಹೆಬ್ಬಕ್ಕಗಳಿಗೆ ಮಾರಕವಾಗಿವೆ. ಈಗಲೇ ಕ್ರಮ ತೆಗೆದುಕೊಳ್ಳದೇ ಹೋದರೆ ಇವು ನಶಿಸಿಹೋಗುತ್ತವೆ’ ಎಂದು ಪರಿಸರ ಸಚಿವಾಲಯದ ವರದಿ ಹೇಳಿದೆ.

ಭಾರತೀಯ ವನ್ಯಜೀವಿ ಸಂಸ್ಥೆಯು (ಡಬ್ಲ್ಯುಐಐ) ಈ ವರದಿಯನ್ನು ಸಿದ್ಧಪಡಿಸಿದೆ.

‘ದೇಶದಲ್ಲಿ ಈಗ ಅಂದಾಜು 150 ಹೆಬ್ಬಕ್ಕಗಳು ಉಳಿದಿವೆ. ಅವುಗಳಲ್ಲಿ 100 ಹೆಬ್ಬಕ್ಕಗಳು ರಾಜಸ್ಥಾನದ ಜೈಸಲ್ಮೇರ್‌ನಲ್ಲಿವೆ. ರಾಜಸ್ಥಾನದ ಹೊರತಾಗಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕದ ಹಾವೇರಿ–ಕೊಪ್ಪಳ ಮತ್ತು ಆಂಧ್ರಪ್ರದೇಶದ ಕರ್ನೂಲಿನಲ್ಲಿ ಮಾತ್ರ ಹೆಬ್ಬಕ್ಕಗಳು ಇವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಹೆಬ್ಬಕ್ಕಗಳ ಆವಾಸದಲ್ಲಿರುವ ಉಚ್ಛ ವೋಲ್ಟೇಜ್‌ನ ವಿದ್ಯುತ್ ತಂತಿ ಜಾಲಗಳನ್ನು ಸ್ಥಳಾಂತರಿಸಬೇಕು. ಇಲ್ಲವೇ ಅವನ್ನು ನೆಲದಡಿಯ ವಿದ್ಯುತ್ ಜಾಲಗಳಾಗಿ ಪರಿವರ್ತಿಸಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತ್ವರಿತ ವಿನಾಶಕ್ಕೆ ಕಾರಣಗಳು

* ರಾಜಸ್ಥಾನದ ಜೈಸಲ್ಮೇರ್‌ ಮತ್ತು ಗುಜರಾತ್‌ನ ಕಛ್‌ನಲ್ಲಿ ಹೆಬ್ಬಕ್ಕಗಳ ಆವಾಸದಲ್ಲಿ ಉಚ್ಛ ವೋಲ್ಟೇಜ್‌ನ ವಿದ್ಯುತ್ ಜಾಲಗಳಿವೆ

* ಹೆಬ್ಬಕ್ಕಗಳ ದೃಷ್ಟಿ ತೀರಾ ಸೀಮಿತವಾದುದು. ಹಾರಾಟದ ವೇಳೆ ಅವು ಈ ತಂತಿಗಳನ್ನು ಗುರುತಿಸಲು ಸಾಧ್ಯವಿಲ್ಲ. ಹೀಗಾಗಿ ತಂತಿಗಳಿಗೆ ಡಿಕ್ಕಿಯಾಗಿ, ವಿದ್ಯುತ್ ಆಘಾತದಿಂದ ಸಾವನ್ನಪ್ಪುತ್ತವೆ

* 2017–18ರ ಅವಧಿಯಲ್ಲಿ ಜೈಸಲ್ಮೇರ್‌ ಒಂದರಲ್ಲೇ 5 ಹೆಬ್ಬಕ್ಕಗಳು ವಿದ್ಯುತ್ ಆಘಾತದಿಂದ ಸತ್ತಿವೆ. ಇವುಗಳ ವಾರ್ಷಿಕ ಸಹಜ ಸಾವಿನ ಪ್ರಮಾಣ ಶೇ 5. ಆದರೆ ವಿದ್ಯುತ್‌ ಆಘಾತದಿಂದ ಸಾವನ್ನಪ್ಪುವ ಹೆಬ್ಬಕ್ಕಗಳ ಪ್ರಮಾಣ ವಾರ್ಷಿಕ ಶೇ 15ರಷ್ಟು. ಹೀಗಾಗಿ ಇವು ವಿನಾಶದತ್ತ ಹೊರಟಿವೆ

* ಇವುಗಳ ಸಂತಾನೋತ್ಪತಿಯ ಅವಧಿಯೂ ದೀರ್ಘವಾದುದು. ಹೆಬ್ಬಕ್ಕಗಳು 1–2 ವರ್ಷಕ್ಕೊಮ್ಮೆ ಕೇವಲ ಒಂದು ಮೊಟ್ಟೆಯನ್ನಷ್ಟೇ ಇಡುತ್ತವೆ. ಈ ಮೊಟ್ಟೆಗಳು ಮರಿಯಾಗುವ ಪ್ರಮಾಣ ಶೇ 60–70ರಷ್ಟು ಇತ್ತು. ಆದರೆ ಈಗ ನಾಯಿಗಳು ಮತ್ತು ನರಿಗಳು ಈ ಮೊಟ್ಟೆಗಳನ್ನು ತಿನ್ನುವುದರಿಂದ ಮರಿಗಳಾಗುವ ಪ್ರಮಾಣ ಶೇ 40–50ಕ್ಕೆ ಇಳಿದಿದೆ. ಇದೂ ಸಹ ಅವುಗಳ ಸಂಖ್ಯೆ ವೃದ್ಧಿಯಾಗದೇ ಇರಲು ಪ್ರಮುಖ ಕಾರಣ

* ಕೃಷಿಯ ಮಾದರಿಯಲ್ಲಿ ಆದ ಬದಲಾವಣೆ ಸಹ ಇವುಗಳಿಗೆ ಮಾರಕವಾಗಿವೆ. ವರ್ಷದ ಎಲ್ಲಾ ಋತುಗಳಲ್ಲೂ ಬೇಸಾಯ ಮಾಡುವುದರಿಂದ ಇವುಗಳ ಆಹಾರದ ಮೂಲಕ್ಕೆ ಧಕ್ಕೆಯಾಗಿದೆ. ಅಲ್ಲದೆ ಕ್ರಮಿನಾಶಕಗಳ ಬಳಕೆಯಿಂದಲೂ ಇವುಗಳ ಆಹಾರದ ಮೂಲವನ್ನು ನಾಶ ಮಾಡಿವೆ. ಇದರಿಂದ ಹೆಬ್ಬಕ್ಕಗಳು ದುರ್ಬಲವಾಗುತ್ತಿವೆ. ಇದು ಅವುಗಳ ಜೀವನ ಮತ್ತು ಸಂತಾನೋತ್ಪತಿ ಮೇಲೆ ಪರಿಣಾಮ ಬೀರಿದೆ

* ಮಧ್ಯಪ್ರದೇಶದಲ್ಲಿ ಒಂದೂ ಹೆಬ್ಬಕ್ಕ ಉಳಿದಿಲ್ಲ

100 – ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಹೆಬ್ಬಕ್ಕಗಳು

25 – ಗುಜರಾತ್‌ನ ಕಛ್‌ನಲ್ಲಿರುವ ಹೆಬ್ಬಕ್ಕಗಳು

6 – ಕರ್ನಾಟಕದಲ್ಲಿ ಉಳಿದಿರುವ ಹೆಬ್ಬಕ್ಕಗಳು

6 – ಆಂಧ್ರಪ್ರದೇಶದಲ್ಲಿ ಉಳಿದಿರುವ ಹೆಬ್ಬಕ್ಕಗಳು

1 – ಮಹಾರಾಷ್ಟ್ರದಲ್ಲಿ ಉಳಿದಿರುವ ಹೆಬ್ಬಕ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT