ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಕಡಿತ: ಮನೆ ಅಗ್ಗ

Last Updated 24 ಫೆಬ್ರುವರಿ 2019, 20:27 IST
ಅಕ್ಷರ ಗಾತ್ರ

ನವದೆಹಲಿ: ಮನೆ, ಅಪಾರ್ಟ್‌ಮೆಂಟ್‌ ಖರೀದಿದಾರರ ಪಾಲಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಭಾನುವಾರ ಬಹುದೊಡ್ಡ ಕೊಡುಗೆ ನೀಡುವ ನಿರ್ಧಾರ ಕೈಗೊಂಡಿದೆ.

ನಿರ್ಮಾಣ ಹಂತದಲ್ಲಿ ಇರುವ ಗೃಹ ನಿರ್ಮಾಣ ಯೋಜನೆಗಳಿಗೆ ಜಿಎಸ್‌ಟಿ ದರವನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಲಾಗಿದೆ. ಕೈಗೆಟುಕುವ ಮನೆಗಳಿಗೆ ಇದ್ದ ಶೇ 8ರಷ್ಟು ತೆರಿಗೆಯನ್ನು ಈಗ ಶೇ 1ರಷ್ಟಕ್ಕೆ ಇಳಿಸಲಾಗಿದೆ.

ವ್ಯಾಖ್ಯಾನ ಬದಲು: ಕೈಗೆಟುಕುವ ಮನೆಗಳ ವ್ಯಾಖ್ಯಾನವನ್ನೂ ಮಂಡಳಿಯು ಬದಲಿಸಿದೆ. ಮಹಾನಗರಗಳಲ್ಲಿ 60 ಚದರ ಮೀಟರ್‌ ಅಳತೆಯ ₹ 45 ಲಕ್ಷ ವೆಚ್ಚ ತಗಲುವ ಮನೆಗಳು ಕೈಗೆಟುಕುವ ಮನೆಗಳು ಎಂದು ಪರಿಗಣಿಸಲು ಉದ್ದೇಶಿಸಲಾಗಿದೆ. ಇತರ ನಗರಗಳಲ್ಲಿ 90 ಚದರ ಮೀಟರ್‌ ಅಳತೆಯ ಮನೆ /ಅಪಾರ್ಟ್‌ಮೆಂಟ್‌ಗಳು ಇದರ ವ್ಯಾಪ್ತಿಗೆ ಬರಲಿವೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಧ್ಯಕ್ಷತೆಯಲ್ಲಿ ಭಾನುವಾರ ಇಲ್ಲಿ ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ವರ್ಷದ ಏಪ್ರಿಲ್‌ 1ರಿಂದ ಹೊಸ ಜಿಎಸ್‌ಟಿ ಜಾರಿಗೆ ಬರಲಿದೆ. ಹೊಸ ತೆರಿಗೆ ವ್ಯವಸ್ಥೆಯಡಿ, ಕಟ್ಟಡ ನಿರ್ಮಾಣಗಾರರು ಹುಟ್ಟುವಳಿ ತೆರಿಗೆ ಜಮೆ (ಐಟಿಸಿ) ಪ್ರಯೋಜನ ಕೇಳಲು ಅವಕಾಶ ಇರುವುದಿಲ್ಲ.

ಸದ್ಯಕ್ಕೆ,ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗಳಿಗೆ ಅಥವಾ ಮಾರಾಟ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾಯ್ದೆಯ ಎಲ್ಲ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಿರುವ ಪ್ರಮಾಣ ಪತ್ರ ನೀಡದ ಫ್ಲ್ಯಾಟ್‌ಗಳಿಗೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಪ್ರಮಾಣಪತ್ರ ನೀಡಿದ್ದರೆ ಜಿಎಸ್‌ಟಿ ವಿಧಿಸಲಾಗುತ್ತಿಲ್ಲ.

ಲಾಟರಿ ಜಿಎಸ್‌ಟಿ; ನಿರ್ಧಾರ ಮುಂದಕ್ಕೆ: ಲಾಟರಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವುದನ್ನು ಮಂಡಳಿಯು ಮುಂದೂಡಿದೆ. ‘ಈ ಸಂಬಂಧ ರಚಿಸಲಾಗಿರುವ ಸಚಿವರ ಸಮಿತಿಯು ಮತ್ತೆ ಸಭೆ ಸೇರಿ ನಿರ್ಧಾರಕ್ಕೆ ಬರಲಿದೆ’ ಎಂದು ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ಸದ್ಯಕ್ಕೆ, ರಾಜ್ಯ ಸರ್ಕಾರಗಳು ನಿರ್ವಹಿಸುವ ಲಾಟರಿಗಳಿಗೆ ಶೇ 12ರಷ್ಟು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು ನಡೆಸುವ ಲಾಟರಿಗಳಿಗೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.

*
ಜಿಎಸ್‌ಟಿ ಕಡಿತದ ಈ ನಿರ್ಧಾರವು ವಸತಿ ನಿರ್ಮಾಣ ಯೋಜನೆಗಳಿಗೆ ಖಂಡಿತವಾಗಿಯೂ ಉತ್ತೇಜನ ನೀಡಲಿದೆ.
-ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT