ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ ಲಡಾಯಿಗೆ ರಂಗ ಸಜ್ಜು

ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿ ಅಧಿಕೃತ ಅಭ್ಯರ್ಥಿ ಇನ್ನೂ ನಿಗೂಢ!
Last Updated 24 ಏಪ್ರಿಲ್ 2018, 18:00 IST
ಅಕ್ಷರ ಗಾತ್ರ

ಬಾದಾಮಿ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿಯಿಂದ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಮಂಗಳವಾರ ಇಲ್ಲಿ ನಾಮಪತ್ರ ಸಲ್ಲಿಸಿದರು.

ರಾಜ್ಯದ ಮುಖ್ಯಮಂತ್ರಿ ಹಾಗೂ ಗಣಿ ನಾಡಿನ ಶಕ್ತಿ ರಾಜಕಾರಣದ ನಡುವಿನ ಹಣಾಹಣಿಗೆ ವೇದಿಕೆ ಒದಗಿಸಿರುವ ಚಾಲುಕ್ಯರ ರಾಜಧಾನಿ ಬಾದಾಮಿ, ಇದೀಗ ದೇಶದ ಗಮನ ಸೆಳೆದಿದೆ.

ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದಲೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೇ’ ಎಂದು ಪ್ರಶ್ನಿಸಿದರು. ಆ ಮೂಲಕ ’ಸಿ.ಎಂಗೆ ಸೋಲುವ ಭೀತಿ’ ಎಂಬ ಬಿಜೆಪಿ ಕುಹಕಕ್ಕೆ ತಿರುಗೇಟು ನೀಡಿದರು.

‘ಉತ್ತರ ಕರ್ನಾಟಕದ ಜನರ ಪ್ರೀತಿಗೆ ಮಣಿದು ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನಗೆ ಟಿಕೆಟ್‌ ನೀಡುವಂತೆ ಈ ಭಾಗದ ಪಕ್ಷದ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ತಂದಿದ್ದರು’ ಎಂದು ಹೇಳಿದ ಅವರು, ‘ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿಗೆ ಸೋಲುವ ಭೀತಿ ಎದುರಾಗಿದೆಯೇ?’ ಎಂದು ಟಾಂಗ್ ನೀಡಿದರು.

ಬಿಜೆಪಿ ಅಧಿಕೃತ ಅಭ್ಯರ್ಥಿ ಯಾರು?:  ಸಿದ್ದರಾಮಯ್ಯ ಬರುವುದಕ್ಕೆ ಕೆಲ ಹೊತ್ತಿಗೆ ಮುನ್ನ ಸಂಸದ ಬಿ.ಶ್ರೀರಾಮುಲು ಉಮೇದುವಾರಿಕೆ ಸಲ್ಲಿಸಿದ್ದರು. ಅವರೊಂದಿಗೆ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪುರ ಕೂಡ ನಾಮಪತ್ರ ಸಲ್ಲಿಸಿದರು. ಇದರಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಯಾರು ಎಂಬ ಕುತೂಹಲ ಮಾತ್ರ ನಾಮಪತ್ರ ಹಿಂಪಡೆಯುವ ದಿನದವರೆಗೂ (ಏ. 27) ಉಳಿಯಲಿದೆ.

ಶ್ರೀರಾಮುಲು ಅವರನ್ನು ಬೆಂಬಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ರಾಷ್ಟ್ರೀಯ ಮುಖಂಡ ಪ್ರಕಾಶ್‌ ಜಾವಡೇಕರ್‌, ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಬಂದಿದ್ದರು.

‘ಚಾಮುಂಡೇಶ್ವರಿಗೆ ಹೆದರಿ ಬನಶಂಕರಿ ಸನ್ನಿಧಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಇಲ್ಲಿಯೂ ದೇವಿಯ ಆಶೀರ್ವಾದ ಸಿಗುವುದಿಲ್ಲ. ಬಾದಾಮಿಯಲ್ಲಿ ಬಿಜೆಪಿ ಗೆಲುವು ಶತಃಸಿದ್ಧ’ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.

ಭರ್ಜರಿ ಬಲ ಪ್ರದರ್ಶನ: ಇಬ್ಬರ ನಾಮಪತ್ರ ಸಲ್ಲಿಕೆಗೂ ಮುನ್ನ ಹಾಗೂ ನಂತರ ಕಾಂಗ್ರೆಸ್– ಬಿಜೆಪಿಯ ಭರ್ಜರಿ ಬಲ ಪ್ರದರ್ಶನಕ್ಕೆ ಈ ಪುಟ್ಟ ಪಟ್ಟಣ ಸಾಕ್ಷಿಯಾಯಿತು. ಬಿರು ಬಿಸಿಲನ್ನೂ ಲೆಕ್ಕಿಸದೇ ನೆರೆದಿದ್ದ ಸಾವಿರಾರು ಬೆಂಬಲಿಗರು ಕಾಂಗ್ರೆಸ್, ಬಿಜೆಪಿ ಬಾವುಟ ಬೀಸಿ ಸಂಭ್ರಮಿಸಿದರು.

ಮೆರವಣಿಗೆ ವೇಳೆ ತೆರೆದ ವಾಹನದಲ್ಲಿ ಸಾಗಿದ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ, ಸಚಿವರಾದ ಆರ್.ಬಿ. ತಿಮ್ಮಾಪುರ, ಉಮಾಶ್ರೀ, ಶಾಸಕರಾದ ಸಿ.ಎಂ. ಇಬ್ರಾಹಿಂ, ಬಿ.ಬಿ. ಚಿಮ್ಮನಕಟ್ಟಿ ಸಾಥ್ ನೀಡಿದರು. ಬಿಜೆಪಿ ಮೆರವಣಿಗೆಯಲ್ಲಿ ಶ್ರೀರಾಮುಲು ಭಾಗವಹಿಸಲಿಲ್ಲ. ಬದಲಿಗೆ ಸಂಸದ ಪಿ.ಸಿ. ಗದ್ದಿಗೌಡರ ನೇತೃತ್ವ ವಹಿಸಿದ್ದರು.

ಮುಂಜಾನೆಯಿಂದ ಮಧ್ಯಾಹ್ನದವರೆಗೂ ಪಟ್ಟಣದ ಬಸವೇಶ್ವರ ವೃತ್ತದಿಂದ ವೀರ ಪುಲಿಕೇಶಿ ಕಾಲೇಜುವರೆಗಿನ ರಸ್ತೆಯಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ಜನ, ವಾಹನ ದಟ್ಟಣೆ ಉಂಟಾಗಿ ಗದಗ– ಬಾಗಲಕೋಟೆ ಹೆದ್ದಾರಿಯಲ್ಲಿ 4 ತಾಸು ಸಂಚಾರ ವ್ಯತ್ಯಯವಾಯಿತು.

ಮನವೊಲಿಕೆ ಯಶಸ್ವಿ: ಈ ಮಧ್ಯೆ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಮುಖಂಡ ಪಟ್ಟಣಶೆಟ್ಟಿಯವರ ಮನವೊಲಿಸಲು ಶ್ರೀರಾಮುಲು ಯಶಸ್ವಿಯಾಗಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯಲು ಅವರು ಒಪ್ಪಿದ್ದಾರೆ ಎಂದು ಗೊತ್ತಾಗಿದೆ.

ಇದಕ್ಕೂ ಮುನ್ನ, ನಾಮಪತ್ರ ವಾಪಸ್‌ ಪಡೆಯುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣಶೆಟ್ಟಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ‘ಪಟ್ಟಣಶೆಟ್ಟಿ ಜತೆ ಮಾತುಕತೆ ನಡೆಸಿದ್ದೇನೆ. ಯಾವುದೇ ಗೊಂದಲ ಇಲ್ಲ. ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ’ ಎಂದು ತಿಳಿಸಿದರು.

ಬಿಜೆಪಿ ‘ಬಿ’ ಫಾರಂ ಯಾರಿಗೆ?

ಶ್ರೀರಾಮುಲು ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದರೆ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪುರ ಅವರು ಬಿಜೆಪಿ ಹಾಗೂ ಪಕ್ಷೇತರ ಎಂದು ತಲಾ ಎರಡು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

‘ನಾಮಪತ್ರ ಪರಿಶೀಲನೆ ಕಾರ್ಯ ಬುಧವಾರ ನಡೆಯಲಿದೆ. ಈ ವೇಳೆ ಪಕ್ಷದಿಂದ ‘ಬಿ’ಫಾರಂ ಯಾರು ಪಡೆದಿದ್ದಾರೋ ಅವರನ್ನು ಅಧಿಕೃತವಾಗಿ ಪರಿಗಣಿಸಲಿದ್ದೇವೆ’ ಎಂದು ಚುನಾವಣಾಧಿಕಾರಿ ಬಿ.ರಮೇಶ ಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಇಬ್ಬರಿಂದಲೂ ಪೂಜೆ ಸಲ್ಲಿಕೆ

ನಾಮಪತ್ರ ಸಲ್ಲಿಕೆಯ ನಂತರ ಸಮೀಪದ ಶಿವಯೋಗ ಮಂದಿರಕ್ಕೆ ಭೇಟಿ ನೀಡಿದ ಬಿ.ಶ್ರೀರಾಮುಲು, ಹಾನಗಲ್ ಕುಮಾರಸ್ವಾಮಿಗಳ ಗದ್ದುಗೆ ದರ್ಶನ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಬನಶಂಕರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಿದರು.

ಹಳೆ ಶಿಷ್ಯನೊಂದಿಗೆ ಮುಖಾಮುಖಿ!

ಜೆಡಿಎಸ್‌ ಅಭ್ಯರ್ಥಿ ಹನುಮಂತ ಮಾವಿನಮರದ ಅವರು 2005ರಲ್ಲಿ ಸಿದ್ದರಾಮಯ್ಯ ಅವರ ಅಖಿಲ ಭಾರತ ಪ್ರಗತಿಪರ ಜನತಾದಳದಿಂದ (ಎಬಿಪಿಜೆಡಿ) ಸ್ಪರ್ಧಿಸಿ ಹಂಸನೂರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ನಂತರ ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ ಸೇರಿದ್ದರು. ಆಗ, ಗುಳೇದಗುಡ್ಡ ಶಾಸಕರಾಗಿದ್ದ ಎಚ್.ವೈ. ಮೇಟಿ ಅವರ ಜೊತೆ ಉಂಟಾದ ವೈಮನಸ್ಸಿನಿಂದ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ಇದೀಗ ಗುರು–ಶಿಷ್ಯರು ಬಾದಾಮಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾರೆ.

ಅದೃಷ್ಟ ಪಣಕ್ಕಿಟ್ಟ 4ನೇ ಸಿ.ಎಂ!

ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ಅದೃಷ್ಟ ಪಣಕ್ಕಿಟ್ಟ ನಾಲ್ಕನೇ ಮುಖ್ಯಮಂತ್ರಿ ಎನಿಸಿದ್ದಾರೆ.

1962ರ ಚುನಾವಣೆಯಲ್ಲಿ ಹೊಸದುರ್ಗದಲ್ಲಿ ಸೋಲುಂಡಿದ್ದ ಕಾಂಗ್ರೆಸ್‌ನ ಅಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಸ್. ನಿಜಲಿಂಗಪ್ಪ ಅವರು ಬಾಗಲಕೋಟೆ ಕ್ಷೇತ್ರದ ಶಾಸಕ ಬಿ.ಟಿ. ಮುರನಾಳರಿಂದ ರಾಜೀನಾಮೆ ಕೊಡಿಸಿ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.

1980 ಹಾಗೂ 1991ರ ಲೋಕಸಭಾ ಚುನಾವಣೆಯಲ್ಲಿ ಕ್ರಮವಾಗಿ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ ಹಾಗೂ ರಾಮಕೃಷ್ಣ ಹೆಗಡೆ ಇಲ್ಲಿಂದಲೇ ಅದೃಷ್ಟ ಪಣಕ್ಕಿಟ್ಟಿದ್ದರು. ವೀರೇಂದ್ರ ಪಾಟೀಲರು ಗೆಲುವಿನ ನಗೆ ಬೀರಿದ್ದರೆ, ರಾಮಕೃಷ್ಣ ಹೆಗಡೆ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT