ಗುರುವಾರ , ಏಪ್ರಿಲ್ 9, 2020
19 °C

ಗುಜರಾತ್‌ ರೈಲ್ವೆ ಸುರಕ್ಷತಾ ಆ್ಯಪ್‌ಗೆ ಪಾಕಿಸ್ತಾನದ ರೈಲಿನ ಚಿತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಪ್ರಯಾಣಿಕರ ಸುರಕ್ಷತೆಗಾಗಿ ಆ್ಯಪ್‌ ಹೊರ ತಂದಿದ್ದ ಗುಜರಾತ್‌ ರೈಲ್ವೆ ಪೊಲೀಸರು ಮುಜುಗರ ಅನುಭವಿಸುವಂಥ ಪರಿಸ್ಥಿತಿ ಎದುರಾಗಿದೆ. 

ಆ್ಯಪ್‌ನ ಡ್ಯಾಶ್‌ಬೋರ್ಡ್‌ಗೆ ಪಾಕಿಸ್ತಾನದ ರೈಲಿನ ಚಿತ್ರವನ್ನು ಅಳವಡಿಸಿದ್ದ ರೈಲ್ವೆ ಪೊಲೀಸರು ಪೇಚಿಗೆ ಸಿಲುಕಿದ್ದು, ಸದ್ಯ ಚಿತ್ರವನ್ನು ತೆಗೆದು ಹಾಕಿದ್ದಾರೆ. 

ರೈಲು ಪ್ರಯಾಣಿಕರ ಸುರಕ್ಷತೆಗಾಗಿ ಗುಜರಾತ್‌ ರೈಲ್ವೆ ಪೊಲೀಸರು ಶನಿವಾರ ‘ಸುರಕ್ಷಿತ್‌ ಸಫರ್‌’ ಎಂಬ ಆ್ಯಪ್‌ ಅನ್ನು ಲೋಕಾರ್ಪಣೆ ಮಾಡಿದ್ದರು. ಈ ಆ್ಯಪ್‌ನಲ್ಲಿ ಯಡವಟ್ಟು ಸಂಭವಿಸಿತ್ತು. ಆ್ಯಪ್‌ಗೆ ಪಾಕಿಸ್ತಾನದ ರೈಲಿನ ಚಿತ್ರ ಹಾಕಲಾಗಿತ್ತು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಹಲವರು ಎಚ್ಚರಿಸಿದ ನಂತರ ರೈಲ್ವೆ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿತ್ತು. 

‘ಆ್ಯಪ್‌ ಅನ್ನು ಸುಂದರವಾಗಿ ವಿನ್ಯಾಸ ಮಾಡುವ ದೃಷ್ಟಿಯಿಂದ ಡೆವಲಪರ್‌ಗಳು ರೈಲುಗಳ ಆಕರ್ಷಕ ಚಿತ್ರಗಳನ್ನು ಡ್ಯಾಶ್‌ಬೋರ್ಡ್‌ಗೆ ಹಾಕಿದ್ದಾರೆ. ಆಗ ಪ್ರಮಾದವಶಾತ್‌ ಪಾಕಿಸ್ತಾನದ ರೈಲಿನ ಚಿತ್ರಗಳು ಬಂದುಬಿಟ್ಟಿವೆ. ಈ ವಿಚಾರ ಗೊತ್ತಾಗುತ್ತಲೇ ಚಿತ್ರ ತೆಗೆಯುವಂತೆ ಡೆವೆಲಪರ್‌ಗಳಿಗೆ ತಿಳಿಸಲಾಯಿತು. ಇದು ಉದ್ದೇಶಪೂರ್ವಕ ಕೃತ್ಯವಲ್ಲ,’ ಎಂದು ರೈಲ್ವೆ ಅಪರಾಧ ವಿಭಾಗದ ಡಿಐಜಿ ಗೌತಮ್‌ ಪರ್ಮರ್‌ ತಿಳಿಸಿದ್ದಾರೆ. 

‘ಸುರಕ್ಷಿತ್‌ ಸಫರ್‌’ ಆ್ಯಪ್‌ ಅನ್ನು ಗುಜರಾತ್‌ನ ಗೃಹ ಸಚಿವ ಪ್ರದೀಪ್‌ ಸಿನ್ಹ ಜಡೇಜಾ ಅವರು ಲೋಕಾರ್ಪಣೆ ಮಾಡಿದ್ದರು. 

ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ರೈಲ್ವೆ ಪೊಲೀಸರ ನೆರವು ಪಡೆಯಲು ಅನುಕೂಲವಾಗುವಂತೆ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ರೈಲಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ಗೊತ್ತಾದರೆ ಪ್ರಯಾಣಿಕರು ಈ ಆ್ಯಪ್‌ ಮೂಲಕ ಪೊಲೀಸರಿಗೆ ಮಾಹಿತಿಯನ್ನೂ ರವಾನಿಸಬಹುದಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು