ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ನಟಿ ಶ್ರೀದೇವಿ ಸಾವು: ‘ಸಂವೇದನಾರಹಿತ ವರದಿ’ಗೆ ಆಕ್ರೋಶ

Last Updated 27 ಫೆಬ್ರುವರಿ 2018, 20:25 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಶ್ರೀದೇವಿ ಸಾವಿನ ಬಗ್ಗೆ ಸುದ್ದಿ ವಾಹಿನಿಗಳು ‘ಅತ್ಯಂತ ನೀತಿಗೆಟ್ಟ ಮತ್ತು ಸಂವೇದನಾರಹಿತ’ ರೀತಿಯಲ್ಲಿ ವರದಿ ಪ್ರಕಟಿಸಿವೆ ಎಂದು ಬಾಲಿವುಡ್‌ ನಟ, ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿನ ಹಿಂದೆ ವಿವಿಧ ಷಡ್ಯಂತ್ರಗಳಿರಬಹುದು ಎಂಬುದನ್ನು ಪಟ್ಟಿ ಮಾಡಿರುವ ವಾಹಿನಿಗಳ ವಿರುದ್ಧ ನಟಿ ವಿದ್ಯಾ ಬಾಲನ್‌ ಮತ್ತು ನಟ, ನಿರ್ದೇಶಕ ಫರ್ಹಾನ್‌ ಅಖ್ತರ್‌ ಸಿಟ್ಟು ಹೊರಗೆಡವಿದ್ದಾರೆ.

‘ಈ ನೀತಿಹೀನತೆಗೆ ಕೊನೆಯೆಂಬುದಿಲ್ಲ’ ಎಂದು ಫರ್ಹಾನ್‌ ಟ್ವೀಟ್‌ ಮಾಡಿದ್ದಾರೆ. ಶ್ರೀದೇವಿಯ ಫೋಟೊ ಜತೆಗೆ ‘ನೀನು ಶಾಂತಿಯಿಂದ ಇರಲು ಅವರು ಅವಕಾಶ ಕೊಡಲಿ...’ ಎಂದು ವಿದ್ಯಾ ಬಾಲನ್‌ ಟ್ವೀಟ್‌ ಮಾಡಿದ್ದಾರೆ.

‘ಎಂತಹ ನಾಚಿಕೆಗೇಡು, ಮಾಧ್ಯಮದಲ್ಲಿ ತಮ್ಮ ಸೂಪರ್‌ಸ್ಟಾರ್‌ ಶ್ರೀದೇವಿ ಕೊಲೆಯಾಗುತ್ತಿರುವುದನ್ನು ಅವರ ಅಭಿಮಾನಿಗಳು ಸುಮ್ಮನೆ ನೋಡುತ್ತಿದ್ದಾರೆ’ ಎಂದು ಶ್ರೀದೇವಿ ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. ‘ಶ್ರೀದೇವಿಯ ಸಾವನ್ನು ಮಾಧ್ಯಮವು ಮನರಂಜನೆಗೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು’ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿ.ವಿ. ಆಫ್‌ ಮಾಡಿ ಕುಳಿತುಕೊಳ್ಳುವಂತೆ ‌ವಸ್ತ್ರ ವಿನ್ಯಾಸಕಾರ್ತಿ ಮಸಬಾ ಮಂತೇನಾ ಹೇಳಿದ್ದಾರೆ.

‘ದಂತಕತೆಯಾಗಿರುವ ಕಲಾವಿದೆಯೊಬ್ಬರ ಸಾವಿನ ಬಗ್ಗೆ ಈ ರೀತಿಯ ವರದಿಗಾರಿಕೆ ಆಶ್ಚರ್ಯ ಹುಟ್ಟಿಸಿದೆ. ಈ ಜನರು ಶಾಂತಿಯಿಂದ ಮಲಗುವುದು ಸಾಧ್ಯವೇ? ಪ್ರತಿಷ್ಠಿತ ವಾಹಿನಿಗಳಲ್ಲಿ ಕೂಡ ಇಂತಹ ಗುಣಮಟ್ಟದ ವರದಿ ಪ್ರಕಟವಾಗಿರುವುದು ನಾಚಿಕೆಗೇಡು...’ ಎಂದು ಸೋನು ಸೂದ್‌ ಪ್ರತಿಕ್ರಿಯೆ ನೀಡಿದ್ದಾರೆ.

ಅರಬ್‌ ಸಂಯುಕ್ತ ಸಂಸ್ಥಾನದಲ್ಲಿರುವ ಭಾರತದ ರಾಯಭಾರಿ ನವದೀಪ್‌ ಸೂರಿ ಅವರೂ ಮಾಧ್ಯಮವು ವರದಿಗಳ ರೂಪದಲ್ಲಿ ವದಂತಿ ಹರಡಬಾರದು ಎಂದಿದ್ದಾರೆ. ‘ಶ್ರೀದೇವಿ ಸಾವಿನಲ್ಲಿ ಮಾಧ್ಯಮದ ಆಸಕ್ತಿ ಅರ್ಥವಾಗುತ್ತದೆ. ಆದರೆ ಊಹಾ‍ಪೋಹಗಳಿಂದ ಯಾವುದೇ ಪ್ರಯೋಜನ ಇಲ್ಲ...’ ಎಂದು ಸೂರಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT