ಶನಿವಾರ, ಫೆಬ್ರವರಿ 29, 2020
19 °C

ವರನ ತಂದೆ ಜತೆ ವಧುವಿನ ತಾಯಿ ಪರಾರಿ: ಮಕ್ಕಳ ವಿವಾಹಕ್ಕೆ ಕಂಟಕವಾಯ್ತು ಹಳೇ ಪ್ರೇಮ

ಪಿಟಿಐ Updated:

ಅಕ್ಷರ ಗಾತ್ರ : | |

Marriage

ಸೂರತ್: ವಿವಾಹ ನಿಶ್ಚಯವಾದದ್ದು ಯುವ ಜೋಡಿಗೆ, ಆದರೆ ಜತೆಯಾಗಿ ಪರಾರಿಯಾದದ್ದು ಹಳೆಯ ಪ್ರೇಮಿಗಳು. ಹಳೆಯ ಪ್ರಿಯತಮ–ಪ್ರೇಯಸಿ ಮತ್ತಾರೋ ಅಲ್ಲ, ಮದುಮಗನ ತಂದೆ ಮತ್ತು ಮದುಮಗಳ ತಾಯಿ!

ಹೌದು, ವರನ ತಂದೆ ಜತೆ ವಧುವಿನ ತಾಯಿ ಪರಾರಿಯಾದ ವಿಚಿತ್ರ ಪ್ರಸಂಗವೊಂದು ಗುಜರಾತ್‌ನಲ್ಲಿ ವರದಿಯಾಗಿದೆ. ಎರಡೂ ಕುಟುಂಬಗಳ ಮಧ್ಯೆ ವಿವಾಹ ಸಂಬಂಧ ಏರ್ಪಟ್ಟಿತ್ತು. ಅಷ್ಟರಲ್ಲಿ ವರನ ತಂದೆ ಹಿಮ್ಮತ್ ಪಟೇಲ್ (43) ಮತ್ತು ವಧುವಿನ ತಾಯಿ ಶೋಭನಾ ರಾವಲ್ (42) ಮಧ್ಯೆ ಇದ್ದ ಹಳೆಯ ಪ್ರೇಮ ಮತ್ತೆ ಚಿಗುರಿದೆ. ಇಬ್ಬರೂ ನಾಪತ್ತೆಯಾಗಿದ್ದಾರೆ.

‘ಕತಾರ್‌ಗ್ರಾಮ್‌ನ ಹಿಮ್ಮತ್ ಪಟೇಲ್ ಹಾಗೂ ವೇಜಾಲ್‌ಪೋರ್‌ನ ರಾವಲ್ ಇಬ್ಬರಿಗೂ ಚಿಕ್ಕಂದಿನಿಂದಲೇ ಪರಿಚಯವಿತ್ತು. ರಾವಲ್ ಮದುವೆಯಾಗಿ ನವ್‌ಸಾರಿಗೆ ತೆರಳುವುದಕ್ಕೂ ಮುನ್ನ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸವಾಗಿದ್ದರು. ಇಬ್ಬರೂ ಜನವರಿ 10ರಿಂದ ನಾಪತ್ತೆಯಾಗಿದ್ದಾರೆ’ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

‘ಇಬ್ಬರಿಗೂ ಮೊದಲೇ ಪರಿಚಯವಿದ್ದುದರಿಂದ ಅವರು ಹಳೆ ಪ್ರೀತಿಯನ್ನು ಮತ್ತೆ ಗಟ್ಟಿಗೊಳಿಸಲು ನಿರ್ಧರಿಸಿರಬಹುದು. ಹೀಗಾಗಿ ಒಟ್ಟಿಗೆ ಓಡಿಹೋಗಿರಬಹುದು. ರಾವಲ್ ಮಗಳನ್ನು ತಮ್ಮ ಮಗನಿಗೆ ತಂದುಕೊಳ್ಳಲು ಪಟೇಲ್‌ ಮುಂದಾದ ಬಳಿಕ ಇಬ್ಬರೂ ಮತ್ತೆ ಭೇಟಿಯಾಗಿದ್ದರು. ಉಭಯ ಕುಟುಂಬಗಳು ಮದುವೆ ಸಿದ್ಧತೆಯಲ್ಲಿದ್ದಾಗ ಅವರು ನಾಪತ್ತೆಯಾಗಿದ್ದಾರೆ’ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಘಟನೆಯಿಂದಾಗಿ ಮುಜುಗರಕ್ಕೊಳಗಾಗಿದ್ದೇವೆ ಎಂದು ರಾವಲ್ ಪತಿ ಹೇಳಿದ್ದಾರೆ. ಫೆಬ್ರುವರಿ ಎರಡನೇ ವಾರ ನಡೆಯಬೇಕಿದ್ದ ವಿವಾಹವನ್ನು ರದ್ದುಗೊಳಿಸಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಈ ಕುರಿತು ಉಭಯ ಕುಟುಂಬಗಳೂ ಪೊಲೀಸರಿಗೆ ದೂರು ನೀಡಿವೆ.

‘ನವ್‌ಸಾರಿ ಪೊಲೀಸರೂ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಾವೂ ನಿಗಾವಹಿಸಿದ್ದೇವೆ. ಇಬ್ಬರನ್ನೂ ಇನ್ನಷ್ಟೇ ಪತ್ತೆಮಾಡಬೇಕಿದೆ’ ಎಂದು ಕತಾರ್‌ಗ್ರಾಮ್‌ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಡಿ.ಗೊಹಿಲ್ ತಿಳಿಸಿದ್ದಾರೆ. ನಾಪತ್ತೆಯಾಗಿರುವ ಇಬ್ಬರೂ ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು