ಶುಕ್ರವಾರ, ನವೆಂಬರ್ 15, 2019
20 °C

ಬಂಗಲೆ ಖರೀದಿ: ಮುಸ್ಲಿಂ ದಂಪತಿಗೆ ನೆಮ್ಮದಿ ತಂದ ಹೈಕೋರ್ಟ್ ಆದೇಶ

Published:
Updated:

ಅಹಮದಾಬಾದ್: ಹಿಂದೂ ಉದ್ಯಮಿಯಿಂದ ಖರೀದಿಸಿದ್ದ ಬಂಗಲೆ ಬಳಸಲಾಗದೆ ಕಷ್ಟ ಎದುರಿಸುತ್ತಿದ್ದ ಮುಸ್ಲಿಂ ಉದ್ಯಮಿಯ ಕುಟುಂಬಕ್ಕೆ ಹೈಕೋರ್ಟ್ ಆದೇಶ ಸ್ವಲ್ಪಮಟ್ಟಿನ ನೆಮ್ಮದಿ ನೀಡಿದೆ. ಉದ್ದೇಶಿತ ಆಸ್ತಿ ಪರಭಾರೆಗೆ ಸಂಬಂಧಿಸಿ ಮುಂದಿನ ಆದೇಶವರೆಗೂ ಯಾವುದೇ ತನಿಖೆ ನಡೆಸಬಾರದು ಎಂದು ಗುಜರಾತ್‌ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈ ಸಂಬಂಧ ಕಂದಾಯ ಇಲಾಖೆಯ ವಿಶೇಷ ಕಾರ್ಯದರ್ಶಿ (ಎಸ್ಎಸ್‌ಆರ್‌ಡಿ) ಮತ್ತು ಇತರರಿಗೆ ನೋಟಿಸ್‌ ಜಾರಿಯಾಗಿದೆ. ವಡೋದರ ನಗರದ ಕೇಸರ್‌ಭಾಗ್ ಸೊಸೈಟಿಯಲ್ಲಿದ್ದ ಬಂಗಲೆಯನ್ನು ಹಿಂದೂ ಉದ್ಯಮಿ ಗೀತಾ ಗರೊಡಾ ಅವರಿಂದ ₹ 6 ಕೋಟಿಗೆ ಮುಸ್ಲಿಂ ಉದ್ಯಮಿ ಫೈಸಲ್‌ ವೈ.ಫಜ್ಲಾನಿ ಮತ್ತು ಅವರ ಪತ್ನಿ ಜೀನತ್ ಖರೀದಿಸಿದ್ದರು. 

ಖರೀದಿಗೆ ಮುನ್ನ ಸ್ಥಳೀಯ ಆಡಳಿತದ ಪೂರ್ವಾನುಮತಿ ಪಡೆಯು ವುದು ಸೇರಿ ನಿಯಮಗಳನ್ನು ಪಾಲಿಸಿ ದ್ದರು. ಆದರೂ, ಖರೀದಿ ಪ್ರಕ್ರಿಯೆ ಬಳಿಕ ಅಕ್ಕಪಕ್ಕದ ನಿವಾಸಿಗಳು ಸಲ್ಲಿಸಿದ್ದ ಆಕ್ಷೇಪಣೆ ಆಧರಿಸಿ ತನಿಖೆಗೆ ಆದೇಶಿಸಿಸಲಾಗಿದೆ ಎಂದು ಅರ್ಜಿದಾರರು ಕೋರ್ಟ್‌ ಮೆಟ್ಟಿಲೇರಿದ್ದರು.

 ಸೂಕ್ಷ್ಮ ಪ್ರದೇಶ ಕಾಯ್ದೆ ವಿಧಿ 5 (2)ರ ಅನ್ವಯ ಈ ಪ್ರದೇಶದಲ್ಲಿ ಮುಸ್ಲಿಂ, ಹಿಂದೂಗಳು ಪರಸ್ಪರ ಅಥವಾ ಸ್ಥಳೀಯ ಧರ್ಮದಲ್ಲಿಯೇ ಸ್ಥಿರಾಸ್ತಿ ಖರೀದಿಗೆ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಈ ಪ್ರಕರಣದಲ್ಲಿ ಫಜ್ಲಾನಿ ಈ ವರ್ಷದ ಆ.8ಕ್ಕೆ ಮೊದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಆದರೂ, ನಂತರದ ಆಕ್ಷೇಪಣೆ ಆಧರಿಸಿ ಮರುತನಿಖೆಗೆ ಜಿಲ್ಲಾಧಿಕಾರಿ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದರು.

 ಕೋಮು ಉದ್ದೇಶದ ಆಕ್ಷೇಪಣೆಗಳನ್ನು ತಿರಸ್ಕರಿಸುವ ಬದಲು ಎರಡನೇ ಪ್ರತಿವಾದಿಯಾದ ಜಿಲ್ಲಾಧಿಕಾರಿ ಉದ್ದೇಶಪೂರ್ವಕವಾಗಿ ತನಿಖೆಗೆ ಆದೇಶಿಸಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಮಧ್ಯೆ, ಮರು ತನಿಖೆ ನಡೆಸಿದ್ದ ಪೊಲೀಸರು, ‘ಈ ಪ್ರದೇಶದಲ್ಲಿ ವಾಸವಿರುವ ಏಕೈಕ ಮುಸ್ಲಿಂ ಕುಟುಂಬ ಫಜ್ಲಾನಿ ಅವರದು. ಇದು, ಮುಂದೆ ಕೋಮುಗಲಭೆಗೆ ಆಸ್ಪದವಾಗಬಹುದು’ ಎಂದು ವರದಿ ಸಲ್ಲಿಸಿದ್ದರು.  

ಈ ಸ್ಥಿತಿಯಲ್ಲಿ ಹೈಕೋರ್ಟ್ ಆದೇಶ ಮುಸ್ಲಿಂ ದಂಪತಿಗೆ ನೆಮ್ಮದಿ ನೀಡಿದೆ. ಇಂಥದೇ ಇನ್ನೊಂದು ಪ‍್ರಕರಣದಲ್ಲಿ ಹಿಂದೂಗಳಿಂದ ಮುಸ್ಲಿಂರಿಗೆ ಫ್ಲಾಟ್‌ ಮಾರಾಟದ ಪ್ರಕರಣದಲ್ಲಿಯೂ ಹೈಕೋರ್ಟ್‌ ಯಾವುದೇ ತನಿಖೆ ನಡೆಸದಂತೆ ಎಸ್‌ಎಸ್‌ಆರ್‌ಡಿ ಅವರಿಗೆ ಸೂಚಿಸಿ ಆದೇಶ ನೀಡಿತ್ತು.

ಪ್ರತಿಕ್ರಿಯಿಸಿ (+)