ಗುಜರಾತ್‌: ಬಿಜೆಪಿಗೆ ಮೋದಿಯೇ ಬಂಡವಾಳ

ಶನಿವಾರ, ಏಪ್ರಿಲ್ 20, 2019
32 °C
ಕಾಂಗ್ರೆಸ್‌ನಿಂದ ಎಂಟು ಶಾಸಕರು ಕಣಕ್ಕೆ: ಪಟೇಲ್‌ ಸಮುದಾಯವೇ ‘ಕೈ’ಗೆ ಬಲ

ಗುಜರಾತ್‌: ಬಿಜೆಪಿಗೆ ಮೋದಿಯೇ ಬಂಡವಾಳ

Published:
Updated:
Prajavani

ಅಹಮದಾಬಾದ್‌: ಗುಜರಾತಿನಲ್ಲಿ ನಾಮಪತ್ರ ಸಲ್ಲಿಕೆ ಗುರುವಾರಕ್ಕೆ ಕೊನೆಗೊಂಡಿದೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಎಂಬುದು ಬಿಜೆಪಿಗೆ ಅನುಕೂಲಕರ ಅಂಶ. 

2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಪಕ್ಷ ಭಾರಿ ಸ್ಪರ್ಧೆ ಒಡ್ಡಿತ್ತು. 1995ರಿಂದ ನಿರಂತರವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ 99 ಕ್ಷೇತ್ರಗಳಲ್ಲಿ ಗೆಲ್ಲಲು ಮಾತ್ರ ಸಾಧ್ಯವಾಯಿತು. ಇದು ಸರಳ ಬಹುಮತಕ್ಕಿಂತ ಏಳು ಸ್ಥಾನಗಳಷ್ಟೇ ಹೆಚ್ಚು. ಕಾಂಗ್ರೆಸ್‌ ಪಕ್ಷವು 77 ಕ್ಷೇತ್ರಗಳಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.

ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಹಳ ಲೆಕ್ಕಾಚಾರದಿಂದಲೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಗುಜರಾತ್‌ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಪರೇಶ್‌ ಧನಾನಿ ಸೇರಿ ಎಂಟು ಶಾಸಕರನ್ನು ಪಕ್ಷವು ಅಭ್ಯರ್ಥಿಗಳನ್ನಾಗಿಸಿದೆ. ಪಕ್ಷಕ್ಕೆ ರಾಜ್ಯದಲ್ಲಿ ಸ್ಪಷ್ಟವಾದ ಯೋಜನೆ ಇದೆ ಎಂಬುದನ್ನು ಇದು ತೋರಿಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ 77 ಕ್ಷೇತ್ರಗಳಲ್ಲಿ ಗೆದ್ದರೂ ಈಗ ಕಾಂಗ್ರೆಸ್‌ ಜತೆಗೆ ಇರುವವರು 70 ಶಾಸಕರು ಮಾತ್ರ. ಉಳಿದವರು ರಾಜೀನಾಮೆ ನೀಡಿದ್ದಾರೆ ಮತ್ತು ಅವರಲ್ಲಿ ಕೆಲವರು ಬಿಜೆಪಿ ಸೇರಿದ್ದಾರೆ. 

‘ಜಾತಿ ಮತ್ತಿತರ ಸಮೀಕರಣಗಳ ಪ್ರಕಾರ ಎಂಟು ಶಾಸಕರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದೇವೆ. ಈ ಎಲ್ಲರೂ ಅವರವರ ಪ್ರದೇಶಗಳಲ್ಲಿ ಭಾರಿ ಜನಬೆಂಬಲ ಹೊಂದಿದ್ದಾರೆ. ಇಲ್ಲಿ ನಾವು ಅಧಿಕಾರದಲ್ಲಿ ಇಲ್ಲ. ಹಾಗಾಗಿ ಶಾಸಕರ ಸಂಖ್ಯೆ ಕಡಿಮೆ ಆದರೂ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ, ಸಂಸದರ ಸಂಖ್ಯೆ ಹೆಚ್ಚಾದಷ್ಟು ಕಾಂಗ್ರೆಸ್‌ ಬಲ ಹೆಚ್ಚುತ್ತದೆ’ ಎಂದು ಆ ಪಕ್ಷದ ವಕ್ತಾರ ಮನೀಶ್‌ ದೋಷಿ ಹೇಳಿದ್ದಾರೆ. 

ಅಮ್ರೇಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಧನಾನಿ ಅವರು ಹಾಲಿ ಸಂಸದ ಬಿಜೆಪಿಯ ನರನ್‌ ಕಚಾಡಿಯಾ ಅವರಿಗೆ ಕಠಿಣ ಸ್ಪರ್ಧೆ ಒಡ್ಡುವುದು ಖಚಿತ. 

ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಪಕ್ಷವು ಪಾಟೀದಾರ್‌ ಮೀಸಲು ಹೋರಾಟ ವನ್ನು ಬಹುವಾಗಿ ನೆಚ್ಚಿಕೊಂಡಿತ್ತು. ಈ ಬಾರಿಯೂ ಅದೇ ಕಾರ್ಯತಂತ್ರವನ್ನು ಅನುಸರಿಸಿದೆ. ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿಯ ಹಲವು ಮುಖಂಡರಿಗೆ ಟಿಕೆಟ್‌ ನೀಡಲಾಗಿದೆ. ಸಮಿತಿಯ ನಾಯಕರಾದ ಲಲಿತ್‌ ವಸೋಯ (ಪೋರಬಂದರ್‌ನ ಶಾಸಕ), ಮೊರ್ಬಿ ಕ್ಷೇತ್ರದ ಶಾಸಕ ಲಲಿತ್‌ ಕಗತರ ಮತ್ತು ಸಮಿತಿಯ ಸಂಯೋಜಕಿ ಗೀತಾ ಪಟೇಲ್‌ ಅವರು ಕಣದಲ್ಲಿದ್ದಾರೆ. 

ಭರೂಚ್‌ ಕ್ಷೇತ್ರದಿಂದ ಯುವ ನಾಯಕ ಸಂಶೇರ್‌ ಪಠಾಣ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ. ದಕ್ಷಿಣ ಗುಜರಾತಿನ ಈ ಕ್ಷೇತ್ರದಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಗುಜರಾತಿನಲ್ಲಿ ಕಾಂಗ್ರೆಸ್‌ ಕಣಕ್ಕೆ ಇಳಿಸಿರುವ ಏಕೈಕ ಮುಸ್ಲಿಂ ವ್ಯಕ್ತಿ ಸಂಶೇರ್‌. ಬುಡಕಟ್ಟು ಪ್ರಾಬಲ್ಯದ ದಾಹೋದ್‌ ಕ್ಷೇತ್ರದಿಂದ ಬಾಬುಭಾಯ್‌ ಕಟಾರಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಅವರ ವಿರುದ್ಧ ಮಾನವ ಕಳ್ಳಸಾಗಣೆ ಸೇರಿ ಹಲವು ಕ್ರಿಮಿನಲ್‌ ಪ್ರಕರಣಗಳಿವೆ. ಅವರ ಮಗ ಭವೇಶ್‌, ಗೋದ್ರೋತ್ತರ ಗಲಭೆ ಪ್ರಕರಣದ ಆರೋಪಿ. 

17 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಬ್ಬರೂ ಗುಜರಾತಿನವರು ಎಂಬುದು ಬಿಜೆಪಿಗೆ ಬಹು ದೊಡ್ಡ ಪೂರಕ ಅಂಶ. ಶಾ ಅವರು ಇದೇ ಮೊದಲಿಗೆ ಗಾಂಧಿನಗರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಟಿಕೆಟ್‌ ಪಡೆದ ಉಳಿದ ನಾಲ್ವರು ಶಾಸಕರು. 

ಕಳೆದ ಚುನಾವಣೆಯಲ್ಲಿ ಗೆದ್ದು ಬಳಿಕ ಮೋದಿ ಅವರು ತೆರವು ಮಾಡಿದ್ದ ವಡೋದರ ಕ್ಷೇತ್ರದಿಂದ ರಜನ್‌ ಬೆನ್‌ ಭಟ್‌ ಗೆದ್ದಿದ್ದರು. ಈ ಬಾರಿಯೂ ಅವರು ಅಲ್ಲಿಂದ ಸ್ಪರ್ಧಿಸುತ್ತಿದ್ದಾರೆ. 

 ಪಾಟೀದಾರ್ ಚಳವಳಿ

* ಪಾಟೀದಾರ್‌ ಸಮುದಾಯದ ಎಂಟು ಮಂದಿಗೆ ಕಾಂಗ್ರೆಸ್‌ ಟಿಕೆಟ್‌

* ವಿಧಾನಸಭೆಯ ನಾಲ್ಕು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳೂ ಪಾಟೀದಾರ್‌ ಸಮುದಾಯದವರು

* ಬಿಜೆಪಿಯಿಂದ ಪಾಟೀದಾರ್‌ ಸಮುದಾಯದ ಆರು ಅಭ್ಯರ್ಥಿಗಳಿಗೆ ಅವಕಾಶ

* ಪಾಟೀದಾರ್‌ ಚಳವಳಿಯ ನಾಯಕ ಹಾರ್ದಿಕ್‌ ಪಟೇಲ್‌ಗೆ ವಿಧಿಸಲಾಗಿರುವ ಶಿಕ್ಷೆಗೆ ತಡೆ ಸಿಗದ ಕಾರಣ ಅವರ ಸ್ಪರ್ಧೆ ಇಲ್ಲ

ಬಿಜೆಪಿ

* ಮೋದಿ, ಶಾ ಗುಜರಾತಿನವರು ಎಂಬ ಭಾವನಾತ್ಮಕ ಅಂಶ

* ದೀರ್ಘ ಕಾಲದಿಂದ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾರಣಕ್ಕೆ ದೊರೆಯುವ ಲಾಭ

* ಕಳೆದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗೆದ್ದ ಆತ್ಮವಿಶ್ವಾಸ

ಕಾಂಗ್ರೆಸ್‌

* ಪಾಟೀದಾರ್‌ ಸಮುದಾಯದ ಬೆಂಬಲ

* ಬಹಳ ಕಾಲದಿಂದ ಅಧಿಕಾರದಲ್ಲಿ ಇಲ್ಲದಿರುವುದರಿಂದ ಆಡಳಿತ ವಿರೋಧಿ ಅಲೆಯ ಆತಂಕ ಇಲ್ಲ

* ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸರಿಸಮನಾಗಿ ಸೆಣಸಿದ ಆತ್ಮವಿಶ್ವಾಸ

ಕಾಂಗ್ರೆಸ್‌ ಪ್ರಚಾರ

ನಿರುದ್ಯೋಗ ಮತ್ತು ಬಡತನ ನಿವಾರಣೆಯನ್ನೇ ಮುಖ್ಯವಾಗಿಟ್ಟುಕೊಂಡು ಜನರ ಮನವೊಲಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಮೋದಿ ಅವರ ‘ವೈಫಲ್ಯ’ಗಳನ್ನೂ ಪ್ರಸ್ತಾಪಿಸಲಾಗುತ್ತಿದೆ

ಬಿಜೆಪಿ ಪ್ರಚಾರ

ಬಿಜೆಪಿಗೆ ಮೋದಿ ಅವರ ಜನಪ್ರಿಯತೆಯೇ ದೊಡ್ಡ ಬಂಡವಾಳ. ನಿರ್ದಿಷ್ಟ ದಾಳಿ ಮತ್ತು ಬಾಲಾಕೋಟ್‌ ಮೇಲಿನ ವಾಯುದಾಳಿಯನ್ನು ಬಿಜೆಪಿ ಮುಖ್ಯವಾಗಿ ಮುಂದಿರಿಸುತ್ತಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !