ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಕರಾಚಿಯಲ್ಲಿ ಷೇರು ವಿನಿಮಯ ಕೇಂದ್ರದ ಮೇಲೆ ದಾಳಿ: 9 ಸಾವು

ಭದ್ರತಾ ಪಡೆಗಳಿಂದ ನಾಲ್ವರು ಉಗ್ರರ ಹತ್ಯೆ; ಘಟನೆಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ, ಒಬ್ಬ ಪೊಲೀಸ್ ಸಾವು
Last Updated 29 ಜೂನ್ 2020, 9:36 IST
ಅಕ್ಷರ ಗಾತ್ರ

ಕರಾಚಿ: ಇಲ್ಲಿನ ಪಾಕಿಸ್ತಾನ ಷೇರು ವಿನಿಮಯ ಕೇಂದ್ರದ ಮೇಲೆ ಸೋಮವಾರ ನಾಲ್ವರು ಶಸ್ತ್ರಸಜ್ಜಿತ ಉಗ್ರರು ಗ್ರೆನೇಡ್‌ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಿಂದ ನಾಲ್ವರೂ ಹತರಾಗಿದ್ದಾರೆ.

ಘಟನೆಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ, ಒಬ್ಬ ಪೊಲೀಸ್‍ ಅಧಿಕಾರಿ ಸಹ ಮೃತಪಟ್ಟಿದ್ದಾರೆ. ಇತರೆ ಐವರು ಗಾಯಗೊಂಡಿದ್ದಾರೆ ಎಂದುಪೊಲೀಸರು ತಿಳಿಸಿದ್ದಾರೆ.ಸ್ಥಳೀಯ ಪೊಲೀಸರು ಷೇರು ವಿನಿಮಯ ಕೇಂದ್ರದ ಆವರಣವನ್ನು ಸುತ್ತುವರಿದಿದ್ದಾರೆ. ಇದು ಬಿಗಿ ಭದ್ರತೆಯ ಪ್ರದೇಶವಾಗಿದ್ದು, ಹಲವು ಬ್ಯಾಂಕುಗಳ ಕಚೇರಿಗಳಿವೆ.

ಹತರಾದ ಉಗ್ರರು ಹೊಂದಿದ್ದ ಎಕೆ-47 ರೈಫಲ್, ಗ್ರೆನೇಡ್‍ ಮತ್ತು ಇತರೆ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಹುಶಃ ಅವರು ಸುದೀರ್ಘ ಅವಧಿಗೆ ಷೇರು ವಿನಿಮಯ ಕೇಂದ್ರವನ್ನು ಒತ್ತೆಯಾಗಿ ಇರಿಸಿಕೊಳ್ಳುವ ಸಂಚು ಹೊಂದಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬಂದೂಕುಧಾರಿಗಳಿಂದ ನಡೆದ ದಾಳಿಯನ್ನು ಸಿಂಧ್‍ ಪ್ರಾಂತ್ಯದ ಗವರ್ನರ್ ಇಮ್ರಾನ್‍ ಇಸ್ಮಾಯಿಲ್‍ ದೃಢಪಡಿಸಿದ್ದಾರೆ. ಕೃತ್ಯವನ್ನು ಖಂಡಿಸಿದ್ದು ಈ ದಾಳಿ ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟವನ್ನು ತಡೆಯುವ ಯತ್ನವಾಗಿದೆ ಎಂದಿದ್ದಾರೆ.

ಬಂದೂಕುಧಾರಿಗಳು ಗ್ರೆನೇಡ್‍ಗಳನ್ನು ಹೊಂದಿದ್ದು, ನಾಲ್ವರೂ ಕೊರೊಲಾ ಕಾರಿನಲ್ಲಿ ದಾಳಿಯ ಸ್ಥಳಕ್ಕೆ ಬಂದಿದ್ದರು ಎಂದು ಕರಾಚಿಯ ಪೊಲೀಸ್‍ ಮುಖ್ಯಾಧಿಕಾರಿ ಗುಲಾಮ್‍ ನಬಿ ಮೆಮನ್‍ ತಿಳಿಸಿದರು.

ಈ ಕೃತ್ಯದ ಹೊಣೆಯನ್ನು ಸದ್ಯ ಯಾವುದೇ ಸಂಘಟನೆಯು ಹೊತ್ತುಕೊಂಡಿಲ್ಲ. ಪಾಕಿಸ್ತಾನ ಹಲವು ವರ್ಷಗಳಿಂದ ಭಯೋತ್ಪಾದಕ ಚಟುವಟಿಕೆಗಳಿಂದ ಬಾಧಿತವಾಗಿದ್ದು, ಇಂಥ ದಾಳಿಗಳು ನಡೆಯುವುದು ಸಾಮಾನ್ಯವಾಗಿದೆ.

ಬಂದೂಕುಧಾರಿಗಳು ಮೊದಲು ಗ್ರೆನೇಡ್‌ ಪ್ರಯೋಗಿಸಿದ್ದು, ಷೇರು ವಿನಿಮಯ ಕೇಂದ್ರದ ಹೊರಗಿದ್ದ ಭದ್ರತಾ ಕಚೇರಿಯ ಮೇಲೆ ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆ ಪ್ರತಿದಾಳಿ ನಡೆಸಿದ್ದು, ನಾಲ್ವರೂ ಸ್ಥಳದಲ್ಲೇ ಹತರಾದರು.

ಉಗ್ರರು ಷೇರು ವಿನಿಮಯ ಕೇಂದ್ರವನ್ನು ಪ್ರವೇಶಿಸಲು ವಿಫಲರಾಗಿದ್ದಾರೆ. ಈ ಬೆಳವಣಿಗೆಯು ಕೇಂದ್ರದ ನಿತ್ಯದ ವಹಿವಾಟಿನ ಮೇಲೆ ಪರಿಣಾಮ ಬೀರಿಲ್ಲ. ಎಂದಿನಂತೆ ವಹಿವಾಟು ನಡೆದಿದೆ. ಆದರೆ, ಈ ಹಠಾತ್‌ ದಾಳಿ ಸ್ಥಳೀಯರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

‘ಸ್ಥಳದಲ್ಲಿ ಬಿಗುವಿನ ಸ್ಥಿತಿ ಇದೆ. ಸ್ಥಳೀಯ ಭದ್ರತಾ ಪಡೆಗಳ ಸಹಕಾರದೊಡನೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆಯಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ' ಎಂದು ಷೇರು ವಿನಿಮಯ ಕೇಂದ್ರ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT