ಭಾನುವಾರ, ಸೆಪ್ಟೆಂಬರ್ 22, 2019
23 °C
ಬುಧವಾರ ಗ್ರೆನೇಡ್ ಸ್ಫೋಟದಲ್ಲಿ 12 ಜನರಿಗೆ ಗಾಯ

ಗುಹಾವಟಿಯಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಸ್ತು ವಶಕ್ಕೆ

Published:
Updated:

ಗುಹಾವಟಿ(ಪಿಟಿಐ): ನಗರದ ಪಂಜಾಬ್ರಿ ಪ್ರದೇಶದ ಮನೆಯಲ್ಲಿ ಭಾರಿ ಪ್ರಮಾಣದ ಸ್ಪೋಟಕ ವಸ್ತು, ಶಸ್ತ್ರಾಸ್ತ್ರಗಳನ್ನು ಗುಹಾವಟಿ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. 

ಬುಧವಾರ ರಾತ್ರಿ ನಗರದ ಕೇಂದ್ರ ಭಾಗದಲ್ಲಿದ್ದ ಮಾಲ್ ಮುಂಭಾಗದಲ್ಲಿ ನಡೆದ ಗ್ರೆನೇಡ್ ಸ್ಫೋಟದ ಬೆನ್ನಲ್ಲೇ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಲು ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು. ಮನೆಯಲ್ಲಿ ಬಾಂಬ್, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ತಯಾರಿಗೆ ಬಳಸುವ ವಸ್ತುಗಳು, ಲ್ಯಾಪ್‌ಟಾಪ್‌ ಪತ್ತೆಯಾಗಿವೆ. ಮನೆಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಶಂಕಿತ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ತಿಂಗಳ ಹಿಂದೆ ಒಬ್ಬ ಪುರುಷ ಹಾಗೂ ಮಹಿಳೆ ಈ ಮನೆಯನ್ನು ಬಾಡಿಗೆ ಪಡೆದಿದ್ದರು. ಮನೆಗೆ ಶಂಕಿತ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ(ಯುಎಲ್‌ಎಫ್‌ಎ) ಉಗ್ರ ಭೇಟಿ ನೀಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪೊಲೀಸರು ಗುರಿ 

ಬುಧವಾರ ರಾತ್ರಿ ಆರ್‌.ಜಿ.ಬರುವಾ ರಸ್ತೆಯಲ್ಲಿನ ಶಾಪಿಂಗ್ ಮಾಲ್ ಮುಂಭಾಗದಲ್ಲಿ ಸಶಸ್ತ್ರ ಸೀಮಾ ದಳದ(ಎಸ್‌ಎಸ್‌ಬಿ)ಸಿಬ್ಬಂದಿ ಅಸ್ಸಾಂ ಪೊಲೀಸ್ ಜತೆಗೂಡಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲೇ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾಲ್‌ ಮುಂದೆ ಗ್ರೆನೇಡ್ ಎಸೆದು ಪರಾರಿಯಾಗಿದ್ದರು. ಸ್ಪೋಟದ ತೀವ್ರತೆಗೆ ಮಹಿಳೆ, ಇಬ್ಬರು ಎಸ್ಎಸ್‌ಬಿ ಸೈನಿಕರು ಸೇರಿ 12 ಜನರಿಗೆ ಗಾಯಗಳಾಗಿತ್ತು. ರಾಜ್ಯದ ಭದ್ರತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸೋನೋವಾಲ್ ಬುಧವಾರ ಉನ್ನತ ಮಟ್ಟದ ಪ್ರಗತಿಪರಿಶೀಲನಾ ಸಭೆ ನಡೆಸಿದ ಕೆಲ ಗಂಟೆಗಳಲ್ಲೇ ಈ ಘಟನೆ ನಡೆದಿತ್ತು. 

Post Comments (+)