ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಮುಗ್ಗಟ್ಟಿನಲ್ಲಿ ಎಚ್‌ಎಎಲ್‌; ವಾಯು ಪಡೆಯಿಂದ ₹14,000 ಕೋಟಿ ಬಾಕಿ!

Last Updated 9 ಜನವರಿ 2019, 10:46 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ರಕ್ಷಣಾ ಪಡೆಗೆ ಯುದ್ಧ ವಿಮಾನಗಳನ್ನು ಪೂರೈಸುವ ಹಿಂದುಸ್ತಾನ್ ಏರೊನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌), ಹಣದ ಮುಗ್ಗಟ್ಟಿನಲ್ಲಿ ಸಿಲುಕಿದೆ. ಎಚ್‌ಎಎಲ್‌ನ 80 ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಭಾರತೀಯ ವಾಯು ಪಡೆ ಪಾವತಿಸದೆ ಉಳಿಸಿಕೊಂಡಿರುವ ₹14,000 ಕೋಟಿ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಇದರಿಂದಾಗಿ ವಾಯು ಪಡೆಯ ವಿಮಾನಗಳಿಗೆ ಮುಂದೆ ಯಾಂತ್ರಿಕ ದುರಸ್ತಿ ಸೇವೆಗಳಿಗೂ ಅಡಚಣೆ ಎದುರಾಗಲಿದೆ. ಹೊಸ ವರ್ಷದಿಂದ ಎಚ್ಎಎಲ್‌ ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಗುತ್ತಿಗೆ ನೌಕರರಲ್ಲಿಶೇ 20ರಷ್ಟು ಜನರನ್ನು ಕಡಿತಗೊಳಿಸುವುದು ಹಾಗೂ ಅನಗತ್ಯ ಪ್ರಯಾಣಗಳನ್ನು ನಿಲ್ಲಿಸಲು ಕ್ರಮಕೈಗೊಳ್ಳುತ್ತಿದೆ.

ಎಚ್‌ಎಎಲ್‌ನ ಪ್ರಮುಖ ಹಾಗೂ ಅತಿ ದೊಡ್ಡ ಗ್ರಾಹಕ ಭಾರತೀಯ ವಾಯು ಪಡೆ(ಐಎಎಫ್‌) ಸಾಮಾನ್ಯವಾಗಿ ಒಂದರಿಂದ ಮೂರು ತಿಂಗಳ ಒಳಗಾಗಿ ಬಾಕಿ ಮೊತ್ತ ಪಾವತಿ ಮಾಡುತ್ತದೆ. ಈಗಾಗಲೇ ವಾಯುಪಡೆಗೆ ವಿಮಾನಗಳ ಪೂರೈಕೆ ಹಾಗೂ ನಿರ್ವಹಣೆ ಸೇವೆಗಳಿಗಾಗಿ ವ್ಯಯಿಸಿರುವ ₹18,600 ಕೋಟಿ ಪಾವತಿಯಾಗುವ ನಿರೀಕ್ಷೆಯನ್ನುನವರತ್ನ ಸಾಲಿನ ಸಂಸ್ಥೆ ಎಚ್‌ಎಎಲ್‌ ಹೊಂದಿದೆ. ಹೀಗಾಗಿ ರಕ್ಷಣಾ ಪಡೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳ ದುರಸ್ತಿಗೆ ಅಗತ್ಯವಿರುವ ಬಿಡಿ ಭಾಗಗಳು ಮತ್ತು ಅಗತ್ಯ ವಸ್ತುಗಳ ಖರೀದಿಗೆ ಹಣದ ವ್ಯತ್ಯಯ ಉಂಟಾಗಲಿದೆ ಎಂದು ಎಚ್‌ಎಎಲ್‌ ಆತಂಕ ವ್ಯಕ್ತಪಡಿಸಿದೆ. ಈ ವರ್ಷ ಮಾರ್ಚ್‌ ಅಂತ್ಯಕ್ಕೆ ಐದು ಲಘು ಯುದ್ಧ ವಿಮಾನ ’ತೇಜಸ್‌’ ಅನ್ನು ವಾಯುಪಡೆಗೆ ಪೂರೈಸಲಿದ್ದು, ಬಿಲ್‌ ಮೊತ್ತ ₹19,000–₹20,000 ತಲುಪಲಿದೆ.

ಸಿಬ್ಬಂದಿ ಸಂಬಳಕ್ಕೆ ₹962 ಕೋಟಿ

ಈವರೆಗೂ ಸಾಲದಿಂದ ಮುಕ್ತವಾಗಿರುವ ಸಂಸ್ಥೆ ಕಳೆದ ತಿಂಗಳು ಸಿಬ್ಬಂದಿ ಸಂಬಳಕ್ಕಾಗಿ ₹962 ಕೋಟಿ ಹಣ ಪಡೆದುಕೊಂಡಿದೆ. ಕೈಲಿ ಕಾಸಿಲ್ಲದ ಪರಿಸ್ಥಿತಿ ನಿರ್ಮಾಣವಾದೀತು ಎಂಬ ಆತಂಕ ಸಂಸ್ಥೆಯನ್ನು ಕಾಡುತ್ತಿದೆ. ಈಗಾಗಲೇ ಖರೀದಿಸಿರುವ ಬಿಡಿಭಾಗಗಳಿಗೆ ಹಣ ಪಾವತಿಸಲು ಎಚ್‌ಎಎಲ್‌ಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಿಮಾನಗಳ ದುರಸ್ತಿ ಕಾರ್ಯವನ್ನು ಸಕಾಲದಲ್ಲಿ ಮುಗಿಸಲು ತೊಂದರೆಯಾಗಬಹುದು ಎನ್ನಲಾಗಿದೆ.

ಆಂತರಿಕ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವ ಮೂಲಕ ವೆಚ್ಚ ಕಡಿತದ ನಿರ್ಧಾರವನ್ನು ಸಂಸ್ಥೆ ತೆಗೆದುಕೊಂಡಿದೆ. ದೇಶದ ತನ್ನ ಎಲ್ಲ ಕೇಂದ್ರಗಳಲ್ಲಿರುವ 11 ಸಾವಿರ ಗುತ್ತಿಗೆ ನೌಕರರ ಪೈಕಿ ಸುಮಾರು 2,200 ಮಂದಿಯನ್ನು ಕಡಿತಗೊಳಿಸಲು ಮುಂದಾಗಿದೆ. ಸಿಬ್ಬಂದಿ ತರಬೇತಿ, ಸಭೆ ಹಾಗೂ ಸೆಮಿನಾರ್‌ಗಳಿಗಾಗಿ ವಿದೇಶ ಅಥವಾ ದೇಶದಲ್ಲಿ ನಡೆಸುವ ಪ್ರಯಾಣಕ್ಕೂ ನಿರ್ಬಂಧ ಹೇರಲಾಗುತ್ತಿದೆ. ಜಾಹೀರಾತು ಹಾಗೂ ಪ್ರಚಾರ ಕಾರ್ಯಗಳಿಗೆ ತಡೆಯಾಗಲಿದೆ. ‌

ಸರ್ಕಾರಕ್ಕೆ ₹11,500 ಕೋಟಿ ಪಾವತಿ

ವರ್ಷದಿಂದ ವರ್ಷಕ್ಕೆ ವಾಯುಪಡೆಯ ಬಾಕಿ ಮೊತ್ತ ಬೆಳೆಯುತ್ತಲೇ ಇದೆ. ಹಣಕಾಸು ವರ್ಷ 2017–18ರಲ್ಲಿ ಪಾವತಿಯಾಗಬೇಕಾದ ಮೊತ್ತ ₹7000 ಕೋಟಿ, ಮಧ್ಯಂತರ ₹2000 ಕೋಟಿ ಪಾವತಿಯಾಗಿದೆ. ಇದೀಗ ₹14,000 ಕೋಟಿ ಬಾಕಿ ಉಳಿದಿದೆ.ಕಳೆದ ಐದು ವರ್ಷಗಳಲ್ಲಿ ಎಚ್‌ಎಎಲ್‌ ಸರ್ಕಾರಕ್ಕೆ ಎರಡು ಸಂದರ್ಭಗಳಲ್ಲಿ ಒಟ್ಟು ₹11,500 ಕೋಟಿ ಪಾವತಿ ಮಾಡಿದೆ. ಡಿವಿಡೆಂಟ್‌ ಆಗಿ ಹಾಗೂ ಷೇರುಗಳನ್ನು ಪುನಃ ಪಡೆದುಕೊಳ್ಳಲು ಹಣ ಪಾವತಿ ಮಾಡಲಾಗಿದೆ. ಇದೂ ಸಹ ಹಣದ ಬಿಕ್ಕಟ್ಟಿಗೆ ಕಾರಣ ಎನ್ನಲಾಗುತ್ತಿದೆ.

ಬುಧವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ರಕ್ಷಣಾ ಪಡೆಗಳ ಮುಖ್ಯಸ್ಥರು ಹಾಗೂ ಎಚ್‌ಎಎಲ್‌ ಸಿಎಂಡಿ ಆರ್‌.ಮಾಧವನ್‌ ಜತೆಗೆ ಚರ್ಚೆ ನಡೆಸಿದ್ದಾರೆ.

(ಮೂಲ ವರದಿ: ದಿ ಹಿಂದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT