ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಟ್ಟರ್, ದುಷ್ಯಂತ್ ಪ್ರಮಾಣ ವಚನ ಇಂದು

ಹರಿಯಾಣ: ಸರ್ಕಾರ ರಚಿಸುವಂತೆ ರಾಜ್ಯಪಾಲರಿಂದ ಬಿಜೆಪಿಗೆ ಆಹ್ವಾನ * ಮಧ್ಯಾಹ್ನ 2.15ಕ್ಕೆ ಸಮಯ ನಿಗದಿ
Last Updated 26 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಚಂಡೀಗಡ:ಹರಿಯಾಣದಲ್ಲಿ ಸರ್ಕಾರ ರಚಿಸುವಂತೆ ರಾಜ್ಯಪಾಲ ಸತ್ಯದೇವ್ ನಾರಾಯಣ್‌ಆರ್ಯ ಅವರು ರಾಜ್ಯ ಬಿಜೆಪಿಗೆ ಆಹ್ವಾನ ನೀಡಿದ್ದಾರೆ. ಮನೋಹರ್ ಲಾಲ್‌ ಖಟ್ಟರ್ ನೇತೃತ್ವದಲ್ಲಿ ಭಾನುವಾರ ಸರ್ಕಾರ ರಚನೆಯಾಗಲಿದೆ.

ಭಾನುವಾರ ಮಧ್ಯಾಹ್ನ 2.15ಕ್ಕೆ ಮನೋಹರ್ ಲಾಲ್ ಖಟ್ಟರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

‘ದೀಪಾವಳಿ ದಿನವಾದ ಭಾನುವಾರವೇ ಸರ್ಕಾರ ರಚಿಸುವಂತೆ ರಾಜ್ಯಪಾಲರಿಂದ ಆಹ್ವಾನ ಬಂದಿದೆ. ಉಪ ಮುಖ್ಯಮಂತ್ರಿಯಾಗಿ ಜೆಜೆಪಿಯ ದುಷ್ಯಂತ್ ಚೌಟಾಲ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಖಟ್ಟರ್ ಮಾಹಿತಿ ನೀಡಿದ್ದಾರೆ.

ಇನ್ನೂ ಹಲವು ಶಾಸಕರು ಸಚಿವರಾಗಿಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಖಟ್ಟರ್ ಹೇಳಿದ್ದಾರೆ. ಆದರೆ ಆ ಶಾಸಕರು ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

90 ಸ್ಥಾನಗಳ ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಬಿಜೆಪಿ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಸರ್ಕಾರ ರಚಿಸಲು ಬೇಕಿದ್ದ 46ರ ಸರಳ ಬಹುಮತಕ್ಕೆ ಆರು ಸ್ಥಾನಗಳ ಕೊರತೆ ಎದುರಿಸಿತ್ತು. ಏಳು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದರು.

ಶುಕ್ರವಾರ ಸಂಜೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ದುಷ್ಯಂತ್ ಚೌಟಾಲ ಮಾತುಕತೆ ನಡೆಸಿದ್ದರು. ಚೌಟಾಲ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಭರವಸೆ ನೀಡಿದ್ದರಿಂದ, ಅವರು ಬಿಜೆಪಿಗೆ ಬೆಂಬಲ ಘೋಷಿಸಿದರು.

ದಿನದ ಬೆಳವಣಿಗೆ

* ಚಂಡೀಗಡದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಬಿಜೆಪಿಯ ಉತ್ತರ ಭಾರತದ ವೀಕ್ಷಕರಾಗಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವರು ಸಭೆಯಲ್ಲಿ ಭಾಗವಹಿಸಿದ್ದರು

* ಮನೋಹರ್‌ ಲಾಲ್‌ ಖಟ್ಟರ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು

* ಖಟ್ಟರ್ ಮತ್ತು ಬಿಜೆಪಿ ಶಾಸಕರು ರಾಜಭವನಕ್ಕೆ ತೆರಳಿ, ರಾಜ್ಯಪಾಲರನ್ನು ಭೇಟಿ ಮಾಡಿದರು. ಇವರ ಜತೆಯಲ್ಲಿ ಪಕ್ಷೇತರ ಶಾಸಕರೂ ಇದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಖಟ್ಟರ್ ರಾಜೀನಾಮೆ ನೀಡಿದರು

* ಖಟ್ಟರ್ ಅವರು ಹೊಸ ಸರ್ಕಾರ ರಚಿಸುವ ಹಕ್ಕು ಮಂಡಿಸಿದರು

* ಜೆಜೆಪಿ ಅಧ್ಯಕ್ಷ ದುಷ್ಯಂತ್ ಚೌಟಾಲ ಸಹ ರಾಜ್ಯಪಾಲರನ್ನು ಭೇಟಿ ಮಾಡಿದರು. ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ರಾಜ್ಯಪಾಲರಿಗೆ ಪತ್ರ ನೀಡಿದರು

* ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರು ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಿದರು

ದುಷ್ಯಂತ್‌ ತಂದೆ ಅಜಯ್‌ಗೆ ಫರ್ಲೊ
ಜೆಜೆಪಿ ಮುಖಂಡ ದುಷ್ಯಂತ್ ಚೌಟಾಲ ಅವರ ತಂದೆ ಅಜಯ್ ಚೌಟಾಲ ಅವರಿಗೆ ಎರಡು ವಾರಗಳ ಸಜಾ ಅವಧಿಯ ರಜೆ (ಫರ್ಲೊ) ಮಂಜೂರು ಮಾಡಲಾಗಿದೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅಪರಾಧಿಯಾಗಿರುವ ಅವರು 10 ವರ್ಷಗಳ ಸೆರೆವಾಸದಲ್ಲಿದ್ದಾರೆ. ದೆಹಲಿಯ ತಿಹಾರ್‌ ಜೈಲಿನಲ್ಲಿ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅಜಯ್ ಅವರ ತಂದೆ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಸಹ ಇದೇ ಪ್ರಕರಣದಲ್ಲಿ, ತಿಹಾರ್‌ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ.

ಅಜಯ್ ಅವರನ್ನು ಭಾನುವಾರ ಬೆಳಿಗ್ಗೆ ಜೈಲಿನಿಂದ ಹೊರಗೆ ಕಳುಹಿಸಲಾಗುತ್ತದೆ. ಭಾನುವಾರ ಮಧ್ಯಾಹ್ನ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಯಾವುದೇ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲುಶಿಕ್ಷೆ ಅನುಭವಿಸುತ್ತಿರುವವರಿಗೆ ವರ್ಷದಲ್ಲಿ 14 ದಿನ ಸಜಾ ಅವಧಿಯ ರಜೆ ನೀಡಲಾಗುತ್ತದೆ. ಅಜಯ್ ಚೌಟಾಲ ಅವರಿಗೆ ಈ ವರ್ಷದ ಫರ್ಲೊ ನೀಡಿರಲಿಲ್ಲ.

ಬಿಜೆಪಿ ಮತ್ತು ಜೆಜೆಪಿ ಮೈತ್ರಿಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ರಾತ್ರಿ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಅಜಯ್ ಚೌಟಾಲ ಅವರಿಗೆ ಫರ್ಲೊ ಮಂಜೂರು ಮಾಡಲಾಗಿದೆ.

ನೈನಾ ಚೌಟಾಲಗೆ ಪ್ರಮುಖ ಹುದ್ದೆ?
ದುಷ್ಯಂತ್ ಚೌಟಾಲ ಅವರ ತಾಯಿ ಮತ್ತು ಭಾದ್ರಾ ಶಾಸಕಿ ನೈನಾ ಚೌಟಾಲ ಅವರಿಗೆ ಸರ್ಕಾರದಲ್ಲಿ ಪ್ರಮುಖ ಖಾತೆ ನೀಡುವ ಬಗ್ಗೆ ಜೆಜೆಪಿಯಲ್ಲಿ ಚರ್ಚೆ ನಡೆದಿದೆ.

ಸಂಪುಟ ದರ್ಜೆ ಸ್ಥಾನ: ತಮ್ಮ ಇಬ್ಬರು ಶಾಸಕರಿಗೆ ಸಂಪುಟ ದರ್ಜೆ ಸಚಿವ ಸ್ಥಾನವನ್ನೂ ನೀಡಬೇಕೆಂಬ ಜೆಜೆಪಿಯ ಷರತ್ತನ್ನು ಬಿಜೆಪಿ ಒಪ್ಪಿಕೊಂಡಿದೆ.

ಆದರೆ ಮೈತ್ರಿ ಸರ್ಕಾರದಲ್ಲಿ ತಮ್ಮ ಪಕ್ಷಕ್ಕೆ ದೊರೆತಿರುವ ಈ ಹುದ್ದೆಯನ್ನು ಯಾರಿಗೆ ನೀಡಲಾಗುತ್ತದೆ ಎಂಬುದನ್ನು ಜೆಜೆಪಿ ಈವರೆಗೆ ಸ್ಪಷ್ಟಪಡಿಸಿಲ್ಲ.

*
ನಮ್ಮನ್ನು ಮತ್ತೆ ಅಧಿಕಾರಕ್ಕೆ ತಂದ ಜನರಿಗೆ ಧನ್ಯವಾದಗಳು. ಐದು ವರ್ಷ ಸುಸ್ಥಿರ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ. ಮುಂದೆಯೂ ಹೀಗೇ ಸರ್ಕಾರ ನಡೆಸುತ್ತೇವೆ.
–ನೋಹರ್ ಲಾಲ್ ಖಟ್ಟರ್, ಹರಿಯಾಣ ನಿಯೋಜಿತ ಮುಖ್ಯಮಂತ್ರಿ

*
ಅತ್ಯಾಚಾರ ಆರೋಪ ಎದುರಿಸುತ್ತಿರುವ ಮತ್ತು ವಿವಾದಾತ್ಮಕ ನಾಯಕ ಗೋಪಾಲ್ ಕಾಂಡಾ ಅವರ ಬೆಂಬಲವನ್ನು ಬಿಜೆಪಿ ಪಡೆಯುವುದಿಲ್ಲ. ನಮ್ಮ ನಿಲುವು ದೃಢ.
–ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ

*
ರಾಜ್ಯದಲ್ಲಿ ಸುಸ್ಥಿರ ಸರ್ಕಾರದ ಅನಿವಾರ್ಯತೆ ಇದೆ. ಬಿಜೆಪಿಯಿಂದ ಮಾತ್ರ ಸುಸ್ಥಿರ ಸರ್ಕಾರ ನೀಡಲು ಸಾಧ್ಯ. ಹೀಗಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇವೆ.
–ದುಷ್ಯಂತ್ ಚೌಟಾಲ, ಜೆಜೆಪಿ ಅಧ್ಯಕ್ಷ

*
ಬಿಜೆಪಿಗೆ ಬೆಂಬಲ ನೀಡುವ ಮೂಲಕ ದುಷ್ಯಂತ್ ಅವರು ಹರಿಯಾಣ ಜನರಿಗೆ ದ್ರೋಹ ಬಗೆದಿದ್ದಾರೆ. ಇದನ್ನು ವಿರೋಧಿಸಿ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ‌.
–ತೇಜ್ ಬಹದ್ದೂರ್ ಯಾದವ್, ಜೆಜೆಪಿ ನಾಯಕ, ಮಾಜಿ ಯೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT