ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಇರುವುದು ಗೆಲುವಿನ ಗುರಿ

ಶಿಗ್ಗಾವಿ–ಸವಣೂರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ ಬೇವಿನಮರ
Last Updated 4 ಮೇ 2018, 9:52 IST
ಅಕ್ಷರ ಗಾತ್ರ

ಹಾವೇರಿ: ತೃತೀಯ ಶಕ್ತಿ, ಪಕ್ಷೇತರರನ್ನು ಗೆಲ್ಲಿಸಿದ ಇತಿಹಾಸ ಹೊಂದಿರುವ ‘ಶಿಗ್ಗಾವಿ–ಸವಣೂರ’ ಕ್ಷೇತ್ರದಿಂದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೃಷಿಕ–ಉದ್ಯಮಿಯಾದ ಅವರು ರಾಜಕೀಯದಲ್ಲೂ ಸಕ್ರಿಯರು. ಆದರೆ, ಈ ಬಾರಿ ಚುನಾವಣೆಯು ಹೆಚ್ಚು ಮಹತ್ವದ್ದಾಗಿದೆ. ಅವರ ಜೊತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ವಿವರ ಹೀಗಿದೆ.

ನಿಮಗೆ ಶಿಗ್ಗಾವಿ– ಸವಣೂರ ಕ್ಷೇತ್ರದ ಒಲವು ಏಕೆ?

ನಾನು ಬಂಕಾಪುರದಲ್ಲಿ ಜನಿಸಿದ್ದು, ವಿದ್ಯಾಭ್ಯಾಸವನ್ನೂ ಪೂರೈಸಿದ್ದೇನೆ. ಕ್ಷೇತ್ರದ ಜನ ನನ್ನನ್ನು ತಂದೆಯ ಮೂಲಕವೇ ಗುರುತಿಸುತ್ತಾರೆ. ನಾನು, ಉದ್ಯೋಗಕ್ಕಾಗಿ ಹಾವೇರಿಗೆ ಬಂದರೂ, ಕ್ಷೇತ್ರದ ಸ್ಥಳೀಕನೇ. ಕಳೆದ 2 ವರ್ಷಗಳಲ್ಲಿ ಕ್ಷೇತ್ರದ ಪ್ರತಿ ಮನೆ ಮನೆಗೆ ನಿರಂತರವಾಗಿ ಭೇಟಿ ನೀಡಿದ್ದೇನೆ. ಜನ ನನ್ನನ್ನು ಹುಡುಕಿಕೊಂಡು ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಬೇಕಾಗಿಲ್ಲ.

ಶಿಗ್ಗಾವಿ –ಸವಣೂರಿನ ಸಾಮರಸ್ಯದ ಕುರಿತು?

ನಮ್ಮದು ಹಿಂದೂ –ಮುಸ್ಲಿಂ ಭಾವೈಕ್ಯತೆಯ ಕ್ಷೇತ್ರ. ಇಲ್ಲಿ ಬಿಜೆಪಿಯು ಒಡೆದು ಆಳುವ ನೀತಿ ಅನುಸರಿಸುತ್ತಾ ಬಂದಿದೆ. ಆದರೆ, ಈ ಹಿಂದೆ ನಮ್ಮಲ್ಲಿ ಉತ್ತಮ ಅಭ್ಯರ್ಥಿಯ ಕೊರತೆ ಇತ್ತು. ಈ ಬಾರಿ ಪಕ್ಷದ ನಿಲುವು ಮತ್ತು ಉತ್ತಮ ಅಭ್ಯರ್ಥಿಯ ಕಾರಣ ಜನತೆ ಒಲವು ತೋರುತ್ತಿದ್ದಾರೆ.

ಕ್ಷೇತ್ರಕ್ಕಾಗಿ ನಿಮ್ಮ ಪ್ರಮುಖ ಆದ್ಯತೆಗಳೇನು?

ಕ್ಷೇತ್ರದ ಸವಣೂರ, ಶಿಗ್ಗಾವಿ, ಬಂಕಾಪುರ ಪಟ್ಟಣದಲ್ಲಿಯೇ ನೀರಿನ ಸಮಸ್ಯೆಯಿದ್ದು, ಗ್ರಾಮೀಣ ಪ್ರದೇಶದಲ್ಲಿ ತೀವ್ರವಾಗಿದೆ. ಇದಕ್ಕಾಗಿ ಹಲವು ಯೋಜನೆಗಳು ನನ್ನ ಚಿಂತನೆಯಲ್ಲಿವೆ. ಅಲ್ಲದೇ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಸಂತ ಶಿಶುನಾಳ ಷರೀಫರ ಗದ್ದುಗೆ ಅಭಿವೃದ್ಧಿ ಮಾಡಲಾಗುವುದು.

ಚುನಾವಣೆಯಲ್ಲಿ ಜಾತಿ ಮತ್ತು ಹಣದ ಬಲದ ಬಗ್ಗೆ?

ಚುನಾವಣೆಯಲ್ಲಿ ಜಾತಿ ಮತ್ತು ಪಕ್ಷದ ನಾಮ ಬಲವು ಸಹಜವಾಗಿ ಇರುತ್ತದೆ. ಆದರೆ, ಅದನ್ನೇ ನಂಬಿ ಕುಳಿತವರು ಗೆಲ್ಲುವುದಿಲ್ಲ. ಸರ್ವಧರ್ಮೀಯರ ಬೆಂಬಲ ಬೇಕು. ಹಣದ ಬಲದಿಂದ ಹವಾ ಸೃಷ್ಟಿಸಬಹುದೇ ಹೊರತು, ಗೆಲುವು ಸಾಧ್ಯವಿಲ್ಲ.

ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ನೆಲೆ ಹೇಗಿದೆ?

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನೀಡಿದ ಕೊಡುಗೆ ಹಾಗೂ ಸಾಧನೆಗಳೇ ನಮಗೆ ಶ್ರೀ ರಕ್ಷೆ. ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ ವಿಚಾರಗಳನ್ನು ರೈತರು ಮತ್ತು ಮಹಿಳೆಯರು ಇಷ್ಟಪಟಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಕಚ್ಚಾಟ ಹಾಗೂ ಅಪಪ್ರಚಾರದಲ್ಲಿ ತೊಡಗಿವೆ.

ಜಿಲ್ಲೆಯಲ್ಲಿ ಜೆಡಿಎಸ್ ಯಾವ ಫಲಿತಾಂಶ ನೀಡಬಹುದು?

ನಾವು ಬ್ಯಾಡಗಿಯನ್ನು ಬಿಎಸ್ಪಿಗೆ ಬಿಟ್ಟುಕೊಟ್ಟು, ಐದು ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದೇವೆ. ಮೂರರಲ್ಲಿ ಗೆಲುವು ಖಚಿತ. ಅಲ್ಲದೇ, ಬಿಎಸ್ಪಿ ನಾಯಕಿ ಮಾಯಾವತಿ ದೀದಿ ಆಶೀರ್ವಾದದ ಪರಿಣಾಮ ಪರಿಶಿಷ್ಟ ಮತದಾರರು ಜೆಡಿಎಸ್ ನೆಚ್ಚಿಕೊಂಡಿದ್ದಾರೆ.

ನೀವು ಮತ್ತು ಪಕ್ಷೇತರ ಅಭ್ಯರ್ಥಿ ಸೋಮಣ್ಣ ಬೇವಿನಮರದ ನಡುವೆ ಮತ ವಿಭಜನೆಗೊಳ್ಳುವುದೇ?

ಸೋಮಣ್ಣ ಅವರಿಗೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸೋಲಿಸುವ ಏಕೈಕ ಛಲವಾದರೆ, ನನಗೆ ಗೆದ್ದು ಶಾಸಕನಾಗುವ ಗುರಿ ಇದೆ. ಅವರಿಗೆ ಬೇರೆ ಅಜೆಂಡಾ ಇಲ್ಲ. ಆದರೆ, ಜೆಡಿಎಸ್‌ ಸ್ಪಷ್ಟ ದೃಷ್ಟಿಕೋನದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಜನತೆಗೆ ನಮ್ಮ ಪಕ್ಷದ ಮೇಲೆ ಹೆಚ್ಚಿನ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT