ಕೇರಳದಲ್ಲಿ ಸಾವಿನ ಸಂಖ್ಯೆ 97ಕ್ಕೆ ಏರಿಕೆ: ಇನ್ನೂ ಆರು ದಿನ ಭಾರಿ ಮಳೆ ಸಾಧ್ಯತೆ

7
ಕೇರಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಲು ಸೇನೆಗೆ ಕೇಂದ್ರದಿಂದ ಸೂಚನೆ

ಕೇರಳದಲ್ಲಿ ಸಾವಿನ ಸಂಖ್ಯೆ 97ಕ್ಕೆ ಏರಿಕೆ: ಇನ್ನೂ ಆರು ದಿನ ಭಾರಿ ಮಳೆ ಸಾಧ್ಯತೆ

Published:
Updated:
Deccan Herald

ಪುಣೆ: ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇನ್ನೂ ಆರು ದಿನಗಳು ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ, ಗೋವಾ ಸೇರಿದಂತೆ ಕಡಲ ತೀರದ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ. ಅರಬ್ಬೀಸಮುದ್ರಕ್ಕೆ ಮೀನುಗಾರಿಕೆಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಆಗಸ್ಟ್‌ 17ರಿಂದ 22ರವರೆಗೂ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ, ತಮಿಳುನಾಡು, ಗುಜರಾತ್‌, ಸೌರಾಷ್ಟ್ರ, ಉತ್ತರ ಕೊಂಕಣ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ತ್ರಿಪುರ, ಅಸ್ಸಾಂ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್‌, ಮೇಘಾಲಯ, ಛತ್ತೀಸಗಡ, ಜಾರ್ಖಂಡ್‌, ಪಶ್ಚಿಮಬಂಗಾಳ, ಒಡಿಶಾ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಕೇರಳದಲ್ಲಿ ಸಾವಿನ ಸಂಖ್ಯೆ 97ಕ್ಕೆ ಏರಿಕೆ

ತಿರುವನಂತಪುರ/ಕೊಚ್ಚಿ: ದೇವರನಾಡಿನಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಗುರುವಾರ ಭೂಕುಸಿತದಿಂದ ಮತ್ತೆ ಎಂಟು ಜನರು ಪಾಲಕ್ಕಾಡ್‌ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮಳೆ ಸಂಬಂಧಿ ಅವಘಡಗಳಿಂದ ಇದುವರೆಗೆ ಸಾವಿಗೀಡಾದವರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ.

ತ್ರಿಶೂರ್, ಕಣ್ಣೂರ್‌ ಹಾಗೂ ಕೋಯಿಕ್ಕೋಡ್‌ ಜಿಲ್ಲೆಗಳಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಅಪಾರ ಆಸ್ತಿ ಹಾನಿಯಾಗಿದೆ.

ಪಥನಂತಿಟ್ಟ, ಎರ್ನಾಕುಲಂ, ಅಲಪುಳ ಜಿಲ್ಲೆಗಳಲ್ಲಿ ಪ್ರವಾಹ ಮುಂದುವರಿದಿದೆ. ಜಲಾವೃತಗೊಂಡಿರುವ ಮನೆಗಳಲ್ಲಿ ಮಕ್ಕಳು ಮತ್ತು ವೃದ್ಧರು ಸೇರಿ ಹಲವು ಜನರು ಸಿಲುಕಿಕೊಂಡಿದ್ದಾರೆ. ಸೇನಾ ಪಡೆಗಳು ಮತ್ತು ಎನ್‌ಡಿಆರ್‌ಎಫ್‌ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದವರನ್ನು ಹೆಲಿಕಾಪ್ಟರ್‌ ಮತ್ತು ದೋಣಿಗಳಲ್ಲಿ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಕೊಚ್ಚಿಯಲ್ಲಿ ಪ್ರವಾಹದಲ್ಲಿ ರೈಲು ಹಳಿಗಳು ಮುಳುಗಿರುವುದರಿಂದ ರೈಲು ಹಾಗೂ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಸಾರಿಗೆಯಲ್ಲೂ ವ್ಯತ್ಯಯವಾಗಿದೆ. ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ನೀರು ನುಗ್ಗಿ ಬಂದಿದೆ. ರನ್‌ವೇ ಮತ್ತು ಪಾರ್ಕಿಂಗ್‌ ಸ್ಥಳಗಳು ಸಂಪೂರ್ಣ ಜಲಾವೃತವಾಗಿವೆ. ಬುಧವಾರದಿಂದಲೇ ನಿಲ್ದಾಣ ಸ್ಥಗಿತಗೊಳಿಸಲಾಗಿದೆ.

ಪರಿಯಾರ್‌ ನದಿಯಲ್ಲಿ ಪ್ರವಾಹ ಉಕ್ಕೇರಿದೆ. ಮುಲ್ಲಪೆರಿಯಾರ್‌, ಚೆರುತೋನಿ, ಇಡುಕ್ಕಿ, ಇದಮಲಯಾರ್‌ ಜಲಾಶಯಗಳು ಸೇರಿ ರಾಜ್ಯದ ಪ್ರಮುಖ ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ.

ಪರಿಹಾರ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಸೇನಾಪಡೆಯ ವಿಶೇಷ ತಂಡಗಳು ಮತ್ತು ಎನ್‌ಡಿಆರ್‌ಎಫ್‌ನಿಂದ 40 ಹೆಚ್ಚುವರಿ ತಂಡಗಳನ್ನು ಕೇರಳಕ್ಕೆ ರವಾನಿಸಿದೆ.

ಮುಲ್ಲಪೆರಿಯಾರ್‌ ಅಣೆಕಟ್ಟೆ ನೀರು ತಗ್ಗಿಸಲು ಸುಪ್ರೀಂ ಸೂಚನೆ

ನವದೆಹಲಿ: ಕೇರಳ ರಾಜ್ಯದಲ್ಲಿ ಸ್ಮಶಾನ ಸದೃಶ ಪ್ರವಾಹ ಉಂಟಾಗಿರುವುದರಿಂದ ಮುಲ್ಲಪೆರಿಯಾರ್‌ ಜಲಾಶಯದ ಈಗಿನ 142 ನೀರಿನ ಸಂಗ್ರಹ ಮಟ್ಟವನ್ನು ತಕ್ಷಣವೇ 139 ಅಡಿಗೆ ಇಳಿಸುವಂತೆ ಸುಪ್ರೀಂಕೋರ್ಟ್‌ ಗುರುವಾರ ಜಲಾಶಯದ ವಿಪತ್ತು ನಿರ್ವಹಣಾ ಉಪ ಸಮಿತಿಗೆ ಆದೇಶ ನೀಡಿದೆ.

ಜಲಾಶಯದ ನೀರಿನ ಸಂಗ್ರಹಮಟ್ಟ ತಗ್ಗಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಕೇರಳ ಸಲ್ಲಿಸಿರುವ ಅರ್ಜಿ ವಿಚಾಚರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರಿದ್ದ ದ್ವಿಸದಸ್ಯ ಪೀಠ ಆರಂಭಿಸಿದೆ.

ಕೇರಳದಲ್ಲಿ ಪ್ರವಾಹ ಭೀಕರವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೀಠವು, ಶುಕ್ರವಾರ ಬೆಳಿಗ್ಗೆಯೇ ಕೇಂದ್ರದ ಎನ್‌ಸಿಎಂಎಸ್‌ (ರಾಷ್ಟ್ರೀಯ ವಿಕೋಪ ನಿರ್ವಹಣಾ ಸಮಿತಿ) ಅಧಿಕಾರಿಗಳು, ತಮಿಳುನಾಡು ಮತ್ತು ಕೇರಳದ ಮುಖ್ಯಕಾರ್ಯ‌ದರ್ಶಿಗಳ ತುರ್ತು ಸಭೆ ನಡೆಸಿ, ಜಲಾಶಯದ ನೀರಿನ ಸಂಗ್ರಹ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು.

ಅಧಿಕಾರಿಗಳು ಖುದ್ದು ಹಾಜರಾಗಲು ಸಾಧ್ಯವಾಗದಿದ್ದರೆ ವಿಡಿಯೊಕಾನ್ಫರೆನ್ಸ್‌ ಸಭೆ ನಡೆಸಲು ಪೀಠ ನಿರ್ದೇಶನ ನೀಡಿತು. ಶುಕ್ರವಾರ ಮಧ್ಯಾಹ್ನ ಮತ್ತೆ ವಿಚಾರಣೆ ನಡೆಸುವುದಾಗಿ ಪೀಠ ಹೇಳಿತು.

ಪ್ರವಾಹದಿಂದ ತೊಂದರೆಗೆ ಒಳಗಾದ ಮತ್ತು ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆಯೂ ಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟ ತಗ್ಗಿಸಲು ತಮಿಳುನಾಡು ಸರ್ಕಾರ ಮೊದನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ.

ತುರ್ತು ಪರಿಹಾರ ಕಾರ್ಯಕ್ಕೆ ಎನ್‌ಸಿಎಂಸಿ ನಿರ್ಧಾರ

ಕೇರಳದಲ್ಲಿ ತುರ್ತು ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ರಾಷ್ಟ್ರೀಯ ವಿಕೋಪ ನಿರ್ವಹಣಾ ಸಮಿತಿ (ಎನ್‌ಸಿಎಂಸಿ) ಗುರುವಾರ ತೀರ್ಮಾನ ತೆಗೆದುಕೊಂಡಿದೆ.

ರಕ್ಷಣಾ ದಳದ ಮೂರು ಸೇನಾಪಡೆಗಳು ಮತ್ತು ಎನ್‌ಡಿಆರ್‌ಎಫ್‌ ತಂಡಗಳು ಒಳಗೊಂಡಂತೆ ವಿವಿಧ ಇಲಾಖೆ ಸಿಬ್ಬಂದಿ ಬಳಸಿಕೊಂಡು, ಪ್ರವಾಹ ಪೀಡಿತ 14 ಜಿಲ್ಲೆಗಳ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಎನ್‌ಸಿಎಂಸಿ ತೀರ್ಮಾನಿಸಿದೆ.

ಪ್ರಧಾನಿ ನಿರ್ದೇಶನದ ಮೇರೆಗೆ ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ಅವರು, ಮೂರು ಸೇನಾ ಪಡೆಗಳ ಮುಖ್ಯಸ್ಥರು, ಗೃಹ ಸಚಿವಾಲಯಗಳ ಕಾರ್ಯದರ್ಶಿಗಳು, ಎನ್‌ಸಿಎಂಸಿ ಅಧಿಕಾರಿಗಳು ಹಾಗೂ ರಕ್ಷಣಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

ಕೇರಳದ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸುವಂತೆ ಸೂಚಿಸಿದರು ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಕಾವೇರಿ, ಭವಾನಿ ನದಿಗಳಲ್ಲಿ ಪ್ರವಾಹ

ಚೆನ್ನೈ: ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹದಿಂದ ಗ್ರಾಮಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮೆಟ್ಟೂರು ಜಲಾಶಯದಿಂದ ಹೆಚ್ಚುವರಿ ನೀರು ಹೊರ ಬಿಟ್ಟಿರುವುದರಿಂದ ಕಾವೇರಿ ಮತ್ತು ಭವಾನಿ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ನದಿ ಪಾತ್ರದ ಗ್ರಾಮಗಳು ಮತ್ತು ತಗ್ಗು ಪ್ರದೇಶದಲ್ಲಿ ಬೆಳೆಗಳು ಮುಳುಗಡೆಯಾಗಿವೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಭವಾನಿಸಾಗರ ಜಲಾಶಯ ಗರಿಷ್ಠ ಸಂಗ್ರಹ ಮಟ್ಟ 104 ಅಡಿಗೆ ತಲುಪಿದ್ದು, ನೀರು ಹೊರ ಬಿಡಲಾಗುತ್ತಿದೆ. ಈರೋಡಿನಲ್ಲಿ ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಸೇಲಂನ ಮೆಟ್ಟೂರು–ಎಡಪ್ಪಾಡಿ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ.

ಕುಂದಾ ಮತ್ತು ಪಿಲ್ಲೂರ್‌ ಜಲಾಶಯಗಳಿಂದಲೂ ನೀರು ಹೊರಬಿಡಲಾಗಿದೆ. ನೀಲಗಿರಿ ಜಿಲ್ಲೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ನೆರೆಯ ಕರ್ನಾಟಕ ರಾಜ್ಯವು ಕೆಆರ್‌ಎಸ್‌ನಿಂದ ಹೆಚ್ಚು ನೀರು ಹೊರ ಬಿಟ್ಟಿರುವುದರಿಂದ ಪ್ರವಾಹ ಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

**

ಕೇರಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಸೂಚಿಸಲಾಗಿದೆ.

–ನರೇಂದ್ರ ಮೋದಿ, ಪ್ರಧಾನಮಂತ್ರಿ

**

ಕೇರಳ ರಾಜ್ಯದ ಪರಿಸ್ಥಿತಿ ಭೀಕರವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆ ರಾಜ್ಯಕ್ಕೆ ಹೆಚ್ಚುವರಿ ನೆರವು ನೀಡಬೇಕು.

–ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

**

ಭೀಕರ ಪ್ರವಾಹದಿಂದ ರಾಜ್ಯ ತತ್ತರಿಸಿದೆ. 1,654 ಹಳ್ಳಿಗಳಿಗೆ ವ್ಯಾಪಕ ಹಾನಿಯಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ದೇಶದ ಜನತೆ ಕೈಜೋಡಿಸಬೇಕು.

– ಸಿಪಿಎಂಎಲ್‌,  ಕೇರಳ ಪಾಲಿಟ್‌ ಬ್ಯುರೊ

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !