ದೇವರ ನಾಡು ಕೇರಳದಲ್ಲಿ ವರುಣನ ಮುನಿಸು: ಮೃತರ ಸಂಖ್ಯೆ 29ಕ್ಕೆ ಏರಿಕೆ

7
ಮುಂಗಾರು ಮಳೆಗೆ ತತ್ತರಿಸಿದ ಕೇರಳ: ಮೃತರ ಸಂಖ್ಯೆ 29ಕ್ಕೆ ಏರಿಕೆ

ದೇವರ ನಾಡು ಕೇರಳದಲ್ಲಿ ವರುಣನ ಮುನಿಸು: ಮೃತರ ಸಂಖ್ಯೆ 29ಕ್ಕೆ ಏರಿಕೆ

Published:
Updated:

ತಿರುವನಂತಪುರ (ಪಿಟಿಐ): ಕಳೆದ ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮುಂಗಾರು ಮಳೆಗೆ ತತ್ತರಿಸಿಹೋಗಿರುವ ಕೇರಳ ಅಕ್ಷರಶಃ ಮುಳುಗಡೆಯಾಗಿದೆ.

ಹೆಚ್ಚಿನ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಇಡುಕ್ಕಿ, ಚೆರುತೋಣಿ, ಕಾಕ್ಕಿ, ಮುಲ್ಲಪೆರಿಯಾರ್‌, ಇಡಮಲಯಾರ್‌ ಸೇರಿದಂತೆ ರಾಜ್ಯದ 24 ಅಣೆಕಟ್ಟುಗಳು ಭರ್ತಿಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅಪಾರ ಪ್ರಮಾಣದ ನೀರು ಹೊರ ಹರಿಸಲಾಗುತ್ತಿದೆ.

ಈ ನಡುವೆ ಪ್ರವಾಹ, ಭೂಕುಸಿತ, ಮನೆ ಕುಸಿತ ಸೇರಿದಂತೆ ಮಳೆ ಸಂಬಂಧಿತ ಅವಘಡಗಳಿಗೆ ಬಲಿಯಾದವರ ಸಂಖ್ಯೆ 29ಕ್ಕೆ ತಲುಪಿದೆ.

ಇಡುಕ್ಕಿ, ಎರ್ನಾಕುಲಂ ಜಿಲ್ಲೆಯ
ಲ್ಲಿಯೇ ಹೆಚ್ಚಿನ ಹಾನಿಯಾಗಿದೆ. ಸಾವು, ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅನೇಕರು ಕಣ್ಮರೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸರ್ಕಾರ ತಿಳಿಸಿದೆ.

ನೆರವಿನ ಭರವಸೆ: ಪ್ರವಾಹದಿಂದ ಕಂಗೆಟ್ಟಿರುವ ಕೇರಳಕ್ಕೆ ಅಗತ್ಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್‌ ಸಿಂಗ್ ಭರವಸೆ ನೀಡಿದ್ದಾರೆ.

ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಜತೆ ದೂರವಾಣಿಯಲ್ಲಿ ಮಾತನಾಡಿದ ಮೋದಿ ಮಾಹಿತಿ ಪಡೆದಿದ್ದಾರೆ. ಭಾನುವಾರ ರಾಜ್ಯಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸುವುದಾಗಿ ರಾಜನಾಥ್ ಸಿಂಗ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ತಗ್ಗಿದ ಮಳೆ: ಇಳಿಯದ ನದಿ ನಿರಿನ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದ್ದರೂ ನದಿಗಳ ನೀರಿನ ಮಟ್ಟ ಮಾತ್ರ ಇಳಿಕೆಯಾಗಿಲ್ಲ.

ಕೇರಳದಿಂದ ಹರಿದು ಬರುವ ಕಪಿಲಾ ಉಪನದಿಗಳು ತುಂಬಿ ಹರಿಯುತ್ತಿದ್ದು, ನಂಜನಗೂಡು ಸಮೀಪ ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಮೈಸೂರು– ಊಟಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲೆ ಕಪಿಲಾ ನದಿಯ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ.

ಬದಲಿ ಮಾರ್ಗದಲ್ಲಿ ವಾಹನ ಸಂಚರಿಸುತ್ತಿವೆ. ಹೆದ್ದಾರಿಯಲ್ಲಿರುವ ಮಲ್ಲನಮೂಲೆ ಮಠಕ್ಕೆ ನೀರು ನುಗ್ಗಿದೆ. ಈ ಹಿಂದೆ 1962ರಲ್ಲಿ ನೀರು ನುಗ್ಗಿತ್ತು.

ಮೈಸೂರು– ಸುತ್ತೂರು ಸಂಪರ್ಕಿಸುವ ಸೇತುವೆ ಸಂಪೂರ್ಣ ಮುಳುಗಿದೆ. ಹೊಮ್ಮರಗಳ್ಳಿ ಮತ್ತು ನಂಜನಗೂಡು ಸಂಪರ್ಕಿಸುವ ಪ್ರಮುಖ ಸೇತುವೆ ಜಲಾವೃತಗೊಂಡಿದೆ. ಮೈಸೂರು– ಸರಗೂರು ಸಂಪರ್ಕಿಸುವ ತುಂಬಸೋಗೆ ಸೇತುವೆ ಮುಳುಗುವ ಹಂತದಲ್ಲಿದೆ.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರವೂ ಉತ್ತಮ ಮಳೆಯಾಗಿದೆ. ಭಾಗಮಂಡಲ, ನಾಪೋಕ್ಲು, ತಲಕಾವೇರಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದೆ. ಹಾರಂಗಿ ಒಳಹರಿವು ಏರಿಕೆಯಾಗಿದೆ.

ಕುಶಾಲನಗರ ಸಮೀಪದ ಯಡವನಾಡು ಗ್ರಾಮದ ಸೇತುವೆ ಮತ್ತೆ ಮುಳುಗಡೆಯಾಗಿದ್ದು ರಸ್ತೆ ಸಂಚಾರ ಬಂದ್‌ ಆಗಿದೆ. ಜಿಲ್ಲೆಯಲ್ಲಿ ಕಾವೇರಿ ನದಿಯು ಮೈದುಂಬಿಕೊಂಡು ಹರಿಯುತ್ತಿದೆ. 

 ***

* ಘಟ್ಟ ಪ್ರದೇಶದಲ್ಲಿ ಶುಕ್ರವಾರ ತಗ್ಗಿದ ಮಳೆಯ ರಭಸ 

* ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಹೊಳೆ, ನೇತ್ರಾವತಿ, ಕುಮಾರಧಾರ ನದಿಗಳಲ್ಲಿ ನೀರಿನ ಮಟ್ಟ ಇಳಿಕೆ

* ಸತತ ಮೂರು ದಿನಗಳಿಂದ ಮುಳುಗಡೆಯಾಗಿದ್ದ ಹೊಸಮಠ ಸೇತುವೆ ಸಂಚಾರಕ್ಕೆ ಮುಕ್ತ

* ಎಡಕುಮೇರಿಯಲ್ಲಿ ಭೂಕುಸಿತದಿಂದ ಎರಡು ದಿನ ಸ್ಥಗಿತಗೊಂಡಿದ್ದ ಮಂಗಳೂರು–ಬೆಂಗಳೂರು ರೈಲು ಸಂಚಾರ ಶುಕ್ರವಾರ ಆರಂಭ

* ಭಾರಿ ಮಳೆ ಮುನ್ಸೂಚನೆ: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಶನಿವಾರ ರಜೆ

* ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆ

* ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ. ಭದ್ರಾವತಿ ನಗರದ ಹೊಸ ಸೇತುವೆ ಮೇಲೆ ನೀರು

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !