48 ಗಂಟೆಗಳಲ್ಲಿ ರಾಜಸ್ಥಾನ, ಕಾಶ್ಮೀರದಲ್ಲಿ ಭಾರಿ ಮಳೆ

7
ಹವಾಮಾನ ಇಲಾಖೆ ಮುನ್ಸೂಚನೆ

48 ಗಂಟೆಗಳಲ್ಲಿ ರಾಜಸ್ಥಾನ, ಕಾಶ್ಮೀರದಲ್ಲಿ ಭಾರಿ ಮಳೆ

Published:
Updated:
ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಭಾರಿ ಮಳೆಯಿಂದಾದ ಭೂಕುಸಿತದಲ್ಲಿ ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲಾಯಿತು

ನವದೆಹಲಿ, ಶ್ರೀನಗರ : ಉತ್ತರ ಭಾರತದಲ್ಲಿ ಮುಂಗಾರು ಚುರುಕುಗೊಂಡಿದೆ. ರಾಜಸ್ಥಾನ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆಯಲ್ಲಿ ಹೇಳಲಾಗಿದೆ.

ರಾಜಸ್ಥಾನ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಜಮ್ಮುವಿನಲ್ಲಿ ಮಳೆ ಸಂಬಂಧಿ ಅವಘಡದಲ್ಲಿ ಮೂವರು ಮೃತಪಟ್ಟಿದ್ದಾರೆ. ತ್ರಿಪುರಾ, ಅಸ್ಸಾಂ, ಅರುಣಾಚಲ ಪ್ರದೇಶದ ಹಲವೆಡೆ ಭೂಕುಸಿತ ಉಂಟಾಗಿದೆ. ಆದರೆ ಯಾವುದೇ ಸಾವು–ನೋವು ಸಂಭವಿಸಿಲ್ಲ.

ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ದಕ್ಷಿಣ ಕಾಶ್ಮೀರದ ಹಲವೆಡೆ ಸತತ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಎಲ್ಲ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ರಾಜ್ಯದ ಈ ಭಾಗದಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಶಾಲಾ–ಕಾಲೇಜುಗಳಿಗೆ ಶನಿವಾರ ರಜೆ ನೀಡಲಾಗಿತ್ತು. ಶ್ರೀನಗರದಲ್ಲಿ ಪ್ರವಾಹ ಉಂಟಾಗಿದೆ. ಶ್ರೀನಗರದ ತಗ್ಗು ಪ್ರದೇಶಗಳಲ್ಲಿ ಇರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕಾರ್ಯಾಚರಣೆ ಆರಂಭವಾಗಿದೆ. ಪ್ರವಾಹವನ್ನು ಎದುರಿಸಲು ವಿಕೋಪ ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ.

ಭಾರಿ ಮಳೆ ಮಧ್ಯೆಯೂ ಭಾರಿ ಉಷ್ಣಾಂಶ: ದೆಹಲಿಯಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ನಷ್ಟು ಮತ್ತು 27.9 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇದರ ಮಧ್ಯೆಯೇ ದೆಹಲಿಯಲ್ಲಿ ಭಾರಿ ಮಳೆಯಾಗಿದೆ.

ಸಾವಿನ ಸಂಖ್ಯೆ ಏರಿಕೆ: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಸಂಬಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ.

ಗಸ್ತು ತಿರುಗುತ್ತಿದ್ದ ಇಂಡೊ–ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ವಾಹನದ ಮೇಲೆ ಭಾರಿ ಮಳೆಯ ಕಾರಣ ಗುಡ್ಡವೊಂದು ಕುಸಿದಿತ್ತು. ಸ್ಥಳದಲ್ಲೇ ನಾಲ್ವರು ಯೋಧರು ಮೃತಪಟ್ಟಿದ್ದರು, ಎಂಟು ಮಂದಿ ಗಾಯಗೊಂಡಿದ್ದರು. ಗಾಯಗೊಂಡಿದ್ದವರಲ್ಲಿ ಮತ್ತೊಬ್ಬ ಯೋಧ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಭಾರಿ ಮಳೆಯಿಂದ ಜಮ್ಮುವಿನಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಇಬ್ಬರು ಕೊಚ್ಚಿಹೋಗಿದ್ದಾರೆ. ಅಖ್ನೂರ್‌ ಸೆಕ್ಟರ್‌ನ ಖೌರ್‌ ಗ್ರಾಮದ ಹರರಬನ್ಸ್‌ ಲಾಲ್ (45) ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಅದೇ ರೀತಿ ಫೂಂಕ್ ಪ್ರಾಂತದಲ್ಲಿ ಅನ್ಸಾರ್ ಅಹಮದ್ (22) ಎಂಬು ಯುವಕ ನೆರ ನೀರಿಗೆ ಸಿಲುಕಿ ಮೃತಪಟ್ಟಿದ್ದಾನೆ. ಕಿಸ್ತ್ವಾರ್ ಜಿಲ್ಲೆಯಲ್ಲಿ ಮರ ಉರುಳಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಭಾರಿ ಮಳೆ ಮುಂದುವರೆದ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಹಲ್‌ಗಾಮ್–ಅಮರನಾಥ ಗುಹೆ ಮತ್ತು ಬಾಲ್‌ಟಾಲ್‌–ಅಮರನಾಥ ಗುಹೆ ಎರಡೂ ಮಾರ್ಗಗಳಲ್ಲಿ ಚಾರಣವನ್ನು ಸ್ಥಗಿತಗೊಳಿಸಲಾಗಿದೆ.

ಚಾರಣದ ಹಾದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಜತೆಗೆ ಕಲ್ಲು–ಬಂಡೆಗಳು ಉರುಳಿಬೀಳುತ್ತಿವೆ. ಭೂಕುಸಿತದ ಅಪಾಯವೂ ಇರುವುದರಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಯಾತ್ರೆಯ ಸಲುವಾಗಿ 5,000ಕ್ಕಿಂತಲೂ ಹೆಚ್ಚು ಮಂದಿ ಈಗಾಗಲೇ ಜಮ್ಮು ತಲುಪಿದ್ದಾರೆ. ಪಹಲ್‌ಗಾಮ್ ಮತ್ತು ಬಾಲ್‌ಟಾಲ್‌ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲೂ ಭಾರಿ ಮಳೆ ಆಗುತ್ತಿದ್ದು, ಅಲ್ಲಲ್ಲಿ ರಸ್ತೆಗೆ ಕಲ್ಲುಬಂಡೆಗಳು ಉರುಳುತ್ತಿವೆ. ಹೀಗಾಗಿ ಯಾತ್ರಾರ್ಥಿಗಳನ್ನು ಜಮ್ಮುವಿನಲ್ಲೇ ತಡೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
**
ಮಳೆ ಪ್ರಮಾಣ
(ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆ 8.30ರವರೆಗೆ) :

63.4 ಮಿ.ಮೀ.
ಅನಂತನಾಗ್ ಜಿಲ್ಲೆಯಲ್ಲಾದ ಮಳೆ

58.6 ಮಿ.ಮೀ.
ಖಾಜೀಗಂಡ್ ಜಿಲ್ಲೆಯಲ್ಲಿ ಆದ ಮಳೆ

27.8 ಮಿ.ಮೀ
ಪಹಲ್‌ಗಾಮ್‌ನಲ್ಲಿ ಸುರಿದಿರುವ ಮಳೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !