ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗಲಿ: ಕ್ಷೀಣಿಸಿದ ಮಲ್ಲಿಗೆ ಕೃಷಿ

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಭೌಗೋಳಿಕ ಗುರುತಿನ ಮಾನ್ಯತೆ (ಜಿಐ ಟ್ಯಾಗ್‌) ಪಡೆದಿರುವ ಹಡಗಲಿಯ ಮಲ್ಲಿಗೆ ಕೃಷಿಯು, ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.

ಹೂವಿನ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಇಲ್ಲದೇ ಬೆಳೆಯ ನಿರ್ವಹಣೆಗೆ ಮಾಡಿದ ಖರ್ಚು ಕೂಡ ಸಿಗದಂತಾಗಿದ್ದು, ಸತತ ನಷ್ಟ ಅನುಭವಿಸುತ್ತಿರುವ ರೈತರು ಮಲ್ಲಿಗೆ ಬೆಳೆಯುವುದಕ್ಕೆ ವಿದಾಯ ಹೇಳುತ್ತಿದ್ದಾರೆ.

ದಶಕಗಳ ಹಿಂದೆ ತಾಲ್ಲೂಕಿನ ನಾಲ್ಕೂ ದಿಕ್ಕುಗಳಲ್ಲಿ ಮಲ್ಲಿಗೆ ತೋಟಗಳಿದ್ದವು. ವಿಶಿಷ್ಟ ಪರಿಮಳ ಬೀರುವ, ಸುವಾಸನೆ ಮಲ್ಲಿಗೆ ಎಂದೇ ಹೆಸರಾದ ಈ ಸೂಜಿ ಮಲ್ಲಿಗೆಗೆ (ಜಿಐ ಟ್ಯಾಗ್‌) ಕೂಡ ಸಿಕ್ಕಿದೆ. ಆದರೆ, ಇಂಥ ವಿಶಿಷ್ಟ ಮಲ್ಲಿಗೆಯ ತೋಟಗಳು ಈಗ ಕಣ್ಮರೆಯಾಗುತ್ತಿವೆ. ಸಾವಿರಾರು ಹೆಕ್ಟೇರ್‌ ವಿಸ್ತೀರ್ಣದಲ್ಲಿ ಹರಡಿದ್ದ ಮಲ್ಲಿಗೆ ಕೃಷಿ, ಇಂದು 287 ಹೆಕ್ಟೇರ್‌ಗೆ ಕುಸಿದಿದೆ.

ವಿಜಯನಗರ ಅರಸರ ಕಾಲದಲ್ಲಿ ಹಂಪೆಯ ಅಧಿದೇವತೆ ವಿರೂಪಾಕ್ಷ, ಪಂಪಾಂಬಿಕೆಯರ ಪೂಜೆಗೆ ಇಲ್ಲಿಂದಲೇ ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಮೂಲಕ ಮಲ್ಲಿಗೆ ಹೂ ಕಳಿಸಿಕೊಡಲಾಗುತ್ತಿತ್ತು ಎಂಬ ಪ್ರತೀತಿ ಇದೆ. ಮಲ್ಲಿಗೆ ಹೂ ಹೆಚ್ಚು ಬೆಳೆಯುವ ಕಾರಣಕ್ಕೆ ಹೂವಿನಹಡಗಲಿಗೆ ‘ಪೂವಿನ ಪಡಂಗಿಲೆ’ ಎಂಬ ಪ್ರಾಚೀನ ಹೆಸರೂ ಇತ್ತು.

ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಮಲ್ಲಿಗೆಯ ಕಾಲ. ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಹುಬ್ಬಳ್ಳಿ ಮುಂತಾದ ನಗರ ಪ್ರದೇಶಗಳಿಗೆ ಇಲ್ಲಿನ ಮಲ್ಲಿಗೆ ಮೊಗ್ಗು ರವಾನೆಯಾಗುತ್ತದೆ.

‘ಪ್ರತಿ ಕೆಜಿ ಮಲ್ಲಿಗೆ ಮೊಗ್ಗು ಬಿಡಿಸಲು ಕೂಲಿ ಕಾರ್ಮಿಕರಿಗೆ ₹ 80 ಕೊಡುತ್ತೇವೆ. ಆದರೆ, ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ಮೊಗ್ಗಿಗೆ ದಲ್ಲಾಳಿಗಳು ಕೇವಲ ₹ 30ರಿಂದ 40 ನಿಗದಿ ಮಾಡುತ್ತಾರೆ. ಕನಿಷ್ಠ ಉತ್ಪಾದನಾ ವೆಚ್ಚವೂ ಕೂಡ ಸಿಗುತ್ತಿಲ್ಲ’ ಎಂದು ಮುದೇನೂರು ಗ್ರಾಮದ ರೈತ ಮಲ್ಲನಕೇರಿ ಹನುಮಂತಪ್ಪ ಅಳಲು ತೋಡಿಕೊಳ್ಳುತ್ತಾರೆ.

‘ನಾಲ್ಕು ವರ್ಷದ ಹಿಂದೆ ಪ್ರತಿ ಎಕರೆಗೆ ಸುಮಾರು ₹ 4 ಲಕ್ಷ ಲಾಭ ಸಿಗುತ್ತಿತ್ತು. ಹಿಂದಿನ ವರ್ಷ ಖರ್ಚು ತೆಗೆದು ಬರೀ ₹ 10 ಸಾವಿರವಷ್ಟೇ ಉಳಿದಿದೆ. ನಷ್ಟದ ಭೀತಿಯಿಂದಾಗಿ ಈ ಸಲ, ಎರಡು ಎಕರೆ ಪೈಕಿ ಕೇವಲ ಅರ್ಧ ಎಕರೆಯಲ್ಲಿ ಮಾತ್ರ ಮಲ್ಲಿಗೆ ಬೆಳೆದಿದ್ದೇವೆ’ ಎಂದು ಅವರು ತಿಳಿಸಿದರು.

‘ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ ಎಂದು ದಲ್ಲಾಳಿಗಳು ಹೇಳುತ್ತಾರೆ. ಆದರೆ, ಗ್ರಾಹಕರು ಮಾತ್ರ ಎಂದಿನ ಬೆಲೆಗೇ ಹೂ ಖರೀದಿಸುತ್ತಾರೆ. ಸರ್ಕಾರವು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸ್ಥಿರ ಬೆಲೆ ದೊರಕಿಸಬೇಕು’ ಎಂದು ಮತ್ತೊಬ್ಬ ಬೆಳೆಗಾರ ಮೈಲಾರಪ್ಪ ಒತ್ತಾಯಿಸುತ್ತಾರೆ.

ಬೆಲೆ ಏರಿಳಿತದಿಂದಾಗಿ ಮಲ್ಲಿಗೆ ಮೊಗ್ಗು ಬಿಡಿಸುವ ಕೂಲಿ ಕಾರ್ಮಿಕರೂ ತೊಂದರೆಗೆ ಸಿಲುಕಿದ್ದಾರೆ. ‘ವರ್ಷದಲ್ಲಿ ಆರೇಳು ತಿಂಗಳು ನಮಗೆ ಕೆಲಸ ಸಿಗುತ್ತಿತ್ತು. ನಾಲ್ಕು ವರ್ಷದ ಹಿಂದೆ ನಮ್ಮೂರಲ್ಲಿ 28 ಮಲ್ಲಿಗೆ ತೋಟಗಳು ಇದ್ದವು. ಈಗ ಬರೀ ಮೂರು ಇವೆ. ನಮಗೆ ಕೆಲಸವೇ ಇಲ್ಲದಂತಾಗಿದೆ’ ಎಂದು ಹಳ್ಳಿ ರತ್ನಮ್ಮ, ತಿಪ್ಪಾಪುರ ಮಂಜಮ್ಮ, ಮುದ್ದಿ ಗೌರಮ್ಮ ಅವರು ಕೆಲಸಗಾರರ ಬವಣೆ ಬಗ್ಗೆ  ಹೇಳಿಕೊಳ್ಳುತ್ತಾರೆ.

* ರೈತ ಉತ್ಪಾದಕ ಸಂಸ್ಥೆಯ ಮೂಲಕ ಮಲ್ಲಿಗೆಗೆ ಪೇಟೆ ಒದಗಿಸಲು ಯೋಜಿಸಿದ್ದೇವೆ. ರೆಫ್ರಿಜರೇಟರ್ ವಾಹನದಲ್ಲಿ ಮಹಾ ನಗರಗಳಿಗೆ ಮಲ್ಲಿಗೆ ಕಳಿಸುವ ವ್ಯವಸ್ಥೆ ಮಾಡುತ್ತೇವೆ.

-ರಮೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಹಡಗಲಿ 

ಮುಖ್ಯಾಂಶಗಳು

* ಹಡಗಲಿಯ ಪಾರಂಪರಿಕ ಮಲ್ಲಿಗೆ ಕೃಷಿಗೆ ಕುತ್ತು

* ಹೂ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT