ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌–ಜೆಡಿಎಸ್‌ ನಡುವಿನ ಕದನ ಕುತೂಹಲ

ಮಾಗಡಿ ವಿಧಾನಸಭಾ ಕ್ಷೇತ್ರ: ಬಾಲಕೃಷ್ಣ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಪ್ರಯತ್ನ
Last Updated 7 ಏಪ್ರಿಲ್ 2018, 11:01 IST
ಅಕ್ಷರ ಗಾತ್ರ

ರಾಮನಗರ: ಕೆಂಪೇಗೌಡರು ಕಟ್ಟಿ ಆಳಿದ ಮಾಗಡಿಯ ಕೋಟೆ ಮೈದಾನವು ಇದೀಗ ಮತಬೇಟೆಯ ಕೇಂದ್ರವಾಗಿದೆ. ತಿಂಗಳ ಒಳಗೇ ಭಾರಿ ಸಮಾವೇಶಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ಇಲ್ಲಿನ ರಾಜಕಾರಣವೂ ಜಿದ್ದಾಜಿದ್ದಿನಿಂದ ಕೂಡಿದ್ದು, ಕುತೂಹಲ ಕೆರಳಿಸಿದೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದು ಅಭ್ಯರ್ಥಿಯಾಗಿದ್ದ ಎಚ್‌.ಸಿ. ಬಾಲಕೃಷ್ಣ ತದನಂತರದಲ್ಲಿ ಪಕ್ಷದ ವಿರುದ್ಧ ಬಂಡಾಯ ಎದ್ದು, ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಒಂದೊಮ್ಮೆ ಎಚ್.ಡಿ. ಕುಮಾರಸ್ವಾಮಿ ಅವರ ಪರಮಾಪ್ತರಾಗಿದ್ದ ಅವರು ಇದೀಗ ರಾಜಕೀಯ ಬದ್ದ ವೈರಿಯಾಗಿದ್ದಾರೆ. ಎಚ್‌.ಡಿ. ದೇವೇಗೌಡರೂ ಅವರ ಸಿಟ್ಟಿಗೆದ್ದಿದ್ದು, ಸ್ವತಃ ತಾವೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಟೊಂಕ ಕಟ್ಟಿ ನಿಂತಿದ್ದಾರೆ.

ದಶಕಗಳಿಂದಲೂ ಇಲ್ಲಿ ಕಾಂಗ್ರೆಸ್‌ ಹಾಗೂ ಜನತಾದಳದ ನಡುವೆ ನೇರ ಹಣಾಹಣಿ ನಡೆಯತ್ತಲೇ ಬಂದಿದೆ. ಈ ಬಾರಿಯೂ ಈ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಖಚಿತ. ಈಗಾಗಲೇ ಚುನಾವಣಾ ಕಾವು ಏರಿದ್ದು, ಉಭಯ ಪಕ್ಷಗಳ ನಡುವೆ ಆಗಾಗ್ಗೆ ಘರ್ಷಣೆ ಸಾಮಾನ್ಯ ಎಂಬಂತೆ ಆಗಿರುವುದು ಸಾಮಾನ್ಯ ಜನರ ನಿದ್ದೆಗೆಡಿಸಿದೆ. ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಿದ್ದು, ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

2013ರ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ತೆನೆ ಹೊತ್ತ ಮಹಿಳೆಯ ಚಿಹ್ನೆಯೊಂದಿಗೆ ಬಾಲಕೃಷ್ಣ ಕಣಕ್ಕೆ ಇಳಿದಿದ್ದರೆ, ಕೈ ಪಾಳಯದಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಮಂಜುನಾಥ್‌ ಸ್ಪರ್ಧಿಸಿದ್ದರು. ಅಂತಿಮವಾಗಿ ಬಾಲಕೃಷ್ಣ 14,359 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.
ಈ ಬಾರಿಯ ಚುನಾವಣೆಯಲ್ಲಿಯೂ ಈ ಇಬ್ಬರ ನಡುವೆಯೇ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ. ಆದರೆ ಇಬ್ಬರು ಅಭ್ಯರ್ಥಿಗಳ ಪಕ್ಷ ಮಾತ್ರ ಬದಲಾಗಿ ಹೋಗಿದೆ. ಬಾಲಕೃಷ್ಣ ಕಾಂಗ್ರೆಸ್‌ನಿಂದ ಹಾಗೂ ಎ.ಮಂಜುನಾಥ್‌ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ.

ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಅನುಭವ ಎಚ್.ಸಿ, ಬಾಲಕೃಷ್ಣ ಅವರದ್ದು. ಅವರ ತಂದೆ ಎಚ್‌.ಜಿ. ಚನ್ನಪ್ಪ ಅವರು ಇಲ್ಲಿಂದಲೇ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಅಲ್ಪಕಾಲ ಮಂತ್ರಿಯೂ ಆಗಿದ್ದರು.

1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಇಳಿದ ಬಾಲಕೃಷ್ಣ, ಕ್ಷೇತ್ರದ ಪ್ರಭಾವಿ ನಾಯಕ ಎಚ್‌.ಎಂ. ರೇವಣ್ಣರನ್ನು ಮಣಿಸುವ ಮೂಲಕ ರಾಜಕೀಯ ಜೀವನದ ಇನಿಂಗ್ಸ್ ಆರಂಭಿಸಿದರು. ಅಲ್ಲಿಂದ ಸತತ ಮೂರು ಬಾರಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕಳೆದ ಐದು ವರ್ಷದ ಅವಧಿಯಲ್ಲಿ ಮಾಗಡಿ ಕ್ಷೇತ್ರವು ಅಭಿವೃದ್ಧಿಯ ವಿಚಾರದಲ್ಲಿ ಮಿಶ್ರ ಫಲ ಕಂಡಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಕಾರಣ ಇಲ್ಲಿನ ಹೆದ್ದಾರಿಗಳು ಅಭಿವೃದ್ಧಿ ಕಂಡಿವೆ. ಕೋಟೆ ಕೊತ್ತಲಗಳು ನವೀಕರಣಗೊಳ್ಳುತ್ತಿವೆ. ಮಂಚನಬೆಲೆ ಜಲಾಶಯದಿಂದ ಮಾಗಡಿ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳಿಗೆ ನೀರು ಸಿಕ್ಕಿದೆ. ನಿರಂತರ ಕುಡಿಯುವ ನೀರು ಪೂರೈಸುವ ಪ್ರಯತ್ನವೂ ನಡೆದಿದೆ. ಒಳ ಚರಂಡಿ ವ್ಯವಸ್ಥೆಯು ಸುಧಾರಣೆ ಕಾಣುತ್ತಿದೆ.

ಮಾಗಡಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಡದಿಯು ಈ ಅವಧಿಯಲ್ಲಿಯೇ ಪುರಸಭೆಯಾಗಿ ಘೋಷಣೆಯಾಗಿದೆ. ಇಲ್ಲಿಯೂ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಸಹಿತ ಮೂಲ ಸೌಕರ್ಯಗಳನ್ನು ಕಲ್ಪಿಸುವ ಪ್ರಯತ್ನ ನಡೆದಿದೆ.

ಆದರೆ ಹೇಮಾವತಿ ನದಿ ನೀರನ್ನು ತಂದು ಇಲ್ಲಿನ ಕೆರೆಗಳನ್ನು ತುಂಬಿಸುವ ಶ್ರೀರಂಗ ಯೋಜನೆ ಮಾತ್ರ ಹೆಚ್ಚು ಪ್ರಗತಿ ಕಂಡಿಲ್ಲ. ವೈ.ಜಿ. ಗುಡ್ಡ ಜಲಾಶಯದ ಸದ್ಬಳಕೆ ಆಗಿಲ್ಲ. ಮಾಗಡಿ ಪಟ್ಟಣದೊಳಗೆ ಒಂದೆರಡು ಕಟ್ಟಡ ಬಿಟ್ಟರೆ ಹೆಚ್ಚೇನು ಅನುಕೂಲ ಮಾಡಿಕೊಟ್ಟಿಲ್ಲ. ಹಳ್ಳಿಗಳ ಪರಿಸ್ಥಿತಿಯಲ್ಲಿ ಹೆಚ್ಚು ಸುಧಾರಣೆ ಆಗಿಲ್ಲ. ಬೆಂಗಳೂರಿಗೆ ಹತ್ತಿರದಲ್ಲಿಯೇ ಇದ್ದರೂ ಮಾಗಡಿಯಲ್ಲಿ ಯಾವುದೇ ಪ್ರಮುಖ ಕೈಗಾರಿಕೆಗಳು ಸ್ಥಾಪನೆ ಆಗಿಲ್ಲ ಎನ್ನುವುದು ವಿರೋಧಿಗಳ ಆರೋಪವಾಗಿದೆ. ಪಿಡಬ್ಲ್ಯುಡಿ ಹಗರಣದಲ್ಲಿ ಅವರ ಹೆಸರೂ ಕೇಳಿಬಂದಿದ್ದು ಇಮೇಜ್‌ಗೆ ಧಕ್ಕೆ ತಂದಿದೆ.

ಕುದೂರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಎ.ಮಂಜು ಮಾಗಡಿಯಲ್ಲಿ ಪಕ್ಷ ಸಂಘಟನೆ ಮೂಲಕ ಮತ್ತೆ ಕಾಂಗ್ರೆಸ್‌ಗೆ ಬಲ ತಂದುಕೊಡುವ ಪ್ರಯತ್ನ ಮಾಡಿದವರು. 2008ರ ಚುನಾವಣೆಯಲ್ಲಿ ಇಲ್ಲಿ ಕೈ ಪಾಳಯದ ಅಭ್ಯರ್ಥಿಯಾಗಿದ್ದ ಕಲ್ಪನಾ ಶಿವಣ್ಣ ಕೇವಲ 10,399 ಮತ ಗಳಿಸಲಷ್ಟೇ ಶಕ್ತರಾಗಿದ್ದರು. 2013ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದ ಮಂಜು ಇದನ್ನು 60,462ಕ್ಕೆ ಏರಿಸಿದರು. ನಂತರದಲ್ಲಿ ಸಂಸದ ಡಿ.ಕೆ. ಸುರೇಶ್ ಜೊತೆ ಹೆಚ್ಚು ಗುರುತಿಸಿಕೊಂಡರು.

ಬದಲಾದ ಸನ್ನಿವೇಶದಲ್ಲಿ ಮಂಜು ಜೆಡಿಎಸ್‌ಗೆ ಬಂದಿದ್ದಾರೆ. ಕ್ಷೇತ್ರದಲ್ಲಿ ಪಕ್ಷಕ್ಕೆ ಇರುವ ಪ್ರಬಲ ಸಂಘಟನೆಯನ್ನು ಬಳಸಿಕೊಳ್ಳುವ ಜೊತೆಗೆ ಕಾಂಗ್ರೆಸ್‌ನ ಮುಖಂಡರನ್ನೂ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಎಚ್‌ಡಿಕೆ ಹಾಗೂ ದೇವೇಗೌಡರನ್ನೇ ಶಕ್ತಿಯಾಗಿ ನಂಬಿದ್ದಾರೆ.

ಇತ್ತ ಕಾಂಗ್ರೆಸ್‌ನಲ್ಲಿ ಘಟಾನುಘಟಿ ನಾಯಕರ ಬೆಂಬಲ ಸಿಗುವ ನಿರೀಕ್ಷೆಯಲ್ಲಿ ಬಾಲಕೃಷ್ಣ ಇದ್ದಾರೆ. ಜಿಲ್ಲೆಯ ಪ್ರಬಲ ನಾಯಕರಾದ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಸಚಿವ ಎಚ್.ಎಂ. ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಸಹಿತ ಹಿರಿಯರ ಬೆಂಬಲದೊಂದಿಗೆ ಚುನಾವಣೆ ಎದುರಿಸುವ ಆತ್ಮವಿಶ್ವಾಸದಲ್ಲಿ ಇದ್ದಾರೆ.

ಕ್ಷೇತ್ರದಲ್ಲಿ ಈಗಾಗಲೇ ಪಕ್ಷದ ಪ್ರಚಾರ ಕಾರ್ಯವು ತಾರಕಕ್ಕೆ ಏರಿದೆ. ಕೋಟೆ ಮೈದಾನದಲ್ಲಿ ಎಚ್‌.ಡಿ. ದೇವೇಗೌಡರು ಹಾಗೂ ಎಚ್‌.ಡಿ. ಕುಮಾರಸ್ವಾಮಿ ಬೃಹತ್‌ ಸಮಾವೇಶ ನಡೆಸುವ ಮೂಲಕ ಬಾಲಕೃಷ್ಣ ವಿರುದ್ಧ ಅಬ್ಬರಿಸಿ ಹೋಗಿದ್ದಾರೆ. ಅದಕ್ಕೆ ಪ್ರತಿಯಾಗಿ ಬಾಲಕೃಷ್ಣ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಘಟಾನುಘಟಿ ನಾಯಕರನ್ನೇ ಕರೆಸಿ ‘ಜನಾಶೀರ್ವಾದ’ ಬೇಡಿದ್ದಾರೆ. ಹಳ್ಳಿಗಳಲ್ಲಿಯೂ ಪ್ರಚಾರ ಕಾರ್ಯವು ಚುರುಕಾಗಿ ನಡೆದಿದೆ.

ಜಾತಿ ಸಮೀಕರಣ; ಕ್ಷೇತ್ರದ ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯವು ಪ್ರಬಲವಾಗಿದೆ. ನಂತರದಲ್ಲಿ ದಲಿತರು, ಮುಸ್ಲಿಮರು ಹೆಚ್ಚಾಗಿದ್ದು ನಿರ್ಣಾಯಕರಾಗಿದ್ದಾರೆ. ಲಿಂಗಾಯತರು , ಕುರುಬ ಮತ್ತು ದೇವಾಂಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

‘ಅಭ್ಯರ್ಥಿ ಅಂತಿಮಗೊಳಿಸದ ಬಿಜೆಪಿಬಿಜೆಪಿಯು ಕ್ಷೇತ್ರದಲ್ಲಿ ತನ್ನದೇ ಆದ ಸಾಂಪ್ರದಾಯಿಕ ಮತಗಳನ್ನು ಹೊಂದಿದೆ. ಆದಾಗ್ಯೂ ಪಕ್ಷವು ತನ್ನ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.ಮುಖಂಡರಾದ ರಂಗಧಾಮಯ್ಯ, ಹನುಮಂತರಾಜು, ಮಹೇಶಯ್ಯ, ಪುಟ್ಟರಂಗಪ್ಪ ಸಹಿತ ಹಲವರ ಹೆಸರು ಚಾಲ್ತಿಯಲ್ಲಿ ಇದೆ. ಆದರೆ ಇನ್ನಷ್ಟೇ ಹೆಸರು ಪ್ರಕಟಿಸಬೇಕಿದೆ.’

‘ಜೆಡಿಎಸ್‌ಗೆ ಕೃಷ್ಣಮೂರ್ತಿ ಬಲಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಎಚ್.ಎಂ. ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ ಚುನಾವಣೆಯ ಹೊಸ್ತಿಲಿನಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧೆ ಮಾಡಿದ್ದ ಅವರು 27,143 ಮತ ಗಳಿಸಿದ್ದರು. ಇದರಿಂದ ಎ.ಮಂಜು ಗೆಲುವಿಗೆ ಅಡ್ಡಿಯಾಯಿತು ಎಂದು ಹೇಳಲಾಗುತ್ತಿದೆ. ಈ ಚುನಾವಣೆಯಲ್ಲಿ ಕೃಷ್ಣಪ್ಪ ಮಂಜು ಪರ ನಿಂತಿದ್ದು, ಅವರನ್ನು ಗೆಲ್ಲಿಸುವ ಭರವಸೆ ಹೊಂದಿದ್ದಾರೆ.’

‘ಪಕ್ಷಾಂತರದಿಂದಲೇ ಕ್ಷೇತ್ರ ಅಭಿವೃದ್ಧಿ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದೇನೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.ಇದರಿಂದಾಗಿ ಕಡೆಯ ವರ್ಷಗಳಲ್ಲಿ ಕ್ಷೇತ್ರಕ್ಕೆ ನೂರು ಕೋಟಿಗೂ ಹೆಚ್ಚು ಅನುದಾನ ಸಿಕ್ಕಿದೆ. ಬಿಡದಿ, ಮಾಗಡಿ ಪಟ್ಟಣಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಸುಧಾರಣೆಗೆ ಅನುದಾನ ದೊರೆತಿದೆ. ಕುದೂರು ಹೋಬಳಿಯೊಂದಕ್ಕೇ ಹತ್ತಾರು ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಯೋಜನೆಯು ಪ್ರಗತಿಯಲ್ಲಿದೆ ಎಂದಿದ್ದಾರೆ.’

ಅಭಿವೃದ್ಧಿ ಶೂನ್ಯಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕ್ಷೇತ್ರ ಅಭಿವೃದ್ಧಿ ಕಂಡಿತ್ತು. ಅದಾದ ನಂತರ ಯಾವ ಕೆಲಸವೂ ಆಗಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಹೇಳಿದ್ದಾರೆ.ಬೆಂಗಳೂರಿಗೆ ಹತ್ತಿರದಲ್ಲಿಯೇ ಇದ್ದರೂ ಮಾಗಡಿಯಲ್ಲಿ ಯಾವುದೇ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಬಿಡದಿಯ ವೃಷಭಾವತಿ ಕಣಿವೆಯ ಜನರ ಕಷ್ಟ ಪರಿಹಾರವಾಗಿಲ್ಲ. ಬಾಲಕೃಷ್ಣ ಕೇವಲ ಎಫ್‌ಐಆರ್ ಶಾಸಕರಾಗಿದ್ದು, ಯಾವುದೇ ಜನಪರ ಹೋರಾಟಗಳಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.

ಜೆಡಿಎಸ್‌ಗೆ ಕೃಷ್ಣಮೂರ್ತಿ ಬಲ ಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಎಚ್.ಎಂ. ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ ಚುನಾವಣೆಯ ಹೊಸ್ತಿಲಿನಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧೆ ಮಾಡಿದ್ದ ಅವರು 27,143 ಮತ ಗಳಿಸಿದ್ದರು. ಇದರಿಂದ ಎ.ಮಂಜು ಗೆಲುವಿಗೆ ಅಡ್ಡಿಯಾಯಿತು ಎಂದು ಹೇಳಲಾಗುತ್ತಿದೆ. ಈ ಚುನಾವಣೆಯಲ್ಲಿ ಕೃಷ್ಣಪ್ಪ ಮಂಜು ಪರ ನಿಂತಿದ್ದು, ಅವರನ್ನು ಗೆಲ್ಲಿಸುವ ಭರವಸೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT