ಮಂಗಳವಾರ, ನವೆಂಬರ್ 19, 2019
22 °C

ಕೇರಳದಲ್ಲಿ ಭಾರೀ ಮಳೆ: 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, ಸಂಚಾರ ಅಸ್ತವ್ಯಸ್ತ

Published:
Updated:
Keral Rain

ತಿರುವನಂತಪುರ: ಕೇರಳದ ಹಲವು ಜಿಲ್ಲೆಗಳಲ್ಲಿ ಸೋಮವಾರ ಮುಂಜಾನೆ ಭಾರೀ ಮಳೆ ಆರಂಭವಾಗಿದ್ದು, ಇನ್ನೂ ಎರಡು ದಿನಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ. ಎರ್ನಾಕುಲಂ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಮಾಣದ ಮೇಲೆಯೂ ಮಳೆ ಪರಿಣಾಮ ಬೀರಿದೆ. ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ತಿರುವನಂಪುರಂ, ಕೊಲ್ಲಂ, ಅಲಪುಝಾ, ಪಟ್ಟನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶುರ್‌, ಪಾಲಕ್ಕಾಡ್, ಮಲಪ್ಪುರಂ, ಕೊಝಿಕೊಡೆ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಹೇಳಿರುವ ಹವಾಮಾನ ಇಲಾಖೆ ಆರೆಂಜ್ ಅಲರ್ಟ್‌ ಘೋಷಿಸಿದೆ.

‘ಹವಾಮಾನದ ಬಗ್ಗೆ ಜಾಗ್ರತೆಯಿಂದಿರಿ. ರಾಜ್ಯದಾದ್ಯಂತ ಮಳೆಯಾಗುವ ಸಾಧ್ಯತೆ ಇದೆ. ಭಾರೀ ಮಳೆ ಎದುರಿಸಲು ಸನ್ನದ್ಧರಾಗಿರಿ. ತಿರುವನಂತಪುರಿಂದ ವಯನಾಡ್‌ ಜಿಲ್ಲೆಗಳವರೆಗೆ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳು ಯೆಲ್ಲೊ ಅಲರ್ಟ್‌ನಲ್ಲಿವೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ಟ್ವೀಟ್ ಮಾಡಿದೆ.

ಎರ್ನಾಕುಲಂನ ಹಲವು ಮತಗಟ್ಟೆಗಳು ನೀರಿನಲ್ಲಿ ಮುಳುಗಿವೆ. ಚುನಾವಣೆ ಮುಂದೂಡವಂತೆ ಆಯೋಗವನ್ನು ರಾಜಕೀಯ ಪಕ್ಷಗಳು ಒತ್ತಾಯಿಸಿವೆ.

‘ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ಅವಲೋಕಿಸುತ್ತಿದ್ದೇವೆ. ಎರ್ನಾಕುಲಂನಲ್ಲಿ ಕನಿಷ್ಠ 12 ಮತಗಟ್ಟೆಗಳನ್ನು ಸ್ಥಳಾಂತರಿಸಲಾಗಿದೆ. ಎಲ್ಲ ಆಯ್ಕೆಗಳೂ ಮುಕ್ತವಾಗಿವೆ’ ಎಂದು ಮುಖ್ಯ ಚುನಾವಣಾಧಿಕಾರಿ ಟಿಕರಂ ಮೀನಾ ಹೇಳಿದ್ದಾರೆ.

ಹಲವು ದೂರಪ್ರಯಾಣದ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ಎರ್ನಾಕುಲಂನಲ್ಲಿ ರೈಲು ಹಳಿಗಳು ನೀರಿನಲ್ಲಿ ಮುಳುಗಿವೆ. ಜಂಕ್ಷನ್‌ ಒಳಗೆ ನೀರು ನುಗ್ಗಿದ ನಂತರ ರೈಲು ಸಂಚಾರ ರದ್ದುಪಡಿಸಲಾಯಿತು.

ಕನಿಷ್ಠ 6 ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಗ್ಗಿನ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಬಿರುಗಾಳಿ ಮತ್ತು ಸಿಡಿಲು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ಆಗಸ್ಟ್‌ನಿಂದ ಈವರೆಗೆ ಕೇರಳದಲ್ಲಿ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ 120ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)