ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದುರಾಳಿ ಯಾರೆಂಬುದು ಮುಖ್ಯವಲ್ಲ, ಮಾಡಿದ ಕೆಲಸ ಶ್ರೀರಕ್ಷೆ: ಸಚಿವ ಪ್ರಮೋದ್ ಮಧ್ವರಾಜ್

Last Updated 19 ಏಪ್ರಿಲ್ 2018, 9:23 IST
ಅಕ್ಷರ ಗಾತ್ರ

ಉಡುಪಿ: ‘ನನ್ನ ಎದುರು ಸ್ಪರ್ಧೆಗೆ ನಿಲ್ಲುವ ರಾಜಕೀಯ ಎದುರಾಳಿ ಯಾರೆಂದು ನಾನು ನೋಡುವುದಿಲ್ಲ. ಮಾಡಿರುವ ಅಭಿವೃದ್ಧಿ ಕೆಲಸ, ಜನರಿಗೆ ಸಲ್ಲಿಸಿರುವ ಸೇವೆಯನ್ನು ನೆಚ್ಚಿಕೊಂಡಿದ್ದೇನೆ. ಕಾರ್ಯಕರ್ತರು ಹಾಗೂ ಸಂಘಟನೆಯ ಮೂಲಕ ಚುನಾವಣಾ ಪ್ರಚಾರ ಮಾಡುತ್ತೇನೆ’ ಎಂದು  ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಘುಪತಿ ಭಟ್ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತವಾಗಿರುವ ಸುದ್ದಿ ಇರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ನಾನು ಮಾಡಿರುವ ಅಭಿವೃದ್ಧಿ ಕೆಲಸವೇ ನನಗೆ ಶ್ರೀರಕ್ಷೆಯಾಗಲಿದೆ. ವಿರೋಧ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ವರೆಗೆ ನಾಲ್ಕು ಚುನಾವಣೆಗಳನ್ನು ಎದುರಿಸಿದ್ದೇನೆ. ನನ್ನದೇ ಶೈಲಿಯಲ್ಲಿ ಚುನಾವಣಾ ಪ್ರಚಾರ ಮಾಡಿದ್ದೇನೆ. ಈ ಬಾರಿ ಸ್ಥಳೀಯ ನಾಯಕರೊಂದಿಗೆ ಪ್ರಚಾರ ಮಾಡಲಾಗುವುದು. ಆದರೆ ಪಕ್ಷ ನನ್ನ ಹಿಂದೆ ಇರಲಿದೆ. ಪ್ರತಿ ದಿನ ಚುನಾವಣಾ ಪ್ರಚಾರ ಸಭೆ ಹಾಗೂ ಕಾರ್ಯಕರ್ತರ ಸಭೆಯನ್ನು ಮಾಡುತ್ತಿದ್ದೇನೆ. ಕಾರ್ಯಕರ್ತರಲ್ಲಿ ಅಥವಾ ಮುಖಂಡರಲ್ಲಿ ಅಸಮಾಧಾನ ಇರುವುದು ಈ ವರೆಗೆ ಕಂಡು ಬಂದಿಲ್ಲ’ ಎಂದರು.

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈ ಬಾರಿಯ ಚುನಾವಣೆಯ ಮುಖ್ಯ ವಿಷಯವಾಗಿದೆ. ಈಗಾಗಲೇ ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೇನೆ. ₹270 ಕೋಟಿ ವೆಚ್ಚದಲ್ಲಿ ವಾರಾಹಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗುತ್ತಿದೆ. ಸುಮಾರು 40 ಕಿ.ಮೀ ಪೈಪ್‌ಲೈನ್ ಮೂಲಕ ವಾರಾಹಿ ನೀರನ್ನು ತಂದು ಉಡುಪಿ ವಿಧಾನಸಭಾ ಕ್ಷೇತ್ರದ ಜನರಿಗೆ ನೀಡಲಾಗುವುದು. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಸಹ ಆರಂಭವಾಗಿದೆ.

ತೆಂಕನಿಡಿಯೂರು ಹಾಗೂ ಚಾಂತಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಹ ಜಾರಿ ಮಾಡಲಾಗುವುದು. ಉಡುಪಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಬೇಡಿಕೆ ಇದೆ. ಕಾಲೇಜು ಬಂದರೆ ಅದರೊಂದಿಗೆ ಹೈಟೆಕ್ ಆಸ್ಪತ್ರೆ ಸಹ ಬರಲಿದೆ. ಅದಕ್ಕಾಗಿ ಪ್ರಯತ್ನ ಮುಂದುವರೆಯಲಿದೆ. ಸೂರಿಲ್ಲದ ಬಡವರಿಗೆ ನಿವೇಶನ ನೀಡಲಾಗುವುದು. ಆ ನಂತರ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಾಗೂ ನಗರ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವರಿಗೆ 94ಸಿ– 94ಸಿಸಿ ಅನ್ವಯ ಹಕ್ಕುಪತ್ರ ನೀಡಲು ಗಮನಹರಿಸಲಾಗುವುದು. ಪರಿಭಾವಿತ ಅರಣ್ಯ, ಪರಂಬೋಕು ಜಮೀನು ಮುಂತಾದ ಸಮಸ್ಯೆಗಳಿವೆ. ಅದನ್ನು ಪರಿಹರಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ, ಮುಖಂಡರಾದ ಜನಾರ್ದನ ಭಂಡಾರ್ಕರ್ ಇದ್ದರು.

**

22ರಂದು ಜನಾಶೀರ್ವಾದ ಸಮಾವೇಶ

‘ಇದೇ 23ರಂದು ನಾಮ ಪತ್ರ ಸಲ್ಲಿಸುತ್ತೇನೆ. ಅದಕ್ಕೆ ಪೂರ್ವಭಾವಿಯಾಗಿ ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್‌ನಲ್ಲಿ ಮಧ್ಯಾಹ್ನ 2.30ಕ್ಕೆ ಬೃಹತ್ ಜನಾಶೀರ್ವಾದ ಯಾತ್ರೆ ನಡೆಸಿ ಜನರ ಆಶೀರ್ವಾದ ಪಡೆಯುತ್ತೇನೆ. ಸುಮಾರು 20 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಮಾಜಿ ಶಾಸಕ ಕೆ. ಗೋಪಾಲ ಭಂಡಾರಿ ಭಾಗಹಿಸುವರು. ಕ್ಷೇತ್ರದ ಪ್ರತಿ ಮನೆಗೂ ಆಹ್ವಾನ ಪತ್ರವನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT