ಬುಧವಾರ, ಸೆಪ್ಟೆಂಬರ್ 18, 2019
28 °C
ಪರೀಕ್ಷೆ, ಸಂದರ್ಶನ ವಿಧಾನ ಬದಲಿಸಲು ಸಲಹೆ

ಹಿಂದಿ ಭಾಷಿಕರಿಗಾಗಿ ಯುಪಿಎಸ್‌ಸಿ ಸಂದರ್ಶನದಲ್ಲಿ ಬದಲಾವಣೆಗೆ ಆರ್‌ಎಸ್‌ಎಸ್ ಒತ್ತಡ

Published:
Updated:

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ‘ಸಿವಿಲ್ ಸರ್ವೀಸಸ್ ಆ್ಯಪ್ಟಿಟ್ಯೂಡ್ ಟೆಸ್ಟ್ (ಸಿಎಸ್‌ಎಟಿ)’ ಮತ್ತು ಸಂದರ್ಶನದ ಕ್ರಮದಲ್ಲಿ ಬದಲಾವಣೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಒತ್ತಾಯಿಸಿರುವುದಾಗಿ ವರದಿಯಾಗಿದೆ.

ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯುವವರಿಗೆ ಸಿಎಸ್‌ಎಟಿಯಿಂದ ಅನನುಕೂಲವಾಗುತ್ತಿದೆ ಮತ್ತು ಸಂದರ್ಶನವು ಏಕರೂಪವಾಗಿಲ್ಲ ಎಂಬುದಾಗಿ ಸಂಘ ಪ್ರತಿಪಾದಿಸಿದೆ ಎಂದು ದಿ ಪ್ರಿಂಟ್  ಜಾಲತಾಣ ವರದಿ ಮಾಡಿದೆ.

ಇದನ್ನೂ ಓದಿ: ಚಳವಳಿ ನೆಪ; ‘ಉತ್ತರ’ದ ಜಪ​

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿ ಆರ್‌ಎಸ್‌ಎಸ್ ರಚಿಸಿರುವ ಸಮಿತಿಯು ಕಳೆದ ವಾರಾಂತ್ಯದಲ್ಲಿ ಸಭೆ ನಡೆಸಿದ್ದು, ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ. ಈ ಸಭೆಯಲ್ಲಿ ಸೇವಾ ಆಯೋಗದ ಪ್ರಮುಖ ಪಾಲುದಾರರು, ಯುಪಿಎಸ್‌ಸಿ ಸದಸ್ಯರೂ ಭಾಗವಹಿಸಿದ್ದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘದ ಪ್ರಮುಖರೂ ಪಾಲ್ಗೊಂಡಿದ್ದರು ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ‘ಹಿಂದಿ’ ಕಟೌಟ್ ಕಿತ್ತವರ ಬಂಧನ​

‘ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ತಾರತಮ್ಯವಾಗದ ರೀತಿಯಲ್ಲಿ ಪರೀಕ್ಷಾ ಮಾದರಿಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ’ ಎಂದು ಆರ್‌ಎಸ್‌ಎಸ್‌ನ ‘ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್’ನ ರಾಷ್ಟ್ರೀಯ ಸಂಚಾಲಕ ದೇವೇಂದ್ರ ಸಿಂಗ್ ಹೇಳಿದ್ದಾರೆ.

‘ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕಳೆದ ಐದು ವರ್ಷಗಳಿಂದ ಶ್ರಮಿಸುತ್ತಾ ಇದ್ದೇವೆ. ಪ್ರಸ್ತುತ, ಉದ್ಯೋಗದ ಅವಶ್ಯಕತೆಗಳಿಗೆ ತಕ್ಕ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಹಿಂದಿ ಮಾಧ್ಯಮದವರಿಗೆ ಅನನಕೂಲ’

ಸಿಎಸ್‌ಎಟಿ ತೇರ್ಗಡೆಯಾಗುವ ಶೇ 90ರಷ್ಟು ಮಂದಿ ಆಂಗ್ಲ ಮಾಧ್ಯಮದವರು. ಹೀಗಾಗಿ ಈ ಪರೀಕ್ಷಾ ವ್ಯವಸ್ಥೆಯು ನ್ಯಾಯ ಒದಗಿಸುವುದಿಲ್ಲ ಎಂಬುದು ಆರ್‌ಎಸ್‌ಎಸ್‌ ವಾದ.

ಇದನ್ನೂ ಓದಿ: ಹಿಂದಿ ಭಾಷೆ ಹೇರಿಕೆ ಖಂಡಿಸಿ ಪ್ರತಿಭಟನೆ​

‘ಉದ್ಯೋಗದ ಅವಶ್ಯಕತೆಗಳಿಗೆ ತಕ್ಕ ರೀತಿಯಲ್ಲಿ ನಡೆಯದ ಕಾರಣ ಸಿಎಸ್‌ಎಟಿ ಕೈಬಿಡಬೇಕೆಂದು ನಾವು ಬಯಸುತ್ತೇವೆ. ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂದು ಬಯಸುವ ವ್ಯಕ್ತಿ ಹೊಂದಿರಬೇಕಾದ ಕೌಶಲಗಳನ್ನು ಈ ವಿಧಾನವು ಸರಿಯಾಗಿ ಪರೀಕ್ಷಿಸುವುದಿಲ್ಲ’ ಎಂದು ದೇವೇಂದ್ರ ಸಿಂಗ್ ಹೇಳಿದ್ದಾರೆ.

‘ಸದ್ಯ ಆಂಗ್ಲ ಮಾಧ್ಯಮದ ಶೇ 90ರಷ್ಟು ಮಂದಿ ಅರ್ಹತೆ ಪಡೆಯುತ್ತಾರೆ. ಹಿಂದಿ ಮಾಧ್ಯಮದಲ್ಲಿ ಬರೆಯುವವರು ಸಿಎಸ್‌ಎಟಿಯಿಂದಾಗಿ ಹೊರನಡೆಯಬೇಕಾಗುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ತಾಣದಲ್ಲಿ ಕನ್ನಡದ ಚರ್ಚೆ: ಧರ್ಮ, ರಾಜಕೀಯ, ಸ್ವಾಭಿಮಾನದ ಆಯಾಮ​

ಅಭ್ಯರ್ಥಿಯ ಸಂವಹನ, ಗ್ರಹಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲವನ್ನು ಪರೀಕ್ಷಿಸುವ ಸಲುವಾಗಿ 2011ರಲ್ಲಿ ಸರ್ಕಾರವು ಸಿಎಸ್‌ಎಟಿ ಪರೀಕ್ಷಾ ವಿಧಾನ ಜಾರಿಗೆ ತಂದಿತ್ತು. ಪರೀಕ್ಷಾ ವಿಧಾನದ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಕಾರಣಕ್ಕಾಗಿ 2015ರಲ್ಲಿ ನಿಯಮದಲ್ಲಿ ತುಸು ಬದಲಾವಣೆ ಮಾಡಲಾಯಿತು. ಅಭ್ಯರ್ಥಿಯು ಶೇ 33ರಷ್ಟು ಅಂಕ ಗಳಿಸಿದರೆ ಮುಂದಿನ ಹಂತಕ್ಕೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.

‘ಸಂದರ್ಶನ ಏಕರೂಪವಾಗಿಲ್ಲ’

ಈಗಿನ ಸಂದರ್ಶನದ ಮಾದರಿ ಏಕರೂಪವಾಗಿಲ್ಲ. ಸಂದರ್ಶನ ನಡೆಸುವ ತಂಡ ಹೇಗಿದೆ ಎಂಬುದೂ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದೂ ಆರ್‌ಎಸ್‌ಎಸ್ ಆರೋಪಿಸಿದೆ.

‘ಸಂದರ್ಶನ ಪ್ರಕ್ರಿಯೆಯಲ್ಲಿ ಏಕರೂಪತೆಯಿಲ್ಲದಿರುವುದೇ ಅಭ್ಯರ್ಥಿಗಳು ವಿಫಲರಾಗಲು ಕಾರಣ ಎಂಬುದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ. ಕೆಲವು ಸಂದರ್ಶಕರು ಉದಾರಿಗಳಾಗಿದ್ದು ಹೆಚ್ಚು ಅಂಕಗಳನ್ನು ನೀಡುತ್ತಾರೆ. ಇನ್ನು ಕೆಲವರು ಕಟ್ಟುನಿಟ್ಟಾಗಿರುತ್ತಾರೆ. ಕೊನೆಯದಾಗಿ ಸಂದರ್ಶನ ನಡೆಸುವ ತಂಡದ ಆಧಾರದ ಮೇಲೆ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗುತ್ತದೆ. ಇದು ಸರಿಯಲ್ಲ. ಈ ವಿಚಾರದಲ್ಲಿ ಏಕರೂಪತೆಯಿರಬೇಕು’ ಎಂದು ದೇವೇಂದ್ರ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಸದ್ದು ಮಾಡುತ್ತಿದೆ ಹಿಂದಿ ಕಟೌಟ್‌; ನಾಡು, ರಾಜಕೀಯ, ಧರ್ಮದ ಆಯಾಮ ಪಡೆದ ಪ್ರಕರಣ​

‘ಸಂದರ್ಶನ ನಡೆಸುವ ತಂಡಗಳಿಗೆ ಅದರ ಹಿಂದಿನ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿ, ತರಬೇತಿ ನೀಡಿ ಒಟ್ಟು ಸಂದರ್ಶನ ಪ್ರಕ್ರಿಯೆಯ ಗುಣಮಟ್ಟ ಹೆಚ್ಚಿಸಬೇಕು’ ಎಂಬುದು ನಮ್ಮ ಪ್ರಮುಖ ಸಲಹೆ. ಇದಕ್ಕಾಗಿ ಸಂದರ್ಶನದ ಬದಲು ಸೇನೆಯಲ್ಲಿ ಅಸ್ತಿತ್ವದಲ್ಲಿರುವ ‘ಸೈಕಾಲಾಜಿಕಲ್ ಟೆಸ್ಟ್‌’ ಮಾದರಿ ಅನುಸರಿಸಬೇಕು’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಆನ್ಸರ್‌ ಕೀ ನೀಡಬೇಕು’

ಪ್ರಾಥಮಿಕ ಪರೀಕ್ಷೆ (preliminary exams) ನಡೆದ ತಕ್ಷಣವೇ ‘ಆನ್ಸರ್ ಕೀ’ ನೀಡಬೇಕು ಎಂದೂ ಸಂಘ ಒತ್ತಾಯಿಸಿದೆ. ಸದ್ಯ ಲೋಕಸೇವಾ ಆಯೋಗವು ಫಲಿತಾಂಶ ಪ್ರಕಟವಾದ ಮೇಲೆ ‘ಆನ್ಸರ್ ಕೀ’ ನೀಡುತ್ತಿದೆ.

ಆದರೆ, ಇಡೀ ಪ್ರಕ್ರಿಯೆ ಪೂರ್ಣಗೊಂಡ ನಂತರ ಮಾತ್ರ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಯುಪಿಎಸ್‌ಸಿ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

‘ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಂತರವೇ ಉತ್ತರ ಮತ್ತು ಇತರ ಎಲ್ಲ ಮಾಹಿತಿಗಳನ್ನು ನಾವು ಬಹಿರಂಗಪಡಿಸುತ್ತೇವೆ. ಆಯ್ಕೆ ಪ್ರಕ್ರಿಯೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಈ ಕ್ರಮ ಅನುಸರಿಸಲಾಗುತ್ತಿದೆ. ಮೊದಲೇ ಮಾಹಿತಿ ಬಹಿರಂಗಪಡಿಸಿದರೆ ಆಯ್ಕೆ ಪ್ರಕ್ರಿಯೆಗೆ ಅಡ್ಡಿಯಾಗುವ ಸಾಧ್ಯತೆ ಇದೆ’ ಎಂದು ಹಿರಿಯ ಅಧಿಕಾರಿ ನೀಡಿರುವ ಸ್ಪಷ್ಟನೆಯನ್ನೂ ದಿ ಪ್ರಿಂಟ್ ವರದಿ ಉಲ್ಲೇಖಿಸಿದೆ.

Post Comments (+)