ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಪಾಕಿಸ್ತಾನ ನಡುವೆ ಉದ್ವಿಗ್ನತೆ: ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ

Last Updated 28 ಫೆಬ್ರುವರಿ 2019, 1:20 IST
ಅಕ್ಷರ ಗಾತ್ರ

ನವದೆಹಲಿ: ಭಾರತ– ಪಾಕಿಸ್ತಾನ ನಡುವೆ ಉದ್ವಿಗ್ನತೆ ಇರುವ ಕಾರಣ ಎಲ್ಲ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದುರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್‌) ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಸಂಚರಿಸುವ ರೈಲುಗಳು ಮತ್ತು ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಎಲ್ಲ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆಎಂದು ಆರ್‌ಪಿಎಫ್‌ನ ಡೈರೆಕ್ಟರ್‌ ಜನರಲ್‌ ಅರುಣ್‌ ಕುಮಾರ್ ತಿಳಿಸಿದ್ದಾರೆ. ಸೂಕ್ಷ್ಮ ರೈಲು ನಿಲ್ದಾಣಗಳನ್ನು ಗುರುತಿಸಿದ್ದು, ಅಲ್ಲಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿಇಲ್ಲಿಯವರೆಗೂ ಯಾವುದೇ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ
ಹುಬ್ಬಳ್ಳಿ: ಭಾರತ– ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ, ಕಾರವಾರದ ಸೀಬರ್ಡ್‌ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಭದ್ರತೆ ಹೆಚ್ಚಿಸಲಾಗಿದೆ.

ಸೀಬರ್ಡ್ ನೌಕಾನೆಲೆಯಲ್ಲಿ ‘ಸ್ಟೇಟ್ 1 ಅಲರ್ಟ್‌’ ಘೋಷಿಸಿ ಭಾರಿ ಭದ್ರತೆ ಒದಗಿಸಲಾಗಿದೆ. ಬೆಳಗಾವಿಯ ಮರಾಠಾ ಲೈಟ್‌ ಇನ್‌ಫೆಂಟ್ರಿ ರೆಜಿಮೆಂಟ್‌ ತರಬೇತಿ ಕೇಂದ್ರಕ್ಕೂ ಬಿಗಿ ಭದ್ರತೆ ಒದಗಿಸಲಾಗಿದೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟಕ ತಪಾಸಣಾ ತಂಡವನ್ನು ನಿಯೋಜಿಸಲಾಗಿದೆ.

ಗುಂಡಿನ ದಾಳಿ: ಇಬ್ಬರು ಉಗ್ರರ ಹತ್ಯೆ
ಶ್ರೀನಗರ (ಪಿಟಿಐ): ಶೋಪಿಯಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಜೈಷ್‌ –ಎ– ಮೊಹಮ್ಮದ್‌(ಜೆಇಎಂ) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಭಾರತದ ಯೋಧರು ಹತ್ಯೆ ಮಾಡಿದ್ದಾರೆ.

ಮಿಮೆಂಡಾರ್ ಪ್ರದೇಶದಲ್ಲಿ ಉಗ್ರರು ಇರುವ ಕುರಿತು ಖಚಿತ ಮಾಹಿತಿ ಮೇರೆಗೆ ಯೋಧರು ಕಾರ್ಯಾಚರಣೆ ನಡೆಸಿದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಹುತ್ಮಾತರ ಪತ್ನಿಯರಿಗೆ ಸರ್ಕಾರಿ ನೌಕರಿ
ಚೆನ್ನೈ (ಪಿಟಿಐ): ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟಿದ್ದ ಇಬ್ಬರು ಯೋಧರ ಪತ್ನಿಯರಿಗೆ ತಮಿಳುನಾಡು ಸರ್ಕಾರ ಬುಧವಾರ ಸರ್ಕಾರಿ ನೌಕರಿ ನೀಡಿದೆ. ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಇಬ್ಬರಿಗೂ ನೇಮಕಾತಿ ಆದೇಶ ಪತ್ರ ನೀಡಿದರು.

ಅನುಕಂಪದ ಆಧಾರದಲ್ಲಿ ಕುಟುಂಬದ ಸದಸ್ಯರಿಗೆ ನೌಕರಿ ನೀಡುವುದಾಗಿ ರಾಜ್ಯ ಸರ್ಕಾರ ಈ ಹಿಂದೆಯೇ ಘೋಷಣೆ ಮಾಡಿತ್ತು. ಯೋಧ ಜಿ.ಸುಬ್ರಮಣಿಯನ್‌ ಪತ್ನಿ ಕೃಷ್ಣವೇಣಿ ಹಾಗೂ ಸಿ.ಶಿವಚಂದ್ರನ್‌ ಪತ್ನಿ ಗಾಂಧಿಮಥಿ ಅವರಿಗೆ ಉದ್ಯೋಗ ನೀಡಲಾಗಿದೆ. ಈ ಇಬ್ಬರಿಗೂ ರಾಜ್ಯ ಸರ್ಕಾರ ತಲಾ ₹ 20 ಲಕ್ಷ ಪರಿಹಾರ ಘೋಷಣೆ ಮಾಡಿತ್ತು.

**



ಪೈಲಟ್‌ ವಾಪಸಾಗುವವರೆಗೆ ರಾಜಕೀಯ ಬಿಡಿ: ಒಮರ್
ಶ್ರೀನಗರ (ಪಿಟಿಐ):
ನಾಪತ್ತೆಯಾಗಿರುವ ವಾಯುಪಡೆ ಪೈಲಟ್ ಸುರಕ್ಷಿತವಾಗಿ ವಾಪಸಾಗುವವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಲ್ಲ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕು ಎಂದು ಜಮ್ಮು–ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.

‘ನಮ್ಮ ಪೈಲಟ್ ಪಾಕಿಸ್ತಾನದ ವಶದಲ್ಲಿರುವ ವೇಳೆಯಲ್ಲಿ ಪ್ರಧಾನಿಯವರು ಜನರ ತೆರಿಗೆ ಹಣದಿಂದ ನಡೆಸುತ್ತಿರುವ ಸಮಾವೇಶದಲ್ಲಿ ರಾಜಕೀಯ ಭಾಷಣ ಮಾಡುವ ತಮ್ಮ ಎಂದಿನ ಪ್ರವೃತ್ತಿಯನ್ನು ಕೈಬಿಡಬೇಕು’ ಎಂದು ಒಮರ್ ಆಗ್ರಹಿಸಿದ್ದಾರೆ.

ಭಾರತೀಯ ಪೈಲಟ್‌ ಅಭಿನಂದನ್ ಅವರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವಂತೆ ಪಾಕಿಸ್ತಾನಕ್ಕೂ ಅವರು ಮನವಿ ಮಾಡಿದ್ದಾರೆ.

***


ಪಾಕ್‌ ಪರ ಪೋಸ್ಟ್‌ ಹಾಕಿದ ಯುವಕನ ಬಂಧನ
ಹೂವಿನಹಡಗಲಿ:
ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪರ ಪೋಸ್ಟ್‌ ಹಾಕಿದ್ದ ಯುವಕನನ್ನು ಹಿರೇಹಡಗಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಹೊಳಲು ಗ್ರಾಮದ ಮೆಹಬೂಬ್ ಮುಜಾವರ್ (21) ಬಂಧಿತ ಆರೋಪಿ. ಹೊಳಲಿನಲ್ಲಿ ಮಾಂಸದ ಅಂಗಡಿ ಇಟ್ಟುಕೊಂಡಿರುವ ಯುವಕತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ಪಾಕಿಸ್ತಾನದ ಸೇನೆಗೆ ನನ್ನ ಬೆಂಬಲ’ ಎಂದು ಬರೆದು ಪೋಸ್ಟ್‌ ಮಾಡಿದ್ದ. ಪ್ರೊಬೇಷನರಿ ಡಿವೈಎಸ್ಪಿ ಜಾವೇದ್ ಇನಾಂದಾರ್ ಅರ್ಧ ಗಂಟೆಯಲ್ಲಿ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT