ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಕಲಿಕೆ ಕಡ್ಡಾಯವಲ್ಲ, ಹಿಂದಿ ಭಾಷೆ ಆಯ್ಕೆ ಮಾತ್ರ-ಕೇಂದ್ರ ಸರ್ಕಾರ

ರಾಷ್ಟ್ರೀಯ ಶಿಕ್ಷಣ ನೀತಿ 2019 ತಿದ್ದುಪಡಿ
Last Updated 12 ಸೆಪ್ಟೆಂಬರ್ 2019, 5:51 IST
ಅಕ್ಷರ ಗಾತ್ರ

ನವದೆಹಲಿ: ತ್ರಿಭಾಷಾ ಸೂತ್ರದ ಅನ್ವಯಮಕ್ಕಳಿಗೆ ಹಿಂದಿ ಭಾಷೆ ಕಲಿಕೆ ಕಡ್ಡಾಯಗೊಳಿಸುವಂತೆ ತಿಳಿಸಲಾಗಿದ್ದ ಅಂಶಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ 2019ರಕರಡಿನಿಂದ ಕೇಂದ್ರ ಸರ್ಕಾರ ಕೈಬಿಟ್ಟಿದ್ದು, ಹಿಂದಿ ಭಾಷೆ ಕೇವಲ ಆಯ್ಕೆ ಮಾತ್ರ ಎಂದುಸ್ಪಷ್ಟಪಡಿಸಿದೆ.

ಈ ಸಂಬಂಧ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆವೆಬ್‌‌ಸೈಟಿನಲ್ಲಿ ಪರಿಷ್ಕೃತ ಕರಡನ್ನು ಅಪ್‌‌ಲೋಡ್ ಮಾಡಲಾಗಿದೆ. ತ್ರಿಭಾಷಾ ಸೂತ್ರದ ಅನ್ವಯ ಹಿಂದಿ ಭಾಷೆ ಆಯಾ ವಿದ್ಯಾರ್ಥಿಯ ಆಯ್ಕೆ ವಿಷಯವಾಗಿದೆ ಎಂದು ತಿಳಿಸಲಾಗಿದೆ.

ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ನೇತೃತ್ವದ ಸಮಿತಿ ರಾಷ್ಟ್ರೀಯ ಶಿಕ್ಷಣ ನೀತಿ 2019 ಅನ್ನು ಮೇ 31ರಂದು ಕೇಂದ್ರ ಸಂಪುಟ ಸಭೆಗೆ ಸಲ್ಲಿಸಿತ್ತು. ಈ ವರದಿಯಲ್ಲಿ ಹಿಂದಿ ಭಾಷೆ ಮಾತನಾಡದ ರಾಜ್ಯಗಳಲ್ಲಿ ಹಿಂದಿಯನ್ನು ಎರಡನೆ ಭಾಷೆಯನ್ನಾಗಿ ಕಲಿಸಬೇಕಾಗುತ್ತದೆ. ಮೊದಲ ಭಾಷೆಯಾಗಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆ ಹಾಗೂ ಮೂರನೆ ಭಾಷೆಯಾಗಿ ಇಂಗ್ಲೀಷ್ ಭಾಷೆ ಕಲ್ಪಿಸುವುದು ಕಡ್ಡಾಯ. ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಪ್ರಾದೇಶಿಕ ಭಾಷೆ ಪ್ರಾಬಲ್ಯವಿರುವ ರಾಜ್ಯಗಳಲ್ಲಿಇಂಗ್ಲಿಷ್ ಮತ್ತು ಹಿಂದಿ ಕಲಿಕೆ ಕಡ್ಡಾಯ. ಇದರೊಂದಿಗೆ ಮತ್ತೊಂದು ಭಾಷೆಗೂ ಸ್ಥಾನವನ್ನೂ ನೀಡಲಾಗಿತ್ತು.

ಹಿಂದಿ ಕಲಿಕೆ ಕಡ್ಡಾಯ ಮಾಡುವ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕಾಳ್ಗಿಚ್ಚಿನಂತೆ ವಿಷಯ ಎಲ್ಲಾ ಕಡೆ ಹರಡಿತ್ತು. ದಕ್ಷಿಣ ರಾಜ್ಯಗಳಲ್ಲಿ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಅಲ್ಲದೆ, ತೀವ್ರ ವಿರೋಧ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿ ಮಾದರಿಯಲ್ಲಿ ಅಭಿಯಾನ ಆರಂಭವಾಯಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ, ಸದ್ದಿಲ್ಲದೆ ಹಿಂದಿ ಕಲಿಕೆ ಅಂಶಗಳನ್ನು ಕರಡಿನಿಂದ ತೆಗೆದು ಹಾಕಿ ಹಿಂದಿ ಭಾಷೆ ಕಲಿಕೆ ಹೇರಿಕೆಯಲ್ಲ, ಇದು ಕೇವಲ ಕರಡು ಅಷ್ಟೇ. ಇದೇ ಅಂತಿಮ ಆದೇಶವಲ್ಲ. ಹಿಂದಿ ಭಾಷೆಯನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಡಲಾಗಿದೆ ಎಂದು ತಿಳಿಸಿದೆ.

ಉತ್ತರ ಭಾರತದಂತೆಯೇ ದಕ್ಷಿಣ ಭಾರತದಲ್ಲಿ ಹಿಂದಿ ಕಲಿಕೆ ಕಡ್ಡಾಯಗೊಳಿಸಬೇಕು. ಆ ಮೂಲಕ ಹಿಂದಿ-ಹಿಂದು-ಹಿಂದುತ್ವ ಎಂಬ ಸಂದೇಶವನ್ನು ಸಾರುವ ಬಿಜೆಪಿಯ ಉದ್ದೇಶಕ್ಕೆ ಈಗ ಹಿನ್ನಡೆಯುಂಟಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಸ್ಥಾಪನೆ ಮಾಡಬೇಕು ಎಂದು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಹಿಂದಿ ಕಲಿಕೆ ಕಡ್ಡಾಯಗೊಳಿಸಿದಲ್ಲಿ ಉತ್ತರ ಭಾರತದಂತೆಯೇ ದಕ್ಷಿಣ ಭಾರತದಲ್ಲಿಯೂ ಹಿಂದಿ ಪ್ರಾಬಲ್ಯ ಹೆಚ್ಚಾಗಿಬಹುಭಾಷೆಗಳನ್ನು ಇಡೀ ರಾಷ್ಟ್ರದ ವಿದ್ಯಾರ್ಥಿಗಳು ಕಲಿಯಲು ಸಾಧ್ಯವಾಗುತ್ತದೆ ಎಂಬುದುರಾಷ್ಟ್ರೀಯ ಶಿಕ್ಷಣ ನೀತಿ ಉದ್ದೇಶ ಎನ್ನಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಸಮಿತಿಯ ಸದಸ್ಯರೂ ಆಗಿರುವ ಕರ್ನಾಟಕ ಮೂಲದ ಶಿಕ್ಷಣ ತಜ್ಞ ಎಂ.ಕೆ.ಶ್ರೀಧರ್, ಈಗಾಗಲೆ ವಿವಾದಿತ ಅಂಶವುಳ್ಳ ಪ್ಯಾರಾವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.ಹಿಂದಿ ಭಾಷೆ ಮಾತನಾಡದ ರಾಜ್ಯಗಳಲ್ಲಿತ್ರಿಭಾಷಾ ಸೂತ್ರದ ಉತ್ತಮ ಜಾರಿಗಾಗಿ ಇನ್ನೂ ಸಲಹೆ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT