ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನೀರಸ, ಗ್ರಾಮೀಣ ಪ್ರದೇಶದಲ್ಲಿ ಉತ್ಸಾಹ

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆ, ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ
Last Updated 13 ಮೇ 2018, 11:24 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿ ಶಾಂತಿಯುತ ಮತದಾನ ನಡೆದಿದೆ. ಜಿಲ್ಲೆಯ ವಿವಿಧೆಡೆ ಮಂದಗತಿಯಲ್ಲಿಯೇ ಆರಂಭವಾದ ಮತದಾನ ಮಧ್ಯಾಹ್ನದ ನಂತರ ಚುರುಕು ಪಡೆಯಿತು. ಸಂಜೆ ಹೊತ್ತಿಗೆ ಬಿರುಸಿನ ಮತದಾನ ನಡೆಯಿತು.

ನಗರ ಪ್ರದೇಶದಲ್ಲಿ ಬೆಳಿಗ್ಗೆ ಮತದಾರರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಗ್ರಾಮೀಣ ಪ್ರದೇಶದ ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ 9 ಗಂಟೆಯ ವರೆಗೂ ಮತದಾರರಲ್ಲಿ ಉತ್ಸಾಹ ಕಂಡು ಬರಲಿಲ್ಲ. ಪ್ರತಿಯೊಂದು ಮತಗಟ್ಟೆಯ ಬಳಿ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ಮತಗಟ್ಟೆಯ ಬಳಿ ಗೌಜು ಗದ್ದಲ ಇರಲಿಲ್ಲ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಬೆರಳೆಣಿಕೆಯ ಬೆಂಬಲಿಗರು ಹಾಗೂ ಕಾರ್ಯಕರ್ತರು ಮಾತ್ರ ಮತಗಟ್ಟೆ ಹೊರಗಡೆ ದೂರದಲ್ಲಿ ಸುಳಿದಾಡುತ್ತಿರುವುದು ಕಂಡು ಬಂದಿತು.

ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ಪುರುಷರು ಹಾಗೂ ಮಹಿಳೆಯರು ಸುಡು ಬಿಸಿಲಲ್ಲೂ ಉತ್ಸಾಹದಿಂದ ಮತದಾನ ಮಾಡಿದರು. ಇಲ್ಲಿನ ಮತಗಟ್ಟೆ ಸಂಖ್ಯೆ 36ರಲ್ಲಿ 1,182 ಮತದಾರರ ಪೈಕಿ ಬೆಳಿಗ್ಗೆ 9 ಗಂಟೆಯ ವೇಳೇಗೆ 204 ಹಾಗೂ ಮತಗಟ್ಟೆ ಸಂಖ್ಯೆ 37ರಲ್ಲಿ 700 ಮತದಾರರ ಪೈಕಿ 120 ಜನ ಮತ ಹಕ್ಕು ಚಲಾಯಿಸಿದ್ದರು. ಸುಮಾರು 150 ಮಹಿಳೆಯರು ಹಾಗೂ ಪುರುಷರು ಪ್ರತ್ಯೇಕವಾಗಿ ಸರತಿ ಸಾಲಿನಲ್ಲಿ ನಿಂತಿದ್ದರು.

ಭಾಲ್ಕಿ ತಾಲ್ಲೂಕಿನ ಚಂದಾಪುರದ ಮತಗಟ್ಟೆ ಸಂಖ್ಯೆ 139ರಲ್ಲಿ ಒಂಬತ್ತು ಗಂಟೆಯ ವರೆಗೆ 921 ಮತದಾರರ ಪೈಕಿ 75 ಜನ ಮಾತ್ರ ಮತ ಹಾಕಿದ್ದರು. ಕೆರೂರ ಗ್ರಾಮದ ಮತಗಟ್ಟೆ ಸಂಖ್ಯೆ  135ರಲ್ಲಿ 9 ಗಂಟೆಯ ವೇಳೆಗೆ 1,209 ಮತದಾರರಲ್ಲಿ 161 ಹಾಗೂ 11 ಗಂಟೆಯ ವೇಳೆಗೆ 322 ಜನ ಮತದಾರರು ಮತದಾನ ಮಾಡಿದರು.

ಚಂದಾಪುರ ಗ್ರಾಮ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದೆ. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತ ಬಂದಿದ್ದೇವೆ. ನಮ್ಮ ಗೋಳು ಕೇಳುವವರು ಇಲ್ಲವಾಗಿದ್ದಾರೆ. ಅನ್ಯ ಮಾರ್ಗವಿಲ್ಲದೆ ಮತದಾನದಲ್ಲಿ ಪಾಲ್ಗೊಂಡಿದ್ದೇವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಬೀದರ್‌ ತಾಲ್ಲೂಕಿನ ಅಲಿಯಂಬರ್‌ದಲ್ಲಿ ವೃದ್ಧರೊಬ್ಬರು ಮೊಮ್ಮಗನ ಸಹಾಯದಿಂದ ಮತಗಟ್ಟೆಗೆ ಬಂದರೆ, ಔರಾದ್‌ ತಾಲ್ಲೂಕಿನ ಕೌಠಾ ಗ್ರಾಮದಲ್ಲಿ ವೃದ್ಧೆ ಚಂದ್ರಮ್ಮ ಅವರು ಪುತ್ರನ ಸಹಾಯದಿಂದ ಮತಗಟ್ಟೆಗೆ ಬಂದು ಮತ ಹಕ್ಕು ಚಲಾಯಿಸಿದರು. ಅಲಿಯಂಬರ್‌ದ ಮತಗಟ್ಟೆಯಲ್ಲಿ ಬೆಳಿಗ್ಗೆ 9 ಗಂಟೆಯ ವರೆಗೆ 137 ಜನ ಮಾತ್ರ ಮತ ಚಲಾಯಿಸಿದ್ದರು. ಇಲ್ಲಿ ಮತದಾರರಲ್ಲಿ ಉತ್ಸಾಹ ಕಂಡು ಬರಲಿಲ್ಲ.

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯಲ್ಲಿ ಪಿಕೆಪಿಎಸ್‌ ಕಟ್ಟಡ ಹಾಗೂ ಗೋದಾಮಿನಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಗಾಳಿ ಇಲ್ಲದ ಕಾರಣ ಚುನಾವಣಾ ಸಿಬ್ಬಂದಿ ಬೆವತು ಹೋಗಿದ್ದರು. ಮತದಾರರಿಗೂ ಸ್ಥಳ ಅನುಕೂಲಕರವಾಗಿರಲ್ಲಿಲ್ಲ.
ಚಳಕಾಪುರದ ಪಂಚಾಯಿತಿ ಕಟ್ಟಡದಲ್ಲಿ ಅಂಗವಿಕಲ ಮಹಿಳೆ ವಿಮಲಾ ಕೇಶವ ತ್ರಿಚಕ್ರ ವಾಹನದಲ್ಲಿ ಬಂದು ವೀಲ್‌ಚೇರ್‌ನಲ್ಲಿ ಮತಗಟ್ಟೆಯೊಳಗೆ ಹೋಗಿ ಮತ ಹಕ್ಕು ಚಲಾಯಿಸಿದರು.

ಮತ ಚಲಾಯಿಸಿದ ವಲಸಿಗರು

ಬೀದರ್: ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿಯೇ ನೆಲೆಸಿರುವ ಜಿಲ್ಲೆಯ ಅನೇಕ ಮತದಾರರು ಶನಿವಾರ ಊರಿಗೆ ಬಂದು ಮತ ಚಲಾಯಿಸಿದರು.

ಬೆಂಗಳೂರು, ತೆಲಂಗಾಣದ ಹೈದರಾಬಾದ್, ಮಹಾರಾಷ್ಟ್ರದ ಮುಂಬೈ, ಪುಣೆ ಮೊದಲಾದ ಪಟ್ಟಣಗಳಿಂದ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು.

ಈ ಬಾರಿಯ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದರಿಂದ ರಾಜಕೀಯ ಪಕ್ಷಗಳು ಒಂದೊಂದು ಮತವೂ ನಿರ್ಣಾಯಕ ಆಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಇವೆ. ಇದೇ ಕಾರಣಕ್ಕಾಗಿ ಪ್ರಮುಖ ರಾಜಕೀಯ ಪಕ್ಷಗಳ ಅನೇಕ ಅಭ್ಯರ್ಥಿಗಳು ಉದ್ಯೋಗ, ವ್ಯಾಪಾರ ಕಾರಣಕ್ಕಾಗಿ ಕ್ಷೇತ್ರದ ಹೊರಗೆ ನೆಲೆಸಿರುವ ಮತದಾರರ ಮೇಲೂ ಕಣ್ಣಿಟ್ಟಿದ್ದರು. ಸ್ನೇಹಿತರು, ಸಂಬಂಧಿಕರ ಮೂಲಕ ಅವರನ್ನು ಸಂಪರ್ಕಿಸಿದ್ದರು. ಕೆಲವರಿಗೆ ಅಭ್ಯರ್ಥಿಗಳು ಹೋಗಿ ಬರುವ ವ್ಯವಸ್ಥೆ ಮಾಡಿದ್ದರು. ಇನ್ನು ಕೆಲವರು ಸ್ವಂತ ಖರ್ಚಿನಲ್ಲಿ ಊರಿಗೆ ಬಂದು ಮತದ ಹಕ್ಕು ಚಲಾಯಿಸಿದರು ಎಂದು ಹೆಸರು ಹೇಳಲಿಚ್ಛಿಸದ ರಾಜಕೀಯ ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದರು.

ಮುಚ್ಚಿದ ಅಂಗಡಿ ಮುಂಗಟ್ಟುಗಳು

ಬೀದರ್: ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ನಗರದಲ್ಲಿ ಶನಿವಾರ ಅರ್ಧದಷ್ಟು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ತೆರೆದಿದ್ದ ಅಂಗಡಿಗಳಲ್ಲಿಯೂ ಹೆಚ್ಚಿನ ವ್ಯಾಪಾರ ಇರಲಿಲ್ಲ.

‘ಚುನಾವಣೆ ಪ್ರಯುಕ್ತ ಕೆಲ ಅಂಗಡಿಗಳ ಮಾಲೀಕರು ಕೆಲಸಗಾರರಿಗೆ ರಜೆ ನೀಡಿದ್ದರು. ಸ್ವತಃ ತಾವೂ ಅಂಗಡಿ ಬಂದ್ ಮಾಡಿಕೊಂಡು ಮತ ಚಲಾಯಿಸಲು ಹೋಗಿದ್ದರು. ಹೀಗಾಗಿ ಅಂಗಡಿ ಬಂದ್ ಇದ್ದವು’ ಎಂದು ಅಂಗಡಿ ಮಾಲೀಕರೊಬ್ಬರು ತಿಳಿಸಿದರು.

ಕೆಲ ಖಾನಾವಳಿ, ಹೋಟೆಲ್, ಸಣ್ಣಪುಟ್ಟ ಚಹಾ ಅಂಗಡಿಗಳು ಮುಚ್ಚಿದ್ದರಿಂದ ವಿವಿಧೆಡೆಯಿಂದ ಬಂದವರು ಚಹಾ, ಉಪಾಹಾರ, ಊಟಕ್ಕೆ ತೊಂದರೆ ಅನುಭವಿಸಿದರು.

‘ಮತದಾನದ ಬಗೆಗೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರಿಂದ ಅಂಗಡಿಗಳಲ್ಲಿ ಕೆಲಸ ಮಾಡುವ ಅನೇಕ ಕಾರ್ಮಿಕರು ಮತ ಚಲಾಯಿಸಲು ರಜೆ ಪಡೆದಿದ್ದರು’ ಎಂದು ಮತದಾರ ಬಸವರಾಜ ಹೇಳಿದರು.

**
ಬೀದರ್‌ ಜಿಲ್ಲೆಯ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಪರಿಶೀಲನೆ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ಕಂಡು ಬಂದಿಲ್ಲ
– ಅನಿರುದ್ಧ ಶ್ರವಣ್, ಜಿಲ್ಲಾ ಚುನಾವಣಾ ಅಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT