ಅಹಮದಾಬಾದ್ ವಿ.ವಿ.ಯಲ್ಲಿ ಪಾಠ ಮಾಡಲ್ಲ ಎಂದರು ಇತಿಹಾಸಕಾರ ರಾಮಚಂದ್ರ ಗುಹಾ

7

ಅಹಮದಾಬಾದ್ ವಿ.ವಿ.ಯಲ್ಲಿ ಪಾಠ ಮಾಡಲ್ಲ ಎಂದರು ಇತಿಹಾಸಕಾರ ರಾಮಚಂದ್ರ ಗುಹಾ

Published:
Updated:

ಬೆಂಗಳೂರು: ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ವಿದ್ಯಾರ್ಥಿ ಸಂಘಟನೆ ‘ಅಖಿಲ ಭಾರತ ವಿದ್ಯಾರ್ಥಿ ಪರಿಷತ್’ (ಎಬಿವಿಪಿ) ತನ್ನನ್ನು ದೇಶದ್ರೋಹಿ ಎಂದು ಆರೋಪಿಸಿದ ನಂತರ ಇತಿಹಾಸಕಾರ ರಾಮಚಂದ್ರ ಗುಹಾ ಗುಜರಾತ್‌ನ ಅಹಮದಾಬಾದ್ ವಿವಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಗುಹಾ, ‘ನನ್ನ ನಿಯಂತ್ರಣದಲ್ಲಿ ಇಲ್ಲದ ಕಾರಣಗಳಿಂದ ನಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.

ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಸೇರಿದಂತೆ ಹಲವರು ಗುಹಾರ ಅವರ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಗಾಂಧಿಯ ಕುರಿತು ಪುಸ್ತಕ ಬರೆದ ವಿದ್ವಾಂಸನೊಬ್ಬ, ಗಾಂಧಿಯ ನೆಲದಲ್ಲಿ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಪಾಠ ಮಾಡದ ಸನ್ನಿವೇಶ ಸೃಷ್ಟಿಯಾಗಿರುವುದು ವಿಪರ್ಯಾಸ’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಅ.16ರಂದು ಅಹಮದಾಬಾದ್ ವಿವಿಯು ಗುಹಾ ಅವರನ್ನು ಮಾನವೀಯ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಮತ್ತು ಗಾಂಧಿ ಚಳಿಗಾಲದ ಶಾಲೆಯ ನಿರ್ದೇಶಕ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿತ್ತು. ಅ.19ರಂದು ಎಬಿವಿಪಿ ಕಾರ್ಯಕರ್ತರು ಈ ನೇಮಕಾತಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

ಈ ಕುರಿತು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ದಿನಪತ್ರಿಕೆಗೆ ಪ್ರತಿಕ್ರಿಯಿಸಿದ ಎಬಿವಿಪಿ ಅಹಮದಾಬಾದ್ ನಗರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ದೇಸಾಯಿ, ‘ಗುಹಾ ನೇಮಕ ವಿರೋಧಿಸಿ ನಾವು ವಿವಿ ಕುಲಸಚಿವರಿಗೆ ಪತ್ರ ಬರೆದಿದ್ದೆವು. ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಬುದ್ಧಿಜೀವಿಗಳು ಬರಬೇಕು, ನಗರ ನಕ್ಸಲ್ ಎಂದು ಕರೆಸಿಕೊಳ್ಳುವ ದೇಶದ್ರೋಹಿಗಳಲ್ಲ. ಇಂಥವರು ವಿಶ್ವವಿದ್ಯಾಲಯಕ್ಕೆ ಬಂದರೆ ಗುಜರಾತ್‌ನಲ್ಲಿಯೂ ರಾಷ್ಟ್ರವಿರೋಧಿ ಭಾವನೆಗಳು ಪ್ರಬಲವಾಗುತ್ತವೆ’ ಎಂದು ಕುಲಸಚಿವರಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದೆವು ಎಂದು ಹೇಳಿದ್ದಾರೆ.

ತಮ್ಮ ನಿರ್ಧಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಗುಹಾ, ‘ನನ್ನ ನಿಯಂತ್ರಣದಲ್ಲಿ ಇಲ್ಲದ ಪರಿಸ್ಥಿತಿಯ ಕಾರಣದಿಂದ ನಾನು ಅಹಮದಾಬಾದ್ ವಿ.ವಿ.ಗೆ ಸೇರಬಾರದು ಎಂದು ನಿರ್ಧರಿಸಿದ್ದೇವೆ. ಅಹಮದಾಬಾದ್ ವಿವಿಗೆ ಶುಭ ಹಾರೈಸುತ್ತೇನೆ. ಅತ್ಯುತ್ತಮ ಬೋಧಕ ಸಿಬ್ಬಂದಿ ಮತ್ತು ಕುಲಪತಿ ಇಲ್ಲಿದ್ದಾರೆ. ಗಾಂಧಿಯ ವಿಚಾರಗಳಿಗೆ ಒಂದಲ್ಲ ಒಂದು ದಿನ ಮತ್ತೆ ಜೀವ ಬರಲಿ’ ಎಂದು ಟ್ವಿಟ್ ಮಾಡಿದ್ದಾರೆ.

ವಿವಾದ ಕುರಿತು ಪ್ರತಿಕ್ರಿಯಿಸಿರುವ ಅಹಮದಾಬಾದ್‌ ವಿವಿಯ ಕುಲಸಚಿವ ಬಿ.ಎಂ.ಶಾ, ‘ವಿಶ್ವವಿದ್ಯಾಲಯವು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನಗೂ ಈ ವಿಷಯ ಟ್ವಿಟ್ ನೋಡಿದಾಗಿ ತಿಳಿಯಿತು. ಕುಲಪತಿ ಪ್ರಸ್ತುತ ದೇಶದಿಂದ ಹೊರಗಿದ್ದಾರೆ. ಮುಂದಿನ ಕ್ರಮಗಳ ಬಗ್ಗೆ ವಿವಿ ಆಲೋಚಿಸಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !