ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರೋಧಿ ಹೋರಾಟದ ಹೆಜ್ಜೆ ಗುರುತುಗಳು...

Last Updated 14 ಸೆಪ್ಟೆಂಬರ್ 2019, 2:20 IST
ಅಕ್ಷರ ಗಾತ್ರ

ಈಚಿನ ದಿನಗಳಲ್ಲಿ ಹಿಂದಿ ಭಾಷೆಯನ್ನು ಅನಿವಾರ್ಯ ಎಂಬಂತೆ ಬಿಂಬಿಸಿಇತರ ರಾಜ್ಯಗಳ ಮೇಲೆ ಹೇರಲಾಗುತ್ತಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಸೆ.14 ಹಿಂದಿ ದಿವಸ್. ಈ ಹಿನ್ನೆಲೆಯಲ್ಲಿಕರ್ನಾಟಕದಲ್ಲಿ ಹಿಂದಿ ವಿರೋಧಿ ಹೋರಾಟಹೆಜ್ಜೆ ಗುರುತುಗಳ ಪಕ್ಷಿನೋಟ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

---

ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಗೌರವಿಸಬೇಕೆ? ಒಂದು ಕಲಿಕಾ ಭಾಷೆಯಾಗಿ ಸ್ವೀಕರಿಸಬೇಕೆ? ತ್ರಿಭಾಷಾ ಸೂತ್ರದ ಅಡಿ ಕಲಿಯಬೇಕೆ ಎನ್ನುವ ಚರ್ಚೆಗಳು ದಶಕಗಳಿಂದಲೂ ನಡೆಯುತ್ತಲೇ ಇವೆ. ರಾಜ್ಯದಲ್ಲಿ ಹಿಂದಿ ವಿರೋಧಿ ಹೋರಾಟ ಕಾವು ಪಡೆದುಕೊಳ್ಳುವುದಕ್ಕೂ ಮೊದಲು ದಕ್ಷಿಣ ಭಾರತದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿನ ಹೋರಾಟ ಗಮನ ಸೆಳೆಯುತ್ತವೆ. ಇದರ ಕಿಡಿ ರಾಜ್ಯದ ರಾಜಧಾನಿ ಬೆಂಗಳೂರಿಗೆ ತಟ್ಟಿತು.

ಹಿಂದಿ ಭಾಷೆ ಹೇರಿಕೆಯ ಪ್ರಯತ್ನಗಳುದೇಶ ಸ್ವಾತಂತ್ರ್ಯ ಗಳಿಸುವುದಕ್ಕೂ ಮೊದಲಿನಿಂದಲೇ ಆರಂಭವಾಯಿತು.ಹಿಂದಿ ಹೇರಿಕೆಯ ವಿರುದ್ಧ ಬ್ರಿಟಿಷ್‌ ಆಡಳಿತ ಕಾಲದಲ್ಲಿ ಮದ್ರಾಸ್‌ ಪ್ರಾಂತ್ಯವು ಏಕಾಂಗಿ ಹೋರಾಟವನ್ನು ಪ್ರಾರಂಭಿಸಿತು. ಅಂದು ನಡೆದ ಜೀವನ್ಮರಣ ಹೋರಾಟದಲ್ಲಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲ ಪ್ರದೇಶಗಳೂ ಭಾಗಿಯಾಗಿದ್ದವು.

ದೇಶದ ಎಲ್ಲಾ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಕಲಿಸಬೇಕು ಎಂದು 1938ರಲ್ಲಿ ಆದೇಶ ಮಾಡಲಾಯಿತು. ಈ ಹೇರಿಕೆಯನ್ನು ವಿರೋಧಿಸಿ ‘ಹಿಂದಿ ಹೇರಿಕೆ ವಿರೋಧಿ ಆಂದೋಲನ’ ಆರಂಭವಾಯಿತು. ಸಾವಿರಾರು ಜನರು ಪ್ರತಿಭಟನೆಗಿಳಿದರು.

ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದವರಲ್ಲಿ ಪ್ರಮುಖರು ಪರಿಯಾರ್ ಇ.ವಿ.ರಾಮಸ್ವಾಮಿ ನಾಯ್ಕರ್‌, ಮರೈಮಲೈ ಅಡಿಗಳರ್‌ ಎಂಬ ಶೈವ ವಿದ್ವಾಂಸ ಹಾಗೂ ಸಿ.ಎನ್‌.ಅಣ್ಣಾದುರೈ. ಹಿಂದಿ ವಿರೋಧಿ ಹೋರಾಟದ ಸಮ್ಮೇಳನ, ಮಹಿಳಾ ಸಮ್ಮೇಳನಗಳು ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಉದಯವಾಗಿ ದೊಡ್ಡಪಕ್ಷವಾಗಿ ಹೊರಹೊಮ್ಮಲು ವೇದಿಕೆಯೂ ಆಯಿತು. ಈ ಹೋರಾಟದ ನಡುವೆಯೂ ಹಿಂದಿ ಹೇರಿಕೆ ಯತ್ನ ಮುಂದುವರೆಯುತ್ತಲೇ ಇತ್ತು.

'ಬಹುಜನರು ಮಾತನಾಡುತ್ತಾರೆ ಎಂದು ಒಂದು ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರಬಾರದು. ಅದಕ್ಕೆ ಅವಕಾಶ ಕೊಟ್ಟರೆ ಹಿಂದಿ ಬಲ್ಲವರು ನಮ್ಮನ್ನು ಆಳುತ್ತಾರೆ. ಆಗ ನಾವು ಮೂರನೇ ಸ್ಥಾನಕ್ಕೆ ಹೋಗುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಇವೆ ಎನ್ನುವ ಕಾರಣಕ್ಕೆ ಕಾಗೆಯನ್ನು ರಾಷ್ಟ್ರೀಯ ಪಕ್ಷಿ ಎಂದು ಹೇಳಲು ಸಾಧ್ಯವೇ?'ಎಂದುಅಣ್ಣಾದುರೈ ಗುಡುಗಿದ್ದರು.

‘ಹಿಂದಿ, ಕನ್ನಡವನ್ನು ಕೊಲ್ಲುತ್ತದೆ, ಅದು ನಮಗೆ ಬೇಡ’

ಹಿಂದಿ ಹೇರಿಕೆ ವಿರುದ್ಧದ ಹೋರಾಟ, ದಕ್ಷಿಣ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರಿತು. ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ ಕುವೆಂಪು ಅವರು, ‘ಹಿಂದಿ, ಕನ್ನಡವನ್ನು ಕೊಲ್ಲುತ್ತದೆ, ಅದು ನಮಗೆ ಬೇಡ’ ಎಂದು ಸ್ಪಷ್ಟವಾಗಿ ಹೇಳಿದರು. ‘ಭಾರತ ಜನನಿಯ ತನುಜಾತೆ' ಎಂದು ರಾಷ್ಟ್ರಕವಿ ಕುವೆಂಪು ಕನ್ನಡ ತಾಯಿಯನ್ನು ಬಣ್ಣಿಸಿದರು.ಭಾರತದ ಬಹುತ್ವಕ್ಕೆ ಕರ್ನಾಟಕದ ಕೊಡುಗೆ ದೊಡ್ಡದು ಎಂದು ಪ್ರತಿಪಾದಿಸಿದ ಕುವೆಂಪು ಅವರು ಕನ್ನಡತನಕ್ಕೆ ಹೊಸ ವ್ಯಾಖ್ಯಾನ ನೀಡಿದರು.ಕುವೆಂಪು ಅವರ ಜತೆ ಕನ್ನಡ ಚಳವಳಿಗಾರರೂ ಧ್ವನಿಗೂಡಿಸಿದರು. ಆದರೆ, ಈ ಕೂಗು ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಾಯಿತು. ಮರಾಠಿ ಮತ್ತು ಉರ್ದು ಭಾಷೆಗಳ ಗಾಢ ಪ್ರಭಾವಕ್ಕೆ ಒಳಗಾಗಿದ್ದ ಮುಂಬೈ ಹಾಗೂ ಹೈದರಾಬಾದ್‌ ಕರ್ನಾಟಕದಲ್ಲಿ ಹಿಂದಿ ಭಾಷೆ ಬಳಕೆಗೆ ಇದೇ ಭರದಲ್ಲಿ ವಿರೋಧ ಹುಟ್ಟಲಿಲ್ಲ.

‘ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ,ಬಾಲಕರ ರಕ್ಷಿಸೈ ಹೇ ತ್ರಿಣೇತ್ರ,ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ,ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣ ಶೂಲ’ ಎಂದು ಕುವೆಂಪು ಅವರುಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸುವ ಪ್ರಸ್ತಾವವನ್ನು ಸ್ಪಷ್ಟವಾಗಿ ವಿರೋಧಿಸಿದ್ದರು.

2017ರ ಜುಲೈ: ಮಟ್ರೊದಲ್ಲಿ ಹಿಂದಿ ಬಳಕೆಗೆ ವಿರೋಧ

ಮೆಟ್ರೊ ರೈಲಿನ ಉದ್ಘೋಷಣೆ ಮತ್ತು ನಿಲ್ದಾಣಗಳ ಹೆಸರಿನಫಲಕಗಳಿಗೆ ಹಿಂದಿ ಬಳಕೆಕೈಬಿಡುವಂತೆ ಆರಂಭವಾದ ಪ್ರತಿಭಟನೆ ಕ್ರಮೇಣ ತೀಕ್ಷ್ಣವಾಯಿತು.ಮೆಟ್ರೊ ನಿಲ್ದಾಣಗಳ ನಾಮಫಲಕ ಹಾಗೂ ಸೂಚನಾ ಫಲಕಗಳ ಹಿಂದಿ ಅಕ್ಷರಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಮಸಿ ಬಳಿದರು.ಅವರ ವಿರುದ್ಧ ಪ್ರಕರಣ ದಾಖಲಾದಾಗ ಇದು ರಾಜ್ಯವ್ಯಾಪಿ ಸುದ್ದಿಯಾಯಿತು.

'ರಾಜ್ಯದ ಮೇಲೆ ಹಿಂದಿ ಹೇರಿಕೆ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಹಿಂದಿ ವಿರೋಧಿ ಜನಾಂದೋಲನ ಹತ್ತಿಕ್ಕುವ ಉದ್ದೇಶದಿಂದ ಕಾರ್ಯಕರ್ತರ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಅಹಿಂಸಾತ್ಮಕ ಮಾರ್ಗದಲ್ಲಿ ಸಾಗುತ್ತಿರುವ ಹೋರಾಟದ ದಿಕ್ಕು ತಪ್ಪಿಸಲು ಅಧಿಕಾರಿಗಳೇ ಇಂಥ ವರ್ತನೆ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ' ಎಂದು ಸಾಹಿತಿಚಂದ್ರಶೇಖರ ಪಾಟೀಲ ಗುಡುಗಿದ್ದರು.

‘ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಹೇರಿಕೆ ಸಂಬಂಧ ಉಂಟಾಗಿರುವ ಗೊಂದಲಕ್ಕೆ ಸರ್ಕಾರದ ದ್ವಂದ್ವ ನೀತಿಯೇ ಕಾರಣ.ಕರವೇ ಕಾರ್ಯಕರ್ತರು ಮಸಿ ಬಳಿದಿದ್ದು ಕಾನೂನಿನ ಉಲ್ಲಂಘನೆ. ಅದನ್ನು ಒಪ್ಪುತ್ತೇವೆ. ಕೋಮುಗಲಭೆ ಪ್ರಕರಣ ದಾಖಲಿಸಿರುವುದು ಒಪ್ಪುವ ಮಾತಲ್ಲ' ಎಂದು ರಂಗಕರ್ಮಿಪ್ರಕಾಶ್ ಬೆಳವಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರದ ಪ್ರಸ್ತಾವ: ಗುಡುಗಿದ ದಕ್ಷಿಣ ಭಾರತ

ಕೇಂದ್ರ ಸರ್ಕಾರರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿತ್ತು.‘ಮಾನವ ಸಂಪನ್ಮೂಲ ಸಚಿವಾಲಯ(ಎಚ್‌ಆರ್‌ಡಿ @HRDMinistry) ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ತ್ರಿ ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು' ಎಂದು ಆಗ ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ಕುಮಾರಸ್ವಾಮಿ #HindiImposition ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿದ್ದರು.

ತ್ರಿಭಾಷಾ ಸೂತ್ರದ ಭಾಗವಾಗಿ ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡು ರಾಜಕಾರಣಿಗಳು ಭಾರಿ ಅಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರದ ಪರವಾಗಿಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವ ಜೈಶಂಕರ್‌, 'ರಾಜ್ಯಗಳ ಮೇಲೆ ಯಾವುದೇ ಭಾಷೆಯನ್ನು ಹೇರುವ ಉದ್ದೇಶವೇ ಇಲ್ಲ' ಎಂದು ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿದ್ದರು.

ಮಾನವ ಸಂಪನ್ಮೂಲ ಸಚಿವಾಲಯದ (ಎಚ್‌ಆರ್‌ಡಿ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ದಕ್ಷಿಣ ರಾಜ್ಯಗಳ ಪ್ರತಿರೋಧದ ಬಳಿಕ ಪರಿಷ್ಕರಿಸಲಾಯಿತು. ತ್ರಿಭಾಷಾ ಸೂತ್ರವನ್ನು ಅದರ ಸಂಪೂರ್ಣ ಅರ್ಥದಲ್ಲಿ ದೇಶದಾದ್ಯಂತ ಜಾರಿಗೊಳಿಸಬೇಕಾಗಿದೆ. ಬಹುಭಾಷೆಗಳ ದೇಶದಲ್ಲಿ ಜನರ ಬಹುಭಾಷಿಕ ಸಂವಹನ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ ಎಂದಷ್ಟೇ ನೀತಿಯಲ್ಲಿ ಹೇಳಲಾಗಿದೆ. ಹಿಂದಿಯನ್ನೇ ಕಲಿಯಬೇಕು ಎಂಬ ಅಂಶವನ್ನು ಈಗ ಕೈಬಿಡಲಾಗಿದೆ.

ಇದು ಹಿಂದಿ ಹೇರಿಕೆ ವಿರುದ್ಧ ಕರ್ನಾಟಕ ದಾಖಲಿಸಿದ ತೀರಾ ಇತ್ತೀಚಿನ ಪ್ರತಿಭಟನೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT