ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರಲ್ಲಿ ಡಿಜಿಟಲ್‌ ಜನಗಣತಿ, ವಿವಿಧ ಉದ್ದೇಶಗಳಿಗೆ ಒಂದೇ ಕಾರ್ಡ್‌: ಅಮಿತ್‌ ಶಾ

Last Updated 23 ಸೆಪ್ಟೆಂಬರ್ 2019, 10:39 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಇತಿಹಾಸದಲ್ಲೇ ಮೊದಲ ಡಿಜಿಟಲ್‌ ಜನಗಣತಿ ನಡೆಯಲಿದೆ. 2021ರ ಗಣತಿ ಕಾರ್ಯವು ಸಂಪೂರ್ಣ ಡಿಜಿಟಲೀಕರಣವಾಗಿರಲಿದೆಎಂದು ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ನವದೆಹಲಿಯಲ್ಲಿ ಹೇಳಿದ್ದಾರೆ.

ಜನಗಣತಿ ಪ್ರಾಧಿಕಾರದ ‘ಜನಗಣನಾ ಭವನ’ಕ್ಕೆ ಅಮಿತ್‌ ಶಾ ಅವರು ಭಾನುವಾರ ಅಡಿಗಲ್ಲು ಹಾಕಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್‌ ಶಾ, ‘2021ರಲ್ಲಿ ಡಿಜಿಟಲ್‌ ಜನಗಣತಿ ನಡೆಯಲಿದೆ. ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಗಣತಿ ಕಾರ್ಯವು ಕಾಗದದಿಂದ ತಂತ್ರಜ್ಞಾನಕ್ಕೆ ಸ್ಥಿತ್ಯಂತರಗೊಳ್ಳಲಿದೆ,’ ಎಂದು ಅವರು ಹೇಳಿದರು.

ದೇಶದ ಎಲ್ಲ ಬಗೆಯ ಕಾರ್ಡ್‌ಗಳನ್ನೂ (ಆಧಾರ್‌, ಪಾಸ್‌ಪೋರ್ಟ್‌, ಬ್ಯಾಂಕ್‌ ಖಾತೆ, ವಾಹನ ಚಾಲನಾ ಪರವಾನಗಿ) ಒಳಗೊಂಡ ಒಂದೇ ಕಾರ್ಡ್‌ ಅನ್ನು ಪರಿಚಯಿಸುವ ಆಲೋಚನೆಯೂಇದೆ. ಇದನ್ನು ಏಕೆ ಮಾಡಬಾರದು ಎಂದೂ ಅವರು ಪ್ರಶ್ನಿಸಿದ್ದಾರೆ.

‘ಗಣತಿ ಕಾರ್ಯಕ್ಕಾಗಿ ದೇಶಿಯವಾಗಿ ಆ್ಯಪ್‌ ಸಿದ್ಧಪಡಿಸಲಾಗುತ್ತಿದ್ದು ಅದನ್ನು ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಅನುಸ್ಥಾಪನೆ ಮಾಡಬಹುದು. ಈ ಬಾರಿಯ ಗಣತಿ ಕಾರ್ಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯೂ ನಡೆಯಲಿದೆ. ಇದು ದೇಶದಲ್ಲಿ ಮಹತ್ವದ ಬೆಳವಣಿಗೆಯಾಗಿರಲಿದೆ. ಡಿಜಿಟಲ್‌ ಜನಗಣತಿಯಿಂದಾಗಿ ಬಹಳಷ್ಟು ಅನುಕೂಲಗಳಿವೆ. ಮಗುವೊಂದು ಹುಟ್ಟಿದ 18ನೇ ವರ್ಷಕ್ಕೆ ಯಾವ ನೋಂದಣಿ ಇಲ್ಲದೆ, ಮತದಾರರ ಗುರುತಿನ ಚೀಟಿಯನ್ನೂ ಪಡೆಯದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು,’ ಎಂದು ಅವರು ಇದೇ ವೇಳೆ ಹೇಳಿದರು.

ವಿದ್ಯುತ್‌, ಅನಿಲ ಪೂರೈಕೆ, ರಸ್ತೆ ನಿರ್ಮಾಣ, ವಸತಿ, ಶೌಚಾಲಯ, ಬ್ಯಾಂಕಿಂಗ್‌ಗೆ ಸಂಬಂಧಿಸಿದ 22 ಪ್ರಮುಖ ಕಾರ್ಯಕ್ರಮಗಳನ್ನು ಜನಗಣತಿಯ ಆಧಾರದಲ್ಲಿ ಕೇಂದ್ರ ಸರ್ಕಾರ ರೂಪಿಸಲಿದೆ ಎಂದು ಗೃಹ ಸಚಿವ ಶಾ ತಿಳಿಸಿದ್ದಾರೆ.

2021ರಲ್ಲಿ ನಡೆಯುತ್ತಿರುವ ದೇಶದ 16ನೇ, ಸ್ವಾತಂತ್ರ್ಯ ನಂತರದ 8ನೇ ಜನಗಣತಿ ಇದಾಗಿದ್ದು₹12 ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ. 33 ಲಕ್ಷ ಮಂದಿ ಈ ಗಣತಿ ಕಾರ್ಯ ನಿರ್ವಹಿಸಲಿದ್ದಾರೆ. ಗಣತಿ ಕಾರ್ಯವು ದೇಶಾದ್ಯಂತ ಎರಡು ಹಂತಗಳಲ್ಲಿ ನಡೆಯಲಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡವೂ ಸೇರಿ ಹಿಮಮಳೆ ಸುರಿಯುವ ಪ್ರದೇಶಗಳಲ್ಲಿ 2020ರ ಅಕ್ಟೋಬರ್‌ 1ರಿಂದ ಮತ್ತು 2021ರ ಮಾರ್ಚ್‌ 1ರಿಂದ ದೇಶಾದ್ಯಂತ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಪ್ರಸ್ತಾವಿತ ದಿನಾಂಕವನ್ನು ಬಿಡುಗಡೆ ಮಾಡಿತ್ತು.

ಭಾರತದಲ್ಲಿ ಈ ಹಿಂದೆ 2011ರಲ್ಲಿ ಜನಗಣತಿ ನಡೆದಿತ್ತು. ಆಗ ದೇಶದ ಜನಸಂಖ್ಯೆ 121 ಕೋಟಿಗಳಿದ್ದವು. ಮುಂದಿನ ಜನಗಣತಿ 2021ರಲ್ಲಿ ನಡೆಯಲಿದೆ. ಭಾರತದ ಜನಗಣತಿ ಪ್ರಕ್ರಿಯೆಯು ಜಗತ್ತಿನಲ್ಲೇ ಬಹುದೊಡ್ಡ ಗಣತಿ ಕಾರ್ಯ ಎನಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT