ಭಾನುವಾರ, ನವೆಂಬರ್ 17, 2019
25 °C

ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ನಡೆಸಲು ಕೇಂದ್ರ ಸರ್ಕಾರ ಚಿಂತನೆ

Published:
Updated:

ನವದೆಹಲಿ: ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನಡೆಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಅಸ್ಸಾಂನಲ್ಲಿ 2015ರಿಂದ ಎನ್‌ಆರ್‌ಸಿ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದ ತಕ್ಷಣ ಆ ರಾಜ್ಯದಿಂದ ದೊಡ್ಡ ಸಂಖ್ಯೆಯಲ್ಲಿ ಜನರು ದೇಶದ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದಾರೆ ಎಂದು ಗುಪ್ತದಳ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಎನ್‌ಆರ್‌ಸಿ ನಡೆಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.

ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ನಡೆಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ. ಇನ್ನಷ್ಟೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

ಅಧಿಕೃತ ಮತದಾರರ ಚೀಟಿ ಮತ್ತು ಇನ್ನಿತರ ಗುರುತು ಚೀಟಿ ದಾಖಲೆಗಳನ್ನು ಹೊಂದಿದವರೂ ರಾಷ್ಟ್ರೀಯ ಪೌರತ್ವ ಸಾಬೀತುಪಡಿಸಲು ಪೂರಕ ದಾಖಲೆ ಒದಗಿಸಲು ಸಾಧ್ಯವಾಗದೆ ಅಸ್ಸಾಂನಿಂದ ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಮಿಕರಾಗಿ ವಲಸೆ ಹೋಗಿರುವುದಾಗಿ ಗುಪ್ತ ದಳ ಮಾಹಿತಿ ನೀಡಿದೆ.

ಅಸ್ಸಾಂನಲ್ಲಿ ಎನ್‌ಆರ್‌ಸಿಗೆ ಎದುರಾದಂತೆ ಸಂಕೀರ್ಣ ಮತ್ತು ಸವಾಲುಗಳು ಉಳಿದ ರಾಜ್ಯಗಳಲ್ಲಿ ಎದುರಾಗುವುದಿಲ್ಲ. ಸರ್ಕಾರ ಹೆಚ್ಚು ತೊಂದರೆ ಇಲ್ಲದೆ ಈ ಪ್ರಕ್ರಿಯೆ ನಡೆಸಬಹುದು ಎಂದು ಭದ್ರತಾ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

 

ಪ್ರತಿಕ್ರಿಯಿಸಿ (+)