ಗುರುವಾರ , ಏಪ್ರಿಲ್ 15, 2021
24 °C
5000 ಪೊಲೀಸ್‌ ಠಾಣೆಗಳಿಗೆ ವಿತರಣೆ: ಡಬ್ಲ್ಯುಸಿಡಿ

ತ್ವರಿತ ಕ್ರಮಕ್ಕೆ ‘ಅತ್ಯಾಚಾರ ತನಿಖಾ ಕಿಟ್‌’

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ಅತ್ಯಾಚಾರ ಪ್ರಕರಣಗಳ ತನಿಖೆ ತ್ವರಿತಗೊಳಿಸಲು ನೆರವಾಗುವ ಉದ್ದೇಶದಿಂದ ದೇಶದಾದ್ಯಂತ 5000 ಪೊಲೀಸ್ ಠಾಣೆಗಳಿಗೆ ‘ಅತ್ಯಾಚಾರ ತನಿಖಾ ಕಿಟ್’ಗಳನ್ನು ವಿತರಿಸಲಾಗುತ್ತದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ (ಡಬ್ಲ್ಯುಸಿಡಿ) ಅಧಿಕಾರಿ ತಿಳಿಸಿದ್ದಾರೆ. 

‘ಕೇಂದ್ರ ಗೃಹಸಚಿವಾಲಯ ಈ ಕಿಟ್‌ಗಳನ್ನು ಖರೀದಿಸಿದ್ದು, ಆರಂಭದಲ್ಲಿ ಆಯ್ದ ಕೆಲವು ಪೊಲೀಸ್ ಠಾಣೆಗಳಿಗೆ ತಲಾ 5 ಕಿಟ್‌ಗಳನ್ನು ನೀಡಲಾಗುತ್ತದೆ. ಈ ವಿಷಯದಲ್ಲಿ ತಮ್ಮ ಕೊಡುಗೆ ನೀಡುವಂತೆ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಲಾಗಿದೆ’ ಎಂದು ಡಬ್ಲ್ಯುಸಿಡಿ ಅಧಿಕಾರಿ ಹೇಳಿದ್ದಾರೆ. 

‘ತ್ವರಿತಗತಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಸಾಕ್ಷ್ಯ ಸಂಗ್ರಹಿಸಲು ನೆರವಾಗುವಂತೆ ಈ ಕಿಟ್ ಸಿದ್ಧಪಡಿಸಲಾಗಿದೆ. ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ನಿಖರವಲ್ಲದ ಸಾಕ್ಷ್ಯಗಳೇ ಪ್ರಯೋಗಾಲಯ ತಲುಪುತ್ತವೆ. ಇದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅವರು ವಿವರಿಸಿದ್ದಾರೆ.

ದೇಶದಾದ್ಯಂತ ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳಲ್ಲಿ ಶೇ 12ರಷ್ಟು ಅತ್ಯಾಚಾರ ಪ್ರಕರಣಗಳಾಗಿರುತ್ತವೆ ಎಂದು ಸರ್ಕಾರದ ಅಂಕಿ ಅಂಶ ತಿಳಿಸುತ್ತದೆ.

ಕಿಟ್‌ನಲ್ಲಿ ಏನಿವೆ?
*ಪ್ರತಿ ಕಿಟ್‌ನಲ್ಲಿ ಟೆಸ್ಟ್‌ ಟ್ಯೂಬ್ ಹಾಗೂ ಬಾಟಲ್‌ಗಳು

*₹200ರಿಂದ ₹300 ಪ್ರತಿ ಕಿಟ್ ಮೌಲ್ಯ

ಬಳಕೆ ಹೇಗೆ?
ಸಂತ್ರಸ್ತರ ರಕ್ತ, ವೀರ್ಯ ಹಾಗೂ ಬೆವರು ಸೇರಿದಂತೆ ವಿವಿಧ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಸುರಕ್ಷಿತವಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ. ಮಾದರಿ ಸಂಗ್ರಹಿಸಿದ ಸಮಯ ಹಾಗೂ ವೈದ್ಯರು, ತನಿಖೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಯ ವಿವರ ಈ ಕಿಟ್‌ನಲ್ಲಿ ಇರಲಿವೆ. 

‘13 ಸಾವಿರ ಪ್ರಕರಣಗಳಲ್ಲಿ ಪರೀಕ್ಷೆ ನಡೆದಿಲ್ಲ’
‘ದೇಶದ ಪ್ರಯೋಗಾಲಯಗಳ ಸಾಮರ್ಥ್ಯ ಕಡಿಮೆ ಇರುವುದರಿಂದ ಪ್ರತಿವರ್ಷ 13 ಸಾವಿರ ಅತ್ಯಾಚಾರ ಪ್ರಕರಣಗಳಲ್ಲಿ ವಿಧಿವಿಜ್ಞಾನ ಪರೀಕ್ಷೆ ನಡೆದೇ ಇಲ್ಲ’ ಎಂದು ಡಬ್ಲ್ಯುಸಿಡಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. 

‘ವಿಧಿವಿಜ್ಞಾನ ಪ್ರಯೋಗಾಲಯಗಳು ಕೇವಲ 1500 ಜನರನ್ನು ಪರೀಕ್ಷೆಗೊಳಪಡಿಸುವ ಸಾಮರ್ಥ್ಯ ಹೊಂದಿವೆ. ನಿರ್ಭಯಾ ನಿಧಿ ಹಾಗೂ ಗೃಹಸಚಿವಾಲಯದ ನೆರವಿನಿಂದ ಹೊಸದಾಗಿ 5 ಪ್ರಯೋಗಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಪರೀಕ್ಷಾ ಸಾಮರ್ಥ್ಯ 20 ಸಾವಿರ ಜನರಿಗೆ ಏರಿಕೆಯಾಗಲಿದೆ’ ಎಂದು ಅವರು ವಿವರಿಸಿದ್ದಾರೆ.  

ರಾಜ್ಯಗಳು ಈ ‘ಅತ್ಯಾಚಾರ ತನಿಖಾ ಕಿಟ್‌’ಗಳನ್ನು ಖರೀದಿಸಿ ಪೊಲೀಸ್‌ ಠಾಣೆಗಳಿಗೆ ವಿತರಿಸಬೇಕು ಎಂದು ಮೇನಕಾ ಈಚೆಗಷ್ಟೆ ಹೇಳಿದ್ದರು. 

***

ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆಗಾಗಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಸಚಿವಾಲಯ ಮುಂದಾಗಿದೆ.
 –ಮೇನಕಾ ಗಾಂಧಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು