ಮಂಗಳವಾರ, ಡಿಸೆಂಬರ್ 10, 2019
19 °C

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹುಟ್ಟಿದ ಮನೆಗೆ ₹ 4.35 ಕೋಟಿ ತೆರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಯಾಗರಾಜ್: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜನಿಸಿದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಆನಂದ್ ಭವನ್‌ಗೆ 4.35 ಕೋಟಿ ಮನೆ ತೆರಿಗೆಯ ನೋಟಿಸ್ ನೀಡಲಾಗಿದೆ. 

ವಸತಿಯೇತರ ವಿಭಾಗದಡಿಯಲ್ಲಿ ತೆರಿಗೆ ವಿಧಿಸಲಾಗಿದ್ದು, 2013ರಿಂದಲೂ ತೆರಿಗೆ ಪಾವತಿಸಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಆನಂದ್ ಭವನ್ ಗಾಂಧಿ ಕುಟುಂಬದವರಿಗೆ ಸೇರಿದ ಮನೆಯಾಗಿದ್ದು, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಜವಾಹರಲಾಲ್ ನೆಹರು ಮೆಮೋರಿಯಲ್ ಟ್ರಸ್ಟ್ ಇದನ್ನು ನಡೆಸುತ್ತಿದೆ. 

ಸುದ್ದಿಸಂಸ್ಥೆ ಎಎನ್‌ಐನೊಂದಿಗೆ ಮಾತನಾಡಿದ ಪ್ರಯಾಗರಾಜ್‌ ನಗರಸಭೆಯ ಮುಖ್ಯ ತೆರಿಗೆ ಮೌಲ್ಯಮಾಪನ ಅಧಿಕಾರಿ ಪಿ.ಕೆ.ಮಿಶ್ರಾ, ನಗರಸಭೆ ಕಾಯ್ದೆ ಮತ್ತು ಆಸ್ತಿ ತೆರಿಗೆ ನಿಯಮಗಳ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

"ಮನೆಯ ತೆರಿಗೆ ಮೊತ್ತವನ್ನು ನಿರ್ಧರಿಸಲು ಒಂದು ಸಮೀಕ್ಷೆ ನಡೆಸಿ ಮೌಲ್ಯಮಾಪನದ ಬಗ್ಗೆ ಆಕ್ಷೇಪಣೆಯನ್ನು ಆಹ್ವಾನಿಸಿದ್ದೆವು. ಆದರೆ ಯಾವ ಆಕ್ಷೇಪಣೆಯೂ ಸ್ವೀಕಾರವಾಗಿಲ್ಲ. ನಂತರ ನಾವು ನಮ್ಮ ಮೌಲ್ಯಮಾಪನವನ್ನು ಅಂತಿಮಗೊಳಿಸಿದ್ದೇವೆ ಮತ್ತು ನೋಟಿಸ್ ಕಳುಹಿಸಿದ್ದೇವೆ" ಎಂದು ಮಿಶ್ರಾ ಹೇಳಿದರು.

ನಗರಸಭೆ ಮೇಯರ್ ಚೌಧರಿ ಜಿತೇಂದ್ರ ನಾಥ ಸಿಂಗ್ ಮಾತನಾಡಿ, ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ಎಲ್ಲ ರೀತಿಯ ತೆರಿಗೆಯಿಂದಲೂ ವಿನಾಯಿತಿ ಪಡೆದಿರುವುದರಿಂದಾಗಿ ಆನಂದ್ ಭವನ್‌ಗೆ ಕೂಡ ತೆರಿಗೆಯನ್ನು ವಿಧಿಸಲು ಆಗುವುದಿಲ್ಲ. ಆದರೆ ಈಗ ತೆರಿಗೆ ವಿಧಿಸಿರುವುದು ತಪ್ಪು. ಈ ಕಟ್ಟಡ ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ಅಡಿಯಲ್ಲಿ ಬರುತ್ತದೆ. ಇದೊಂದು ಸ್ವಾತಂತ್ರ್ಯ ಹೋರಾಟದ ಸ್ಮಾರಕ ಮತ್ತು ಸ್ಮರಣಾರ್ಥ ವಸ್ತು ಸಂಗ್ರಹಾಲಯವಾಗಿದೆ. ಇದು ಶಿಕ್ಷಣದ ಕೇಂದ್ರವಾಗಿದೆ ಎಂದು ಹೇಳಿದರು. 

ಆನಂದ್ ಭವನ್ ಮೇಲೆ ತೆರಿಗೆ ವಿಧಿಸಿರುವುದು ಬಿಜೆಪಿ ಸರ್ಕಾರದ ರಾಜಕೀಯ ಹಗೆತನವಾಗಿದೆ. ಆನಂದ್ ಭವನ್ ಸ್ವಾತಂತ್ರ್ಯ ಹೋರಾಟದ ದೇಗುಲ. ಕಾಂಗ್ರೆಸ್ ಮುಕ್ತ ಭಾರತ ಮತ್ತು ನೆಹರು ಮುಕ್ತ ವಿಶ್ವ ಮಾಡುವ ಬಿಜೆಪಿಯ ಅಜೆಂಡಾದ ಭಾಗವಾಗಿ ತೆರಿಗೆ ವಿಧಿಸಿದೆ ಎಂದು ನಗರದ ನಿವಾಸಿ ಅಭಯ್ ಅಶ್ವತಿ ತಿಳಿಸಿದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು