ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹಾರಕ್ಕೆ 3 ದಿನದ ಗಡುವು

ಖಾದ್ರಿಪುರ ರೈಲ್ವೆ ಅಂಡರ್‌ಪಾಸ್‌ ಅವ್ಯವಸ್ಥೆ ಪರಿಶೀಲಿಸಿದ ಶಾಸಕ ಕೆ.ಶ್ರೀನಿವಾಸಗೌಡ; ಪರಿಹಾರಕ್ಕೆ ಆದ್ಯತೆಯ ಭರವಸೆ
Last Updated 1 ಜೂನ್ 2018, 13:28 IST
ಅಕ್ಷರ ಗಾತ್ರ

ಕೋಲಾರ: ನಗರದ ಖಾದ್ರಿಪುರ ರೈಲ್ವೆ ಕೆಳ ಸೇತುವೆಯ (ಅಂಡರ್‌ಪಾಸ್‌) ಅವ್ಯವಸ್ಥೆಯನ್ನು ಗುರುವಾರ ಪರಿಶೀಲಿಸಿದ ಶಾಸಕ ಕೆ.ಶ್ರೀನಿವಾಸಗೌಡ ಸೇತುವೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಖಾದ್ರಿಪುರ ರೈಲ್ವೆ ಕೆಳ ಸೇತುವೆಯಲ್ಲಿ ನೀರು ಶೇಖರಣೆಯಾಗಿ ಸುತ್ತಮುತ್ತಲ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿದೆ.

ಮತ್ತೊಂದೆಡೆ ಖಾದ್ರಿಪುರ, ಕೇಶವನಗರ ಮತ್ತು ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಕೆವಿಎಸ್‌ ಕಲ್ಯಾಣ ಮಂಟಪ ಮುಂಭಾಗದ ರಸ್ತೆಯು ಮಳೆಗೆ ಕೆಸರು ಗದ್ದೆಯಂತಾಗಿದ್ದು, ಈ ಭಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಸಂಬಂಧ ಸ್ಥಳೀಯರು ಶಾಸಕರಿಗೆ ಕರೆ ಮಾಡಿ ಅಳಲು ತೋಡಿಕೊಂಡರು.

ಸ್ಥಳೀಯರ ಅಳಲಿಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ಶ್ರೀನಿವಾಸಗೌಡ ಅವರು ಕಲ್ಯಾಣ ಮಂಟಪ ಮುಂಭಾಗದ ರಸ್ತೆಯ ದುಸ್ಥಿತಿ ಮತ್ತು ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿಕೊಂಡಿರುವುದನ್ನು ಕಂಡು ಸಮಸ್ಯೆ ಪರಿಹರಿಸದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಸ್ಥಳೀಯರ ಅಳಲು: ‘ಪ್ರತಿ ಬಾರಿ ಮಳೆ ಬಂದಾಗ ಕೆಳ ಸೇತುವೆಯಲ್ಲಿ ಮೂರ್ನಾಲ್ಕು ಅಡಿ ನೀರು ನಿಂತು ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಹಳಿಯ ಪಕ್ಕದ ಪರ್ಯಾಯ ರಸ್ತೆಯು ಮಳೆಗೆ ಸಂಪೂರ್ಣ ರಾಡಿಯಾಗುತ್ತದೆ. ಹೀಗಾಗಿ ಸ್ಥಳೀಯರು ಹಳಿ ದಾಟಿಕೊಂಡು ಓಡಾಡುವಂತಾಗಿದೆ. ಹಳಿ ದಾಟುವ ವೇಳೆ ಮೂರ್ನಾಲ್ಕು ಮಂದಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯರು ಶಾಸಕರ ಬಳಿ ಅಳಲು ತೋಡಿಕೊಂಡರು.

‘ವಯೋವೃದ್ಧರು, ಮಹಿಳೆಯರು, ಮಕ್ಕಳು ಹಳಿ ದಾಟಲಾಗದೆ ಅಂಡರ್‌ಪಾಸ್‌ನ ಕೊಳಚೆ ನೀರಿನಲ್ಲೇ ಓಡಾಡುವಂತಾಗಿದೆ. ಕಲ್ಯಾಣ ಮಂಟಪ ಮುಂಭಾಗದ ಕಚ್ಚಾ ರಸ್ತೆಯನ್ನು ಯುಜಿಡಿ ಕಾಮಗಾರಿಗಾಗಿ ಅಗೆದು ಹಾಳು ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ದುರಸ್ತಿ ಮಾಡಿಲ್ಲ. ಸಂಪೂರ್ಣ ಕೆಸರುಮಯವಾಗಿರುವ ಆ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಅಂಡರ್‌ಪಾಸ್‌ನಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಜತೆಗೆ ಹಳಿಯ ಪಕ್ಕದ ಕಚ್ಚಾ ರಸ್ತೆಗೆ ಡಾಂಬರು ಹಾಕಿಸಬೇಕೆಂದು ನಗರಸಭೆ , ರೈಲ್ವೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಡಕ್‌ ಎಚ್ಚರಿಕೆ: ಸ್ಥಳೀಯರ ಅಹವಾಲು ಆಲಿಸಿದ ಶ್ರೀನಿವಾಸಗೌಡ, ‘ಅಂಡರ್‌ಪಾಸ್‌ನಿಂದ ನೀರು ಹೊರಗೆ ಹರಿದು ಹೋಗಲು ಪೈಪ್‌ಲೈನ್‌ ಹಾಕಿಸಿ. ನಗರಸಭೆ ಹಾಗೂ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಒಟ್ಟಾಗಿ ಮೂರು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಬೇಕು’ ಎಂದು ತಿಳಿಸಿದರು.

‘ಅಂಡರ್‌ಪಾಸ್‌ ಸಮಸ್ಯೆ ವಿಷಯವಾಗಿ ಸ್ಥಳೀಯರಿಂದ ಮತ್ತೊಮ್ಮೆ ದೂರು ಬಂದರೆ ಅಧಿಕಾರಿಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯೆ ಸಾಕಮ್ಮ, ಆಯುಕ್ತ ಶ್ರೀಕಾಂತ್, ಕೊಂಡರಾಜನಹಳ್ಳಿ ಗ್ರಾ.ಪಂ ಅಧ್ಯಕ್ಷ ಸಿರಾಜ್, ಪಿಡಿಒ ಕೆ.ಸಿ.ಬಾಲಾಜಿ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌, ಲೋಕೋಪಯೋಗಿ ಇಲಾಖೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.

**
ರೈಲ್ವೆ ಕೆಳ ಸೇತುವೆ ನಿರ್ಮಾಣವಾದ ದಿನದಿಂದಲೂ ಸಮಸ್ಯೆ ಇದೆ. ಈ ಸಂಬಂಧ ನಗರಸಭೆ, ರೈಲ್ವೆ ಇಲಾಖೆ ಹಾಗೂ ಗ್ರಾ.ಪಂ ಅಲೆದು ಚಪ್ಪಲಿ ಸವೆದವೇ ಹೊರತು ಸಮಸ್ಯೆ ಬಗೆಹರಿದಿಲ್ಲ
– ರಾಮಣ್ಣ, ಖಾದ್ರಿಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT