ಕರ್ನಾಟಕದ 2 ಸಂಸ್ಥೆಗಳಿಗೆ ಉತ್ಕೃಷ್ಟತೆ ಮನ್ನಣೆ

7
ಕೇಂದ್ರದ ಐಒಎ ಪಟ್ಟಿಯಲ್ಲಿ ಐಐಎಸ್‌, ಮಣಿಪಾಲ ಅಕಾಡೆಮಿ ಆಫ್‌ ಹಯರ್‌ ಎಜುಕೇಷನ್‌

ಕರ್ನಾಟಕದ 2 ಸಂಸ್ಥೆಗಳಿಗೆ ಉತ್ಕೃಷ್ಟತೆ ಮನ್ನಣೆ

Published:
Updated:
ಐಐಎಸ್‌ಸಿ

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಮಣಿಪಾಲ ಅಕಾಡೆಮಿ ಆಫ್‌ ಹಯರ್ ಎಜುಕೇಷನ್‌ ದೇಶದ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳು (ಇನ್ಸ್‌ಟಿಟ್ಯೂಟ್ಸ್‌ ಆಫ್‌ ಎಮಿನೆನ್ಸ್‌–ಐಒಇ) ಎಂದು ಗುರುತಿಸಲಾಗಿದೆ. 

ಈ ಎರಡು ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಐಒಇ ಸ್ಥಾನ ನೀಡಿದೆ. ಇದರಿಂದಾಗಿ ಈ ಸಂಸ್ಥೆಗಳು ಸರ್ಕಾರದ ನಿಯಂತ್ರಣ ವ್ಯವಸ್ಥೆಯ ಕಟ್ಟುಪಾಡುಗಳಿಂದ ಮುಕ್ತವಾಗಲಿವೆ. ಈ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಪೂರ್ಣ ಸ್ವಾಯತ್ತೆ ದೊರೆಯಲಿದೆ. 

ರಿಲಯನ್ಸ್‌ ಪ್ರತಿಷ್ಠಾನದ ಜಿಯೊ ಇನ್ಸ್‌ಟಿಟ್ಯೂಟ್‌ಗೆ ಹೊಸ ಉಪಕ್ರಮ ವಿಭಾಗದಲ್ಲಿ ಐಒಇ ಸ್ಥಾನ ಕೊಡಲಾಗಿದೆ.

ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಎನ್‌. ಗೋಪಾಲಸ್ವಾಮಿ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯು ಕಟ್ಟುನಿಟ್ಟಿನ ಪರಿಶೀಲನೆ ಬಳಿಕ ಉತ್ಕೃಷ್ಟ ಸಂಸ್ಥೆಗಳನ್ನು ಆಯ್ಕೆ ಮಾಡಿದೆ. 

ಐಒಇ ಸ್ಥಾನ ಪಡೆದ ಸಂಸ್ಥೆಗಳು

1. ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು

2. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಬಾಂಬೆ

3. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ದೆಹಲಿ

4. ಮಣಿಪಾಲ ಅಕಾಡೆಮಿ ಆಫ್‌ ಹಯರ್‌ ಎಜುಕೇಷನ್‌

5. ಬಿಟ್ಸ್‌ ಪಿಲಾನಿ, ರಾಜಸ್ಥಾನ

6. ಜಿಯೊ ಪ್ರತಿಷ್ಠಾನ

ಉದ್ದೇಶ ಏನು?: ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಐಒಇ ಸ್ಥಾನಮಾನ ನೀಡಿಕೆಯ ಹಿಂದಿನ ಉದ್ದೇಶ. ‘ಭಾರತದಲ್ಲಿ 800 ವಿಶ್ವವಿದ್ಯಾಲಯಗಳಿವೆ. ಆದರೆ, ಜಾಗತಿಕವಾಗಿ 100 ಅಥವಾ 200 ಶ್ರೇಣಿಯಲ್ಲಿ ಈ ಯಾವುದೇ ಸಂಸ್ಥೆಗಳು ಸ್ಥಾನ ಪಡೆದಿಲ್ಲ. ಐಒಇ ಸ್ಥಾನ ನೀಡಿಕೆಯಿಂದ ಜಾಗತಿಕ ಮಟ್ಟದ ಗುಣಮಟ್ಟ ಸಾಧಿಸುವುದು ಸಾಧ್ಯವಾಗಬಹುದು’ ಎಂದು ಮಾನವ ಸಂ‍ಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ. 

ಸರ್ಕಾರಿ ಸ್ವಾಮ್ಯದ 10 ಮತ್ತು ಖಾಸಗಿ ಕ್ಷೇತ್ರದ 10 ಸಂಸ್ಥೆಗಳಿಗೆ ಐಒಇ ಸ್ಥಾನ ನೀಡಲು ನಿರ್ಧರಿಸಲಾಗಿತ್ತು. ಡೀಮ್ಡ್‌ ವಿಶ್ವವಿದ್ಯಾಲಯಗಳ ವರ್ಗದಲ್ಲಿ ಮತ್ತೊಂದು ಉತ್ಕೃಷ್ಟ ವರ್ಗವನ್ನು ಸೃಷ್ಟಿಸುವುದು ಇದರ ಗುರಿ. ಮುಂದಿನ ಹತ್ತು ವರ್ಷಗಳೊಳಗೆ ಜಗತ್ತಿನ ನೂರು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಪಡೆಯುವ ಗುರಿ ಇರಿಸಿಕೊಳ್ಳಲಾಗಿದೆ. 

ಅರ್ಜಿ ಹಾಕಿದ್ದ ಕರ್ನಾಟಕದ ಸಂಸ್ಥೆಗಳು

ಮೈಸೂರು ವಿಶ್ವವಿದ್ಯಾಲಯ

ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಐಐಎಂ), ಬೆಂಗಳೂರು

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಸುರತ್ಕಲ್‌

ಜೆಎಸ್‌ಎಸ್‌ ಅಕಾಡೆಮಿ ಆಫ್‌ ಹಯರ್‌ ಎಜುಕೇಷನ್‌ ಅಂಡ್‌ ರಿಸರ್ಚ್‌

**

ಏನು ಪ್ರಯೋಜನ?: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮುಂದಿನ ಐದು ವರ್ಷದಲ್ಲಿ ಕೇಂದ್ರ ಸರ್ಕಾರ ₹1,000 ಕೋಟಿ ಅಭಿವೃದ್ಧಿ ಅನುದಾನ ನೀಡಲಿದೆ

ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಈ ಅನುದಾನ ನೀಡುವುದಿಲ್ಲ

ಹೊಸ ಕೋರ್ಸ್‌ಗಳನ್ನು ಆರಂಭಿಸಲು ಸಂಪೂರ್ಣ ಸ್ವಾಯತ್ತೆ ಇದೆ

ವಿದೇಶಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದು, ವಿದೇಶಿ ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳಬಹುದು

ವಿದೇಶಿ ಶಿಕ್ಷಣ ಸಂಸ್ಥೆಗಳ ಜತೆಗೆ ಸಹಭಾಗಿತ್ವಕ್ಕೆ ಸರ್ಕಾರದ ಅನುಮತಿಯ ಅಗತ್ಯ ಇಲ್ಲ

**

114 – ಅರ್ಜಿ ಸಲ್ಲಿಸಿದ್ದ ಸಂಸ್ಥೆಗಳು

20  – ಆಯ್ಕೆ ಮಾಡಲು ಉದ್ದೇಶಿಸಿದ್ದ ಸಂಸ್ಥೆಗಳ ಸಂಖ್ಯೆ

6 – ಈಗ ಆಯ್ಕೆ ಮಾಡಲಾಗಿರುವ ಸಂಸ್ಥೆಗಳು

***

ಈ ಸಂಸ್ಥೆಗಳು ಹೆಚ್ಚು ವೇಗವಾಗಿ ಬೆಳೆಯಲು ಇದು ನೆರವಾಗಲಿದೆ. ಕಾರ್ಯನಿರ್ವಹಣೆಯ ಅವಕಾಶಗಳನ್ನು ಇನ್ನಷ್ಟು ವೃದ್ಧಿಸಿ ಈ ಸಂಸ್ಥೆಗಳು ಜಾಗತಿಕ ಗುಣಮಟ್ಟದ ಸಂಸ್ಥೆಗಳಾಗಿ ಅಭಿವೃದ್ಧಿ ಹೊಂದಬಹುದು
ಪ್ರಕಾಶ್‌ ಜಾವಡೇಕರ್‌, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !