ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಗಿತ ಶೂರರಿಗೆ ಜೆಡಿಎಸ್‌ ಮಣೆ

56 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಪ್ರಕಟ
Last Updated 21 ಏಪ್ರಿಲ್ 2018, 4:25 IST
ಅಕ್ಷರ ಗಾತ್ರ

ಬೆಂಗಳೂರು: ಅಳೆದು ತೂಗಿ ಎರಡನೇ ಪಟ್ಟಿಯನ್ನು ಪ್ರಕಟಿಸಿರುವ ಜೆಡಿಎಸ್‌ 56 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್–ಬಿಜೆಪಿಯಿಂದ ವಲಸೆ ಬಂದ ಬಹುತೇಕರಿಗೆ ಟಿಕೆಟ್ ಕೊಟ್ಟಿದೆ. 126 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಈ ಹಿಂದೆಯೇ ಜೆಡಿಎಸ್‌ ಪ್ರಕಟಿಸಿತ್ತು.

ಪಕ್ಷದ ಹಿರಿಯ ನಾಯಕ ಪಿ.ಜಿ.ಆರ್. ಸಿಂಧ್ಯ ಅವರನ್ನು ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದಿಂದ, ಮೂಡುಬಿದಿರೆ ಕ್ಷೇತ್ರದಿಂದ ಮಾಜಿ ಶಾಸಕ ಅಮರನಾಥ ಶೆಟ್ಟಿ ಕಣಕ್ಕೆ ಇಳಿಯಲಿದ್ದಾರೆ.

ಕಾಂಗ್ರೆಸ್‌ನಿಂದ ಇತ್ತೀಚೆಗೆ ವಲಸೆ ಬಂದಿರುವ ಮಾಜಿ ಸಂಸದ ಹಾಗೂ ಚಿತ್ರನಟ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಬಿಜೆಪಿಯಿಂದ ಬಂದಿದ್ದ ಮಾಜಿ ಶಾಸಕರಾದ ಹೇಮಚಂದ್ರ ಸಾಗರ್‌ (ಚಿಕ್ಕಪೇಟೆ), ಪ್ರಕಾಶ್ ಖಂಡ್ರೆ (ಭಾಲ್ಕಿ) ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಜಿ.ಎಚ್‌. ರಾಮಚಂದ್ರ (ರಾಜರಾಜೇಶ್ವರಿ ನಗರ) ಅವರ ಹೆಸರು ಪಟ್ಟಿಯಯಲ್ಲಿದೆ.

ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡಿರುವ ರಮೇಶ್ (ಸಿ.ವಿ.ರಾಮನ್ ನಗರ), ಅಲ್ತಾಫ್ ಖಾನ್‌(ಚಾಮರಾಜಪೇಟೆ), ಪ್ರಭಾಕರ ರೆಡ್ಡಿ (ಬೆಂಗಳೂರು ದಕ್ಷಿಣ), ಜೇಡರಹಳ್ಳಿ ಕೃಷ್ಣಪ್ಪ (ರಾಜಾಜಿನಗರ) ಟಿಕೆಟ್ ಗಿಟ್ಟಿಸಿರುವ ಪ್ರಮುಖರು.

ಟಿಕೆಟ್ ಬೇಡ ಎಂದ ನಿಂಬಣ್ಣವರ: ಟಿಕೆಟ್ ಕೊಡಲಿಲ್ಲ ಎಂದು ಬಂಡೆದ್ದವರ ಮಧ್ಯೆ ಟಿಕೆಟ್ ಕೊಟ್ಟರೂ ಪಕ್ಷೇತರನಾಗಿಯೇ ಕಣಕ್ಕೆ ಇಳಿಯುವುದಾಗಿ ಕಲಘಟಗಿಯ ಸಿ.ಎಂ. ನಿಂಬಣ್ಣನವರ ಪ್ರಕಟಿಸಿದ್ದಾರೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಿಂಬಣ್ಣವರ ಅವರಿಗೆ ಆ ಪಕ್ಷ ಟಿಕೆಟ್ ನೀಡಿರಲಿಲ್ಲ. ಅವರ ಜತೆ ಜೆಡಿಎಸ್ ನಾಯಕರು ಮಾತುಕತೆ ನಡೆಸಿದ್ದರು. ಪಕ್ಷ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ಅವರ ಹೆಸರಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಜೆಡಿಎಸ್‌ ನಿಂದ ನಾಮಪತ್ರ ಸಲ್ಲಿಸುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ’ ಎಂದು ತಿಳಿಸಿದ್ದಾರೆ.

ತರೀಕೆರೆ ಶ್ರೀನಿವಾಸ್ ಹೆಸರಿಲ್ಲ
ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ತರೀಕೆರೆ ಕ್ಷೇತ್ರದ ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್, ಎರಡು ದಿನದ ಹಿಂದೆ ಜೆಡಿಎಸ್ ಸೇರಿದ್ದರು. ಅವರು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಪ್ರಕಟಿಸಿದ್ದರು. ಪ್ರಕಟವಾಗಿರುವ ಪಟ್ಟಿಯಲ್ಲಿ ಈ ಕ್ಷೇತ್ರದಿಂದ ಶಿವಶಂಕರಪ್ಪ ಅಭ್ಯರ್ಥಿ ಎಂದು ಉಲ್ಲೇಖಿಸಲಾಗಿದೆ.

14 ನೇ ವಿಧಾನಸಭೆಯ ಶಾಸಕರಾಗಿದ್ದ ಶ್ರೀನಿವಾಸ್‌, ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮುನ್ನವೇ ಜೆಡಿಎಸ್ ಸೇರಿದ್ದರು. ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್ ತಕರಾರು ತೆಗೆದರೆ, ತಾಂತ್ರಿಕ ಸಮಸ್ಯೆ ಎದುರಾಗಲಿದೆ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT